ಒಂದು ಒಳ್ಳೆಯ ನುಡಿ - 127

ಒಂದು ಒಳ್ಳೆಯ ನುಡಿ - 127

‘ಗುರಿ ಮುಂದೆ ಗುರು ಹಿಂದೆ ಇರಬೇಕಂತೆ’. ಅವೆರಡೂ ಇದ್ದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಅವೇ ಇಲ್ಲ ಎಂದಾದರೆ ಮನದಲ್ಲಿ ವಕ್ರತೆ ಮೂಡಿ ಸಾಗುವ ಹಾದಿ ಸಹ ಅಂಕುಡೊಂಕುಗಳಿಂದ ಕೂಡಿ ದಡ ತಲುಪದು. ಪ್ರತಿಯೋರ್ವನೂ ದಡವನ್ನು ತಲುಪಬೇಕು. ಹೇಗೆ? ನಡೆ- ನುಡಿ, ಶುದ್ಧತೆ -ಬದ್ಧತೆ, ರೀತಿ-ನೀತಿ, ನಿಯಮ ಇದಿಲ್ಲದೆ ದಾಟುವುದು, ತಲುಪುವುದು ಅಸಾಧ್ಯ. ಪುಟ್ಟ ಮಗು ಎದ್ದು ಬಿದ್ದು ನಡೆಯುವಾಗ ಮನೆಯ ಹಿರಿಯರು ಸರಿಯಾದ ಕ್ರಮವನ್ನು ಕಲಿಸುವರು. ಮುಂದೆ ಶಾಲೆಯಲ್ಲಿ ಗುರುಮುಖೇನ ಕಲಿಯುವನು. ಮನೆ, ಪರಿಸರ, ಸಮಾಜ, ಗುರು, ಸ್ನೇಹಿತ ಬಳಗ, ಕಛೇರಿ ಹೀಗೆ ಓರ್ವ ಪರಿಪೂರ್ಣ ಮನುಷ್ಯನಾಗುವನು. ಆದರೆ ನಿಯಮವೇ ಇಲ್ಲದೆ ಆತ ಸಾಗಿದಾಗ ಕಳ್ಳನೋ, ಸುಳ್ಳನೋ, ಸಮಾಜ ಘಾತುಕನೋ, ಪರಪೀಡಕನೋ ಆಗಬಹುದು. ತಲೆಯಲ್ಲಿ ಬೇಡದ ವಿಷಯಗಳಿಗೆ ಹೆಚ್ಚು ಸ್ಥಳ ಆತ ನೀಡಿಯಾನು. ಆತನ ಮನಸ್ಸು ಸಹ ಬೇಡದ್ದನ್ನೇ ಆಲೋಚಿಸುತ್ತದೆ. ನೀತಿ ನಿಯಮವೆಂಬ ಕಟ್ಟುಪಾಡುಗಳೊಳಗೆ ನಾವೆಲ್ಲರೂ ವ್ಯವಹರಿಸಬೇಕಾಗುತ್ತದೆ. ಅದನ್ನು ಮೀರಿ ಹೋಗಬಾರದು. ಹೋದಲ್ಲಿ ಅನಾಹುತ ತಪ್ಪಿದ್ದಲ್ಲ. ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಲ್ಲಿ ಒಳ್ಳೆಯ ಮನುಷ್ಯನಾಗಲು ಸಾಧ್ಯ. ಪ್ರಕೃತಿ ಎಂದಾದರೂ ತನ್ನ ನಿಯಮ ಮೀರಿದೆಯೇ? ಇಲ್ಲ. ಮಾನವರ ಸ್ವಾರ್ಥಕ್ಕೆ ಬಲಿಯಾಗಿ, ತಾಳ ತಪ್ಪಿದೆ. ಸೂರ್ಯ ಚಂದ್ರರು ನಿಯಮ ತಪ್ಪಿದರೆ ಏನಾಗಬಹುದು? ಊಹಿಸಲೂ ಸಾಧ್ಯವಿಲ್ಲ. ‘ಸಮ್ಯಕ್ ವಾಚ, ಸಮ್ಯಕ್ ಕರ್ಮ, ಸಮ್ಯಕ್ ಆಜೀವ’ ನಮ್ಮದಾಗಲಿ. ಒಳ್ಳೆಯ ಮಾತು, ಒಳ್ಳೆಯ ಕಾರ್ಯ, ಒಳ್ಳೆಯ ಬದುಕು ಇದು ನಮ್ಮದಾಗ ಬೇಕೆಂದರೆ ನೀತಿ, ನಡತೆ, ನಿಯಮ, ಗುರಿ, ಗುರು ಉಪೇಕ್ಷೆ ಸಲ್ಲದು. ನಾವು ವಿದ್ಯೆ ಕಲಿಯುವುದು ಯಾತಕ್ಕಾಗಿ? ಬರಿಯ ಡಿಗ್ರಿ ಸಂಪಾದನೆಯಲ್ಲ. ಬದುಕು ಮತ್ತು ಜ್ಞಾನಕ್ಕಾಗಿ. ಅನಕ್ಷರಸ್ಥರಿಗೂ ಜ್ಞಾನವಿದೆ. ಜೀವನ ಪಾಠವೇ ಅವರಿಗೆ ಎಲ್ಲವನ್ನೂ ಕಲಿಸಿದೆ. ‘ಗೋಡೆಗೆಸೆದ ಚೆಂಡು ಪುನ: ಎಸೆದಲ್ಲಿಗೆ ಬರುತ್ತದೆ ಅದು ನೆನಪಿದ್ದರೆ ಸಾಕು’ ತಾನು ಏನು  ಎಷ್ಟು ಎಂಬುದನ್ನು ಅರಿತು ವ್ಯವರಿಸಿದಾಗ ಸಂಘರ್ಷವಿಲ್ಲ, ಸಂಪ್ರೀತಿಯೇ ಎಲ್ಲ. ನಿಯಮವೊಂದು ಚೌಕಟ್ಟು, ಬೇಲಿ ಅದನ್ನು ದಾಟಿದರೆ ಅಪಾಯ. ದಾಟದ ಹಾಗಿರಲಿ ನಮ್ಮ ಗುಣನಡತೆ ಬದುಕು.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ