ಒಂದು ಒಳ್ಳೆಯ ನುಡಿ - 126

ಒಂದು ಒಳ್ಳೆಯ ನುಡಿ - 126

‘ಗುರಿ’ ಯಾವಾಗಲೂ ನಮ್ಮ ನಡೆಯಲ್ಲಿರಬೇಕು. ನಿಜ ನುಡಿಯಲ್ಲಿರಬೇಕು. ‘ಛಲ’  ಸಾಧನೆಯಲ್ಲಿರಬೇಕು. ಗುರು ಹಿರಿಯರಿಂದ ನಾವು ಕೇಳಿ ತಿಳಿದ ವಿಚಾರಗಳು. ಒಂದು ರೀತಿಯಲ್ಲಿ ಈ ಮೂರು ವಿಚಾರಗಳೂ, ಬಲಿಯನ್ನು ಪಾತಾಳಕ್ಕೆ ತಳ್ಳಿದ ವಾಮನನ ಹೆಜ್ಜೆಗಳಂತೆ. ಈ ಮೂರು ವಿಚಾರಗಳಲ್ಲಿ ಪ್ರಪಂಚವೇ ಅಡಗಿದೆ, ಜ್ಞಾನದ ಹೊಳೆಯೇ ಹರಿದಿದೆ. ಆದರೆ ನಾವು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.

ಯಾವುದೋ ಒಂದು ಮಹತ್ತರ ಕಾರ್ಯಕ್ಕೆ ಹೊರಟಾಗ ಸ್ಪಷ್ಟ ಗುರಿಯಿರಬೇಕು. ಇಲ್ಲದಿದ್ದರೆ ಮರ ಬಿಟ್ಟ ಕೋತಿಯಂತಾದೀತು. ಒಟ್ಟಾರೆ ಹಾರಿದರೆ ಹೇಗೆ? ಕೆಲಸ ಕೆಡಬಹುದು. ಮಾಡಬೇಕಾದ ಕೆಲಸ ಕಾರ್ಯಗಳ ಸ್ಪಷ್ಟತೆಯಿರಬೇಕು. ಸಮಯವನ್ನು, ಆಯುಷ್ಯವನ್ನು ಕೊಲ್ಲಬಾರದು. ನಮ್ಮ ನಾಲಗೆ ಒಂದೇ ಇರುವುದು. ‘ಎಲುಬಿಲ್ಲದ ನಾಲಗೆ’ ತಿಳಿದೇ ಇದೆ. ಸುಳ್ಳನ್ನು ಹೇಳಿ ಸಿಕ್ಕಿ ಬೀಳುವುದಕ್ಕಿಂತ ಹೇಳದಿರುವುದೇ ಉತ್ತಮ. ಇತರರನ್ನು ಚುಚ್ಚುವಂತೆ, ಮನಸ್ಸಿಗೆ ಘಾಸಿಯಾಗುವಂತೆ, ನೋವುಂಟುಮಾಡುವ, ವ್ಯಂಗ್ಯ, ಲೇವಡಿಯ ಮಾತುಗಳ್ಯಾಕೆ? ಮನಸಾಕ್ಷಿಗಾದರೂ ಹೆದರಬೇಕು. ಅದೂ ಇಲ್ಲದವರೂ ಇದ್ದಾರೆ. ವಿಶ್ವಾಸದ ನುಡಿಗಳು ಹಿತಕರ.

ಸಾಧನೆಗೆ ವಯಸ್ಸಿಲ್ಲ. ಸಾಧಿಸುವುದನ್ನು ನಮ್ಮ ಮಕ್ಕಳಿಗೂ ಹೇಳಿಕೊಡಬೇಕು.’ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ದುಡಿಯಬೇಕು, ಗಳಿಸಬೇಕು, ಉಣ್ಣಬೇಕು. ಮಾನಸಿಕ ಛಲ ಮತ್ತ ಬಲ ದೃಢವಾಗಿರಬೇಕು. ಪ್ರಯತ್ನವೇ ಇಲ್ಲದವರಿಗೆ ಫಲ ಎಲ್ಲಿಂದ? ‘ಮರಳಿ ಯತ್ನವ ಮಾಡು ಫಲವನ್ನು ಪಡೆ’. ಅಲ್ಲವೇ?

*ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಬೂಷಣಂ ಭೂಷಣಂ/* ಹೊರಗಿನ  ತೋರಿಕೆಯ ಆಡಂಬರಗಳು ಶಾಶ್ವತವಲ್ಲ. ನಶಿಸಿಹೋಗಬಹುದು. ನಿಜವಾದ ಆಭರಣ ಚಿರಾಯುವಾಗಿರುವುದು ಒಂದು ಒಳ್ಳೆಯ ಮಾತು. ವಿನಯ, ವಿಧೇಯತೆ, ನಮ್ರತೆ ಸವಿಮಾತುಗಳೇ ಮಾನವಗೆ ಭೂಷಣ. ವಿವೇಚನಾರಹಿತವಾಗಿರುವವರ ಹತ್ತಿರ ವ್ಯವಹರಿಸುವಾಗ ಜಾಗರೂಕರಾಗಿರಬೇಕು. ಅವರು ಆಚೆಯೂ ಈಚೆಯೂ ಎರಡೂ ಕಡೆಗೆ ವಾಲುವವರು. ಸ್ಥಿರತೆಯಿಲ್ಲ. ಸಿಕ್ಕಿ ಬೀಳುವುದು ನಡುವೆ ನಿಂತವರು. ಎಲ್ಲವೂ ನಮ್ಮ ಮಾತಿನಲ್ಲಿ ಅಡಗಿದೆ ಎಂಬುದನ್ನು ಮರೆಯಬಾರದು. ಇದೆಲ್ಲವೂ ಒಂದು ತಪಸ್ಸಿಗೆ ಸಮ. ಜಾಣ್ಮೆಯೂ ಇರಬೇಕು.’ಯಾವಾಗ, ಎಲ್ಲಿ, ಹೇಗೆ, ಯಾರಹತ್ತಿರ’  ಎಂಬ ಪ್ರಜ್ಞೆಯಿಂದ ಮಾತನಾಡಿದರೆ ಒಳಿತು. ಮಾತು ಮುತ್ತಾಗದೆ ಮೃತ್ಯುವಿನವರೆಗೂ ತಲುಪಬಹುದು. ಹಾಗಾಗಿ ಎಚ್ಚರಿಕೆ, ಹಿಡಿತ ಎರಡೂ ನಾಲಗೆಯಿರಲಿ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗೋಣ ಆಗದೇ?

-ರತ್ನಾಕೆ ಭಟ್ ತಲಂಜೇರಿ, (ಶ್ಲೋಕ: ನೀತಿ ಶತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ