ಒಂದು ಒಳ್ಳೆಯ ನುಡಿ - 136

ಒಂದು ಒಳ್ಳೆಯ ನುಡಿ - 136

ಕವಿಗಳೆಂದರೆ ಏನೋ ವಿಶೇಷತೆ ಇರುವವರು. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಬರೆದವರೆಲ್ಲ ಕವಿಗಳೆನಿಸಲು ಸ್ವಲ್ಪ ಕಷ್ಟವಿದೆ. ಸಣ್ಣ ಮಗುವಿನ ಕುತೂಹಲ ಕವಿಯ ನೋಟದಲ್ಲಿರಬೇಕು. ತಾಳ್ಮೆ, ಶ್ರದ್ಧೆ, ಅಚಲ ವಿಶ್ವಾಸವಿರಬೇಕು. ಬರೆದದ್ದರಲ್ಲಿರುವ ಜಳ್ಳು ಪೊಳ್ಳುಗಳ ಓದುಗರು ಒರೆಗೆ ಹಚ್ಚಿ, ವಿಮರ್ಶೆ ಮಾಡಿ, ಸಲಹೆಗಳನ್ನು ನೀಡಿದರೆ, ಅದನ್ನು ಸ್ವೀಕರಿಸುವ ಮನೋಭಾವ ಯಾರಿಗಿದೆಯೋ ಅವನು ಕವಿ ಎನಿಸಲು ಯೋಗ್ಯ. ಬಂದ ಸಲಹೆಗಳನ್ನು ಸ್ವೀಕರಿಸೋಣ. ಪ್ರಯತ್ನ ಹೀನರಿಗೆ ಯಾವುದೂ ಬೇಡ. ಕವಿಗಳು ಬರೆಯುವವರು ಒಂದು ರೀತಿಯಲ್ಲಿ ಸಮಾಜದ ಓರೆಕೋರೆಗಳನ್ನು ಕಂಡಾಗ ಅದನ್ನು ತಿದ್ದಲು ತಮ್ಮ ಕವಿತಾ ಸಾಮರ್ಥ್ಯ ಬಳಸಿ ಪ್ರಯತ್ನಿಸುವ ಸಂಪನ್ನರು. ಒಳ್ಳೆಯದು ಕೆಟ್ಟದ್ದು ಎರಡನ್ನೂ ಕೇಳಲು ತಮ್ಮ ಮನಸ್ಸನ್ನು ಹದಗೊಳಿಸಬೇಕು ಕವಿಯಾದವ. ‘ನಮ್ಮ ಐದು ಬೆರಳುಗಳು ಒಂದೇ ಹಾಗಿಲ್ಲ ಅಲ್ಲವೇ? ಆದರೆ ಆ ಐದೂ ಬೆರಳುಗಳು ಬೇಕಲ್ಲವೇ?’ ಅದೇ ರೀತಿ. ಮೌಲ್ಯಗಳು ಬರವಣಿಗೆಯಲ್ಲಿ ತೂಕದಿಂದ ಕೂಡಿರಬೇಕು. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಒಂದು ಚೌಕಟ್ಟಿದೆ. ಅದನ್ನು ಮೀರಬಾರದು. ಸಾಹಿತ್ಯ ಜೀವಿಗಳ ಮನಸ್ಸು ಕಂಡದ್ದು, ನೋಡಿದ್ದು, ಕೇಳಿದ್ದು, ಅನುಭವಗಳ ಬುತ್ತಿ ಹೀಗೆ ಎಲ್ಲದರಿಂದಲೂ ಬರೆಯುವ ತುಡಿತ-ಮಿಡಿತ ಇರುತ್ತದೆ. ಸಾಹಿತ್ಯವೆಂಬುದು ಸಜ್ಜನರ-ದುರ್ಜನರ ವಿವರಣೆ, ಆಕ್ಷೇಪಣೆ, ಒಳ್ಳೆಯತನ ಎನ್ನಬಹುದು. ಮನಸ್ಸಿನ ಭಾವನೆಗಳ ತಾಕಲಾಟ. ಅಂತರ್ ವಾಣಿ ಜೀವನ ಮೌಲ್ಯಗಳ ಬಿಂಬಿಸುತ್ತದೆ. ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಓದುಗನ ಆಯ್ಕೆ. ಹೆಸರು ಕೀರ್ತಿಗಾಗಿ ಸಾಹಿತ್ಯ ಬೇಕೇ? ಎಂಬ ಪ್ರಶ್ನೆಯಿದೆ. ಹೌದು ಆ ಮನೋಭಾವವೂ ಇರಬಹುದು ಹೇಳಲಾಗದು. ಆದರೆ ‘ಆತ್ಮತೃಪ್ತಿ’ ಎಂಬುದು ದೊಡ್ಡದು.

ದೇಹದ ರೋಗಕ್ಕೆ ಔಷಧ, ಯೋಗ, ಧ್ಯಾನ ಬೇಕು. ಬಡತನಕ್ಕೆ ಹಣ ಸಂಪಾದನೆ ಬೇಕು. ಕವನ, ಕವಿತೆ, ಲೇಖನಗಳಲ್ಲಿ ಪೂಜೆ, ಕೀರ್ತಿ, ಲಾಭ- ನಷ್ಟ ಸಾಮಾನ್ಯ. ಬಂದರೆ ಅವನ ಭಾಗ್ಯ. ಬಾರದಿರೆ ದು:ಖಿಸಬಾರದು ಅಷ್ಟೆ. ಕವಿತ್ವದಿಂದ ಭಾಷಾ ಸೌಂದರ್ಯ, ಮನೋರಂಜನೆ, ಲೋಕಪ್ರಜ್ಞೆ ಮೂಡಿದರೆ ಬರೆದದ್ದಕ್ಕೂ ಸಾರ್ಥಕ. ಗಿಡದಲ್ಲಿ ಹೂ ಅರಳುವಂತೆ, ಎಲೆಗಳು ಚಿಗುರುವಂತೆ, ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಮೂಡುವಂತಿರಲಿ ಸಾಹಿತ್ಯ. ನಾಲ್ಕು ಜನರ ಮನ ತಟ್ಟುವಂತಿರಲಿ, ಬದಲಾವಣೆಯ ಗಾಳಿ ಬೀಸಲಿ, ಸಾರ್ಥಕ್ಯ ಕಾಣೋಣವದರಲ್ಲಿ.

-ರತ್ನಾ ಕೆ.ಭಟ್ ತಲಂಜೇರಿ