ಒಂದು ಒಳ್ಳೆಯ ನುಡಿ - 131

ಒಂದು ಒಳ್ಳೆಯ ನುಡಿ - 131

ನಮ್ಮ ಆತ್ಮೀಯ ಬಂಧುಗಳು ಯಾರೆಂದು ಕೇಳಿದರೆ ಸ್ನೇಹಿತರನ್ನು, ನೆಂಟರಿಷ್ಟರನ್ನು ಹೇಳುವ ರೂಢಿಯಿದೆ. ಬಂಧುಗಳು ಎನ್ನುವುದಕ್ಕೆ ವಿಶಾಲ ಅರ್ಥವೂ ಇದೆ. ‘ಭಗವಂತನಿಗೂ’ ಬಂಧು ಹೇಳುತ್ತೇವೆ. ಭಗವಂತ ನಮ್ಮಲ್ಲೇ ಇರುವವ, ಅಷ್ಟೂ ಹತ್ತಿರದವ ಅಲ್ಲವೇ?

ಮಹಾಭಾರತದಲ್ಲಿ ಒಂದೆಡೆ ಧರ್ಮರಾಯನು ಬಂಧು ಎನ್ನುವುದಕ್ಕೆ’ಸತ್ಯವೇ ತಾಯಿ, ಜ್ಞಾನವೇ ತಂದೆ, ದಾನಧರ್ಮಾದಿಗಳೇ ಸಹೋದರರು, ದಯೆ ಅನುಕಂಪವೇ ಗೆಳತಿ, ಶಾಂತಿಯೇ ಧರ್ಮಪತ್ನಿ, ಸಹನೆಯೇ ಮಗು’ ಹೇಳುವುದನ್ನು ಓದಿದ ನೆನಪು. ಈ ಐದು ಪ್ರತಿಯೊಬ್ಬನಲ್ಲೂ ಅಡಕವಾಗಿರಬೇಕು. ಆತ ಜೀವನವನ್ನು ಪ್ರೀತಿಸಬೇಕು.

ಯಾರೋ ನಮ್ಮನ್ನು ಹೊಗಳಬೇಕೆಂದು ನಾವು ಕೆಲಸಮಾಡುವುದರಲ್ಲಿ ಅರ್ಥವಿಲ್ಲ. ಬರೆಯುವುದು ಅಷ್ಟೆ. ನಮ್ಮ ಆತ್ಮ ಸಂತೋಷಕ್ಕೆ ಬರೆಯುವ. ಬೇರೆಯವರನ್ನು ಓಲೈಸಲು, ಮೆಚ್ಚಿಸಲು ಬರೆಯುವುದು ಬೇಡ. ನಾವು ನಮ್ಮಲ್ಲಿರುವ ಜ್ಞಾನವನ್ನು, ಆಲೋಚನೆಗಳನ್ನು ಭಟ್ಟಿ ಇಳಿಸುವ ಕೆಲಸ ಮಾಡುತ್ತೇವೆ. ಅವರವರ ಮನೋಭಾವ, ಇಷ್ಟ ಆಗಬಹುದು, ಆಗದಿರಬಹುದು. ಒಬ್ಬ ಹೊಗಳಿದನೆಂದು ದೊಡ್ಡವರಾಗಲು ಸಾಧ್ಯವೇ?  ವ್ಯವಹಾರದಲ್ಲಿ, ಗುಣಶೀಲದಲ್ಲಿ ದೊಡ್ಡವರಾಗೋಣ. ಓರ್ವ ಜೀವನವಿಡೀ ಕೊಲೆಸುಲಿಗೆ ದರೋಡೆ ಮಾಡಿ ಸಂಪಾದಿಸಿದ ಐಶ್ವರ್ಯವನ್ನು ಬಿಡಿಗಾಸು ದಾನಮಾಡದವ, ಅವನಿಗೆ ಅನಾರೋಗ್ಯ ಕಾಡಿದಾಗ ಭಗವಂತನ ನೆನಪಾಗುತ್ತದೆ. ಮತ್ತೆ ದಾನ ಆರಂಭಿಸುತ್ತಾನೆ. ಏನು ಪ್ರಯೋಜನ? ಅದುವರೆಗೆ ಕೈಗಳಿಗೆ ಅಂಟಿದ ಬೇರೆಯವರ ರಕ್ತಕ್ಕೆ ಯಾವ ದೇವರೂ ಅನುಗ್ರಹಿಸಲಾರ. ಕಡೆಗಾಲಕ್ಕೆ ಬುದ್ಧಿಬಂದರೆ ಸುಖವಿಲ್ಲ. ಬಹುಶ: ದೇವರಿಗೆ ಅರ್ಪಿಸುವಾಗ ಒಳಗೊಳಗೆ ನಗಬಹುದು . ಸರಿಯಾದ ದಾರಿಯಲ್ಲಿ ಹೋದವಗೆ ಸಾಲಸೋಲ ಮಾಡದೆ ಒಂದು ಸಣ್ಣ ಸ್ವಂತಕ್ಕೆ ಮನೆ ಕಟ್ಟಲಾಗುವುದಿಲ್ಲ. ಹಾಗಾದರೆ ಬರುವ ಸಂಪಾದನೆಯಲ್ಲಿಯೇ ಐಷಾರಾಮಿ ಬದುಕು, ಮನೆ ಮಾಡ್ತಾನೆ ಎಂದಾದರೆ ಈ ಮೇಲಿನ ಐದು ಬಂಧುಗಳ ಮಾತುಗಳಿಗೆ ಅರ್ಥವಿಲ್ಲ. ನ್ಯಾಯದ ಸಂಪಾದನೆಯ ಜೀವನ ಸ್ವರ್ಗಕ್ಕೆ ಸಮಾನ. ಕಷ್ಟವೋ ಸುಖವೋ ತೃಪ್ತಿಯ ಬದುಕಿದೆ. ಅದರಲ್ಲೇ ಒಂದು ಹಿಡಿಯನ್ನು ದೀನರಿಗೆ ನೀಡಿದರೆ ಕೋಟಿ ಪುಣ್ಯಫಲ. ಅನ್ಯಾಯದ ಗಳಿಕೆ ವಿಷವಿದ್ದಂತೆ. ಅದರ ಸಹವಾಸ ಮಾಡಿದವರು ಒಮ್ಮೆಗೆ ಜಯಿಸಬಹುದು.ಶಾಶ್ವತವಲ್ಲ.

ದಾನದಿಂದ ನಮ್ಮ ಕೈಗಳಿಗೆ ಖಂಡಿತಾ ಶೋಭೆಯಿದೆ, ಹೊನ್ನಿನಾಭರಣ ಶೋಭೆ ಎಂದು ತಿಳಿದರೆ ಅದು ಕೇವಲ ಭ್ರಮೆಯಷ್ಟೆ. ಭ್ರಮೆಯಿಂದ ಹೊರಬಂದು ಬದುಕಲು ಕಲಿಯೋಣ. ನಮ್ಮ ಮಕ್ಕಳಿಗೆ ವಾಸ್ತವದ ಅರಿವು ಮೂಡಿಸುವ ಕೆಲಸವಾಗಬೇಕು. ಇಂದಿನ ಜೀವನಕ್ಕೆ ಅವಶ್ಯಕವಾಗಿರುವುದನ್ನೇ ಕೊಡಬೇಕು. ಹಿಂದಿನ ನಾಳೆಯ ಜೊತೆ ಇಂದಿನ ಪರಿಚಯವಾಗಬೇಕು. ಜೀವನ ಸೂತ್ರದ ಐದನ್ನು ಪರಿಪಾಲಿಸಿಕೊಂಡು ಬರೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ