ಒಂದು ಒಳ್ಳೆಯ ನುಡಿ (13) - ಅಸೂಯೆ

ಒಂದು ಒಳ್ಳೆಯ ನುಡಿ (13) - ಅಸೂಯೆ

ಅಸೂಯೆ ಎಂಬ ಬೀಜ ಬಿತ್ತಲ್ಪಟ್ಟು ಕ್ಷಣ ಮಾತ್ತದಲ್ಲಿ ಬೆಳೆದು ಹೆಮ್ಮರವಾಗಿ, ನಾಲ್ದೆಸೆಗೂ ಪಸರಿಸುತ್ತದೆ. ಕೆಟ್ಟದಕ್ಕೆ ಹೆಚ್ಚು ಹೊತ್ತು ಬೇಡ. ಅದೇ ಜಾಗದಲ್ಲಿ ಒಳ್ಳೆಯದನ್ನು ಮಾಡಲು, ಹೇಳಿಸಿಕೊಳ್ಳಲು ತಿಂಗಳಾದರೂ ಸಾಕಾಗದು. ಅಸೂಯೆ ಒಂದು ರೀತಿಯ ಕಾಸರಕದ ಕಾಯಿಯಂತೆ.

ಬೇರೆಯವರ ತಪ್ಪುಗಳನ್ನು ಮುಲಾಜಿಲ್ಲದೆ ಹೇಳುತ್ತೇವೆ. ನಮ್ಮ ತಪ್ಪುಗಳು ನಮ್ಮಲ್ಲಿಯೇ ಅಡಕವಾಗಿ ಬೆಚ್ಚಗೆ ಕೂತುಬಿಡುತ್ತವೆ. ಈ ತಪ್ಪು ಕಂಡು ಹಿಡಿಯುವುದು ಬಹು ಸುಲಭ. ಅದನ್ನೇ *ಅಸೂಯೆ*ಹೇಳ್ತೇವೆ. ತನ್ನಿಂದ ಹೆಚ್ಚು ಓದಿದವ, ಆಸ್ತಿವಂತ, ಕಾಣಲು ಸುರದ್ರೂಪಿ, ಸಮಾಜಮುಖಿ ವ್ಯಕ್ತಿ, ಪ್ರಸಿದ್ಧಿಗೆ ಬಂದವ ಇವುಗಳನ್ನೆಲ್ಲ ಕಂಡಾಗ ತನ್ನಿಂತಾನೆ *ಅಸೂಯೆ*ಬೇಡ ಅಂದರೂ ಬಂದೇ ಬರುತ್ತದೆ. ಶಾಲೆಯಲ್ಲಿ ಅಂಕಗಳ, ಸ್ಪರ್ಧೆಗಳ ವಿಚಾರದಲ್ಲಿ ಇದೆಲ್ಲ ಮಾಮೂಲು. ಅಧಿಕಾರ, ಸಂಪತ್ತು, ಗೌರವ ಇಲ್ಲಿಯೂ ಅಸೂಯೆ ನಾಟ್ಯವಾಡುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ಬಲಹೀನತೆ. ನಮ್ಮನ್ನು ನಾವೇ ಆಳೋಣ, ತಿದ್ದಿಕೊಳ್ಳೋಣ, ಪರಿಸ್ಥಿತಿಗೆ ಒಡ್ಡಿಸಿಕೊಳ್ಳೋಣ, ಹೊಂದಾಣಿಕೆ ಮಾಡಿಕೊಳ್ಳೋಣ. ಆಗ ಅಸೂಯೆ ನಮ್ಮ ಹತ್ತಿರ ಸಹ ಸುಳಿಯದು. ಎಲ್ಲವೂ ನಮ್ಮ ಕೈಯಲ್ಲಿದೆ. ಅಸೂಯೆ ಒಮ್ಮೆ ನಮ್ಮ ಶರೀರಕ್ಕೆ ಹೊಕ್ಕು, ಮನಸ್ಸಿನಲ್ಲಿ ತಳ ಊರಿದರೆ ನಾವು ಕೆಟ್ಟೆವು. ನಮ್ಮಲ್ಲಿರುವ ಒಳ್ಳೆಯ ಗುಣಗಳೆಲ್ಲನಾಶವಾಗುವುದು ಖಂಡಿತಾ.

ಪಶುತ್ವ, ರಾಕ್ಷಸತ್ವ ನಮ್ಮಲ್ಲಿ ಮನೆ ಮಾಡುತ್ತದೆ. ಅವನಲ್ಲಿ ಇರುವುದು ನನ್ನಲ್ಲಿ ಇಲ್ಲ ಈ ಭಾವನೆ ಹೋದರೆ ಅಸೂಯೆಗೆ ಎಡೆಯೇ ಇಲ್ಲ. ನನಗೆ ದೇವರು ಏನು ಕೊಟ್ಟಿದ್ದಾನೆ, ಅದೇ ಸಾಕು ಎಂಬುದು ಬಂದರೆ ಎಲ್ಲವೂ ಸುಸೂತ್ರವಾಗಿ ಆಗುತ್ತದೆ.

ಅಸೂಯೆ ಇದ್ದ ಮನುಷ್ಯ 24ಗಂಟೆಯೂ ಯೋಚಿಸಿ ರೋಗಕ್ಕೆ ತುತ್ತಾಗಲೂ ಬಹುದು. ತಲೆಯಲ್ಲಿ ಬೇಕಾದ್ದು ಇಲ್ಲದೆ ಬೇಡದ ಕಸವನ್ನೇ ತುಂಬಿಕೊಂಡರೆ, ಬದುಕು ದುರ್ಬಲವಾದೀತು.

ಇರುವುದರ ಬಗ್ಗೆ ಯೋಚಿಸೋಣ, ಇಲ್ಲದ್ದರ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ,*ಅಸೂಯೆ*ಎಂಬ ಕೆಟ್ಟ ಹುಳವ ಸಾಯಿಸಿಬಿಡೋಣ, ಮುಂದಕ್ಕೆ ಎಲ್ಲಾ ಒಳ್ಳೆಯದೇ ಆಗಬಹುದೆಂಬ ನಿರೀಕ್ಷೆಯಲ್ಲಿರೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್