ಒಂದು ಒಳ್ಳೆಯ ನುಡಿ -137
‘ಅರಿವು’ ಎಂದೊಡನೆ ಜ್ಞಾನ, ತಿಳುವಳಿಕೆ ಎಂಬುದೇ ಕಣ್ಣೆದುರಿಗೆ ಬರುವುದು ಸಹಜ. ಬುದ್ಧಿವಂತಿಕೆ, ಪ್ರಪಂಚ ಜ್ಞಾನವೆಂದು ಸಹ ಹೇಳಬಹುದು. ಬೇಡದ, ಕೆಟ್ಟ ಕೆಲಸವನ್ನು ಮಾಡಿದರೆ ಹೇಳುವುದಿದೆ ‘ಅವನಿಗೆ ಅಷ್ಟೂ ಗೊತ್ತಾಗುವುದಿಲ್ಲವೇ? ತಲೆಯಲ್ಲಿ ಜ್ಞಾನವಿಲ್ಲವೇ?’ ಎಂಬುದಾಗಿ. ಬುದ್ಧಿವಂತಿಕೆ ಇದೆ, ಆದರೆ ಸಕಾಲಕ್ಕೆ ಪ್ರಯೋಜನವಾಗುವುದಿಲ್ಲ. ಸಣ್ಣ ಮಗು ಮೊದಲು ತನ್ನ ತಾಯಿಯಿಂದ ಎಲ್ಲವನ್ನೂ ಕಲಿಯುತ್ತದೆ. ಆಮೇಲೆ ಮನೆಯ ಹಿರಿಯರ ನಡೆನುಡಿಯನ್ನು ಅನುಕರಣೆ ಮಾಡಲು ಆರಂಭಿಸುತ್ತದೆ. ಮುಂದೆ ಒಂದು ಹಂತದವರೆಗೆ ಗುರುಮುಖೇನ ಕಲಿಕೆ ಸಾಗುತ್ತದೆ. ಇಲ್ಲಿ ‘ಅಂತರಂಗದ’ ಅರಿವು ಯಾರು ಬೆಳೆಸಿಕೊಳ್ಳುವನೋ ಅವನು ಉನ್ನತ ಆದರ್ಶಗಳಿಂದ ಮೇರುವ್ಯಕ್ತಿತ್ವ ಹೊಂದುತ್ತಾನೆ. ತನಗೆ ಪರಿಸರದಿಂದ, ನೆರೆಹೊರೆಯಿಂದ ನಕಾರಾತ್ಮಕ ಧೋರಣೆಗಳು ಪೆಟ್ಟು ಕೊಡಬಹುದೆಂದು ಗೊತ್ತಾದ ತಕ್ಷಣ ತನ್ನ ಅರಿವನ್ನು ಪಸರಿಸಿ ವಿವೇಚನೆಯಿಂದ ವರ್ತಿಸಲು ಜಾಣನಾದವನು ಮುಂದೆ ಬಂದು ಜೀವನವನ್ನು ಸಮದೂಗಿಸಿಕೊಂಡು ಹೋದಾನು. ಓರ್ವನಿಗೆ ನಿಜವಾದ ಆಸ್ತಿಯೆಂದರೆ ತಿಳುವಳಿಕೆ. ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ಉನ್ನತಿಗೇರಬಹುದು. ಬೇರೆಯವರನ್ನು ನೋಡಿ ಕಲಿಯಬಹುದು. ಯಾರು ಏನು ಹೇಳಿದರೂ ತನ್ನ ವಿವೇಚನೆ, ಪ್ರಜ್ಞೆ ಎಂಬುದನ್ನು ಉಪಯೋಗಿಸಿದರೆ ಯಾವುದೇ ಅನಾಹುತಗಳಿಗೆ ದಾರಿಯಾಗದು. ಯಾರಿಗೆ ಸ್ವಂತ ಅರಿವು ಇಲ್ಲವೋ ಅಲ್ಲಿ ಕೆಟ್ಟದಾಗಲು ಕ್ಷಣಹೊತ್ತು ಸಾಕು. ಕಟ್ಟಿ ಕೊಟ್ಟ ಬುತ್ತಿಯ ಹಾಗೆ. ಅದು ಮುಗಿದಾಗ ಈತ ಹೊಂಡಕ್ಕೆ ಬಿದ್ದಾಗುತ್ತದೆ. ತನ್ನ ಗೋರಿ ತಾನೇ ತೋಡಿಕೊಂಡಂತೆ. ಪ್ರಕೃತ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ ಹಾಗೆ ಕಾಣಿಸುತ್ತಿದೆ. ತನ್ನ ಬದುಕಿನ ಹಾದಿಯಲ್ಲಿ ಅರಿವೇ ಗುರು ಎಂದು ತಿಳಿದವನು ಶ್ರೇಷ್ಠನೆನಿಸಿಕೊಳ್ಳಬಲ್ಲ. ವಿವೇಚನೆ ಸದಾ ದಿಗಂತಕ್ಕೆ ಒಯ್ಯಬಲ್ಲುದು. ನಮ್ಮೊಳಗಿರುವ ದಿವ್ಯತೆಯ ಸಾರವೇ ನಮ್ಮನ್ನು ಉತ್ತಮರಾಗಿಸಬಲ್ಲುದು. ಈ ಪ್ರಪಂಚ ಒಂದು ಗರಡಿ ಮನೆಯ ಹಾಗೆ. ಇಲ್ಲಿ ನಾವುಗಳು ಬಲಯುತರಾಗಿ, ಪಳಗಬೇಕು. ಹಣ್ಣುಗಳಿಂದ ತುಂಬಿದ ಮರದ ಗೆಲ್ಲುಗಳು ಬಾಗುತ್ತದೋ ಹಾಗೆಯೇ ಬಾಗಲು ಕಲಿಯೋಣ. ‘ತುಂಬಿದ ಕೊಡ ಯಾವತ್ತೂ ತುಳುಕದು’ ನಾವೆಲ್ಲರೂ ತುಂಬಿದ ಕೊಡಗಳಾಗೋಣ. ಉಕ್ಕಿನ ಶಿಸ್ತು ಪ್ರತಿಯೋರ್ವನಲ್ಲಿರಲಿ. ಅರಿವೆಂಬ ಮಂತ್ರವನ್ನು ಜಪಿಸೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ