ಒಂದು ಒಳ್ಳೆಯ ನುಡಿ - 128

ಒಂದು ಒಳ್ಳೆಯ ನುಡಿ - 128

‘ಹಿಂಸೆ’ ಎಂದೊಡನೆ ನಮ್ಮ ತಲೆಗೆ ಬರುವ ವಿಷಯವೇ ಬೇರೆ. ಹಿಂಸೆ ಕೊಲ್ಲುವುದು ಎಂಬುದಾಗಿ. ಹಿಂಸೆಯಲ್ಲಿ ನಾನಾ ವಿಧಗಳಿವೆ, ದಾರಿಗಳಿವೆ. ಒಂದು ತುಂಬಿದ ಕುಟುಂಬದಲ್ಲಿ ಜೀವನ ಮಾಡಬೇಕೆಂದರೆ ಹಿಂಸೆಯ ಆಳ ಅಗಲ ಅರಿತರೆ ಮಾತ್ರ ಬದುಕು ಸುಂದರ. ಎಂಟು ದಿಕ್ಕಿನಿಂದಲೂ ಮನನೋಯಿಸುವ ಮಾತುಗಳು ಕಿವಿಗಳಿಗೆ ಬಿದ್ದರೆ ಏನಾಗಬಹುದು? ಅದರಿಂದ ದೊಡ್ಡ ಹಿಂಸೆ ಬೇರೊಂದಿರಲು ಸಾಧ್ಯವಿಲ್ಲ. ಇತರರಿಗೆ ನೋವುಂಟು ಮಾಡುವುದು ಹಿಂಸೆ. ಮನಸ್ಸಿಗೆ ಘಾಸಿ ಮಾಡುವುದು ಹಿಂಸೆ. ತಲೆಕಡಿಯುವುದು ಮಾತ್ರ ಹಿಂಸೆ ಎಂಬ ಭಾವನೆ ಕೆಲವು ಮಂದಿಗಿದೆ. ಕೆಟ್ಟ ಆಲೋಚನೆಗಳು, ಕೆಟ್ಟ ನಿರ್ಧಾರಗಳು, ಹೃದಯ ವೈಶಾಲ್ಯತೆ ಇಲ್ಲದಿರುವುದು, 'ನಾನು ಚೆನ್ನಾಗಿರಬೇಕು, ಅವನು ಏನು ಬೇಕಾದರೂ ಆಗಲಿ' ಎಂಬುದು, ಅಸೂಯೆ, ಮತ್ಸರ, ಹೊಟ್ಟೆಕಿಚ್ಚು, ಸುಳ್ಳುಗಳ ಸರಮಾಲೆ ಹೇಳುವುದು, ಮಾತುಗಳನ್ನು ಧಿಕ್ಕರಿಸುವುದು, ಬೇರೆಯವರಿಗೆ ಕೇಡು ಬಯಸಿ ಚಂದ ನೋಡುವುದು ಇವೆಲ್ಲವೂ ಹಿಂಸೆಯ ಕವಲುಗಳು. ನಾಲ್ಕು ಪೆಟ್ಟು ಕೊಟ್ಟರೆ ತಿನ್ನಬಹುದು, ಆದರೆ ಚುಚ್ಚಿ ಮಾತನಾಡಿ ಹಂಗಿಸಿದರೆ ಅದರಷ್ಟು ದೊಡ್ಡ ಹಿಂಸೆ ಬೇರೊಂದಿಲ್ಲ. ತರಗತಿಯೊಳಗೆ ಒಂದು ಮಗುವಿಗೆ ತಪ್ಪಿಗೆ ಹೊಡೆದರೆ ಅದು ಸಂಜೆ ಮರೆತು ಬಿಡುತ್ತದೆ. ಅದೇ ಮಾತುಗಳು ಮಗುವಿಗೆ ಮರೆತು ಹೋಗುವುದಿಲ್ಲ. ನಿಂದನೆಯ ಮಾತಿನ ಹಿಂಸೆ ಸರ್ವನಾಶ ಮಾಡಬಹುದು, ಮನೆ ಮನಸ್ಸು ಎರಡೂ ಹಾಳಾಗಬಹುದು. ಮನುಷ್ಯ ತನ್ನ ವ್ಯಕ್ತಿತ್ವವನ್ನೇ ಕಳಕೊಂಡಾನು. ಒಂದು ರೀತಿಯ ದಬ್ಬಾಳಿಕೆಯು ಸಹ ಹಿಂಸೆಯ ಪ್ರತಿರೂಪವೇ ಆಗಿದೆ. ದೌರ್ಜನ್ಯ ಎಸಗಿದರು ಎಂಬ ಪದವನ್ನು ಕೇಳ್ತೇವೆ. ಅದೂ ಹಿಂಸೆಯೇ. ಯಾವುದೇ ರೀತಿಯ ಹಿಂಸೆ ನೀಡದೆ ಜೀವಿಸುವವರು ಶಾಂತಿಯ ಪ್ರತಿಪಾದಕರು, ಜಗತ್ತಿನ ಕುರುಡು ಕಣ್ಣಿನ ಪಟ್ಟಿ ಸರಿಸುವವರು ಬಹಳಷ್ಟು ಜನ ಇದ್ದಾರೆ. ಅವರಿಂದ ಕಲಿಯುವುದು ತುಂಬಾ ಇದೆ. ನಮ್ಮ ನೆರೆಹೊರೆಯವರಿಗೆ, ಕುಟುಂಬ ಸದಸ್ಯರಿಗೆ, ನಾವು ಕೆಲಸ ಮಾಡುವ ಸ್ಥಳ, ನಮ್ಮ ವ್ಯವಹಾರ ಕ್ಷೇತ್ರದಲ್ಲಿ ಆದಷ್ಟೂ ಪರರಿಗೆ ನೋವು ಕೊಡದೆ ಇರಲು ಅಭ್ಯಾಸ ಮಾಡಿದರೆ ಅದರಷ್ಟು ಸಹಕಾರ ಇನ್ನೊಂದಿಲ್ಲ. ಹಿಂಸೆಯನ್ನು ಬೇರು ಸಹಿತ ಕಿತ್ತೆಸೆಯೋಣ, ಅಹಿಂಸೆಯ ಸಸಿಯನ್ನು ನೆಟ್ಟು ನೀರು, ಗೊಬ್ಬರ ಹಾಕಿ ಬೆಳೆಸೋಣ. ಶುಭ್ರತೆ, ಸ್ವಚ್ಛ, ಶುದ್ಧತೆಯ ಗಾಳಿ ಮನೆಮನಗಳಲಿ ಹರಡೋಣ.

-ರತ್ನಾ ಕೆ.ಭಟ್ ತಲಂಜೇರಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ