ಒಂದು ಒಳ್ಳೆಯ ನುಡಿ - 129
ನಮ್ಮ ಬಾಳಿನುದ್ದಕ್ಕೂ ನಮ್ಮೊಂದಿಗೆ ಬೆನ್ನು ಬಿಡದೆ ಬರುವ ಸ್ನೇಹಿತ ಎಂದರೆ ‘ಅಹಂ’ . ಅದ್ಯಾಕೊ ಅಹಂಕಾರವನ್ನು ತ್ಯಜಿಸಲು ಆಗುವುದೇ ಇಲ್ಲ. ಅದಿಲ್ಲವೆಂದಾದರೆ ನಾವು ಮನುಷ್ಯರೇ ಅಲ್ಲವೇನೋ ಅನ್ನಿಸಿಬಿಡುತ್ತದೆ. ನಮ್ಮ ತೀರ ಪರಿಚಯದವರು ಒಮ್ಮೊಮ್ಮೆ ಎಲ್ಲಿಯಾದರೂ ಕಾಣಸಿಕ್ಕಿದರೆ ನಾವು ಮುಗುಳ್ನಕ್ಕರೂ ಅವರು ನಗು ಬಿಡಿ ಮುಖ ಸಹ ನೋಡುವುದಿಲ್ಲ. ಆಗ ಜೊತೆಗಿದ್ದವರು ಹೇಳುವ ಮಾತು 'ನೋಡು ಅವನ/ಅವಳ ಅಹಂಕಾರ ಎಂಬುದಾಗಿ. ಈ ಅಹಂ ಎಂಬುದು ಒಂದು ವ್ಯಾಧಿ ಇದ್ದಂತೆ. ಒಮ್ಮೆ ಅಂಟಿದರೆ ಹೋಗಲಾರದು. ಹಲವಾರು ಮದ್ದುಗಳ ಪ್ರಯೋಗಕ್ಕೆ ಗುಣವಾಗದ ರೋಗ.
ಒಮ್ಮೊಮ್ಮೆ ಬಾನಲ್ಲಿ ಮೂಡುವ ಕಾಮನಬಿಲ್ಲಿನಂತೆ ಮಿಂಚಿ ಮರೆಯಾಗಿ, ಇನ್ನು ಯಾವಾಗಲೋ ಬರುತ್ತದೆ. ಅದಕ್ಕೆ ಕಾರಣವೇ ಬೇಡ. ‘ನಾನು, ನನ್ನದು’ ಎಂಬ ಅಹಂಕಾರ ಮೊದಲು ಬಿಡಬೇಕು. ಹಾಗಾದರೆ ಅಹಂನ ಮೂಲಬೇರನ್ನು ತೆಗೆಯಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಅಹಂ ಎನ್ನುವುದು ಹಲವಾರು ರೋಗಗಳಂತೆ. ದ್ವೇಷ, ಅಸೂಯೆ, ಸಿಟ್ಟು, ಸೆಡವು, ಕೋಪ, ರಾಗ, ದರ್ಪ, ಮತ್ಸರ, ಜಂಭ ಹೀಗೆ ಹಲವು ಸೇರಿದೆ. ಎಲ್ಲಿ ನೈತಿಕ ಮೌಲ್ಯಗಳ ಅರಿವು ನಮ್ಮಲ್ಲಿ ಮೂಡಲಾರದೋ ಅಲ್ಲಿವರೆಗೆ ಅಹಂಕಾರ ಶರೀರವನ್ನು ಬಿಟ್ಟು ಹೋಗದು. ಅಹಂಕಾರ ಒಗ್ಗಟ್ಟಾಗಿದ್ದ ಕುಟುಂಬಗಳನ್ನೇ ನಾಶ ಮಾಡಿದ್ದೂ ಇದೆ. ಜೀವಮಾನವಿಡೀ ದ್ವೇಷವನ್ನೇ ಕಾರಿಕೊಂಡು, ಸ್ವಾರ್ಥದ ಚಾಪೆಯನ್ನು ಹಾಸಿಕೊಂಡು ಬಂದವನೊಬ್ಬ ಎಷ್ಟು ಉತ್ತಮನೆನಿಸಿಕೊಂಡಾನು? ಅವನು ಕೇವಲ ಅವನು, ಅವನ ಹೆಂಡತಿ, ಅವನ ಮಕ್ಕಳು ಅವನ ಪ್ರಪಂಚದಲ್ಲಿ ಬೇರಾರಿಗೂ ಪ್ರವೇಶವಿಲ್ಲ. ಒಡಹುಟ್ಟುಗಳು, ಅವನ ಏಳಿಗೆಗೆ ಕಾರಣರಾದವರು ಅವನಿಗೆ ಬೇಡ. ಅಷ್ಟೂ ಸ್ವಾರ್ಥ ಮತ್ತು ಅಹಂ ಆತನ ಬಳಿ. ಎಲ್ಲಾ ತಿಳುವಳಿಕೆ ಮೂಡಿದಾಗ ಒಂದಷ್ಟು ಬಂಧುಗಳನ್ನು ಕಳಕೊಂಡಿರುತ್ತಾನೆ, ಪ್ರಾಯ ಸಂದಿರುತ್ತದೆ,ಮತ್ತೆ ಬೇಕಾದ್ದು ಜೀವಕ್ಕೊಂದಿಷ್ಟು ಅನ್ನ ಮತ್ತು ಬೇರೆಯವರ ಆಸರೆ. ದೂರ ಹೋದವರಾರು ಹತ್ತಿರ ಬರಲಾರರು. ‘ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದ ಹಾಗೆ’ ಆಗಬಹುದು.
ಹಾಗಾದರೆ ಇರುವಷ್ಟು ದಿನದ ಬದುಕಲ್ಲಿ ಎಲ್ಲರೊಂದಿಗೆ ಪ್ರೀತಿ ಹಂಚುತ್ತ ಇರೋಣ. ಅಹಂನ್ನು ದೂರ ಮಾಡಲು ಧ್ಯಾನ, ಪುಸ್ತಕಗಳ ಓದು, ಸತ್ಸಂಗ, ಭಜನೆ, ಎಲ್ಲರೊಂದಿಗೆ ಬೆರೆಯುವ ಹವ್ಯಾಸ, ಮುಖ್ಯವಾಗಿ ಆತ್ಮಶೋಧನೆ ಮಾಡಿಕೊಳ್ಳೋಣ. ‘ನಾನೇ ಎಂಬ ಭ್ರಾಂತಿ ಬೇಡ’ ಕೆಲಸ, ಹವ್ಯಾಸ ಎನ್ನುವ ಹೊಲದಲ್ಲಿ ನಿರಂತರ ಮನಸ್ಸನ್ನು ತೊಡಗಿಸಿದಾಗ ಸಾಧನೆ ಎಂಬ ಮೆಟ್ಟಿಲನ್ನು ಒಂದೊಂದೇ ಏರೋಣ. ಆಗ ಅಹಂಗೆ ಅಲ್ಲಿ ಅವಕಾಶವೇ ಬಾರದು. ಬಂದರೂ ಹತ್ತಿರ ಸೇರಿಸದಷ್ಟು ಮೌಲ್ಯವಂತರಾಗಿ, ಸ್ಥಿತಪ್ರಜ್ಞರಾಗಿರಬೇಕು. ಅಜ್ಞಾನವನ್ನು ದೂರಮಾಡಿ ಜ್ಞಾನದ ದೀಪವನ್ನು ಬೆಳಗಬೇಕು. ಕೃತಕ ಬೇಡ ನಮಗೆ. ನೈಜತೆ ಬೇಕು. ಅದನ್ನೇ ಬದುಕಿನಲ್ಲಿ ಆರಿಸೋಣ, ನಮ್ಮದಾಗಿಸಿಕೊಳ್ಳೋಣ.
-ರತ್ನಾಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ