ಒಂದು ಒಳ್ಳೆಯ ನುಡಿ - 139
ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್ನು ಮೂರಾಬಟ್ಟೆ ಮಾಡುವುದರಲ್ಲಿ ಸಂಶಯವಿಲ್ಲ.
ಒಮ್ಮೆ ನನ್ನ ಬಳಿ ಓರ್ವ ಮಹಿಳೆ ಭೇಟಿಯಾಗಿ ಹೇಳಿದಳು ‘ನನಗೆ ಗಂಡನಿಂದ ವಿಚ್ಛೇದನ ಕೊಡಿಸಿ ಟೀಚರೇ’ ಎಂಬುದಾಗಿ. ನನಗೆ ಆಶ್ಚರ್ಯವೂ, ಇನ್ನೊಂದೆಡೆ ಆಕೆಯ ಮೇಲೆ ಸ್ವಲ್ಪ ಸಿಟ್ಟೂ ಬಂತು. ನಾನು ಹೇಳಿದೆ "ಅಮ್ಮ, ನಾನು ಲಾಯರಲ್ಲ, ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ" ಎಂಬುದಾಗಿ. ಅವಳದ್ದು ಒಂದೇ ಹಠ, ಅವನೊಟ್ಟಿಗೆ ಬಹಳ ಕಷ್ಟ ಬಾಳಲಾರೆ ಎಂದು.
ಸಂಜೆ ಪುನಃ ಬರಲು ಹೇಳಿ ನಿಧಾನವಾಗಿ ವಿಷಯ ಕೇಳಿ ತಿಳಿದಾಗ ‘ಸಂದೇಹ, ಸಂಶಯ’ ಎರಡೂ ಇಣುಕಿ ಹ್ಯೊಕೈ ಆಗಿ ಕಡೆಗೆ ನನ್ನ ಬಳಿ ಬಂದಿದ್ದಳು. ಅಂತೂ ಇಬ್ಬರನ್ನೂ ಬರಲು ಹೇಳಿ, ಮುಖತಾ ಮಾತನಾಡಿ ಬುದ್ಧಿವಾದ ಹೇಳಿದೆ. ಈಗಲೂ ಕಣ್ಣೆದುರಿಗೆ ಚಂದದಲ್ಲಿ ಇದ್ದಾರೆ. ನಾನು ಹೇಳಿದೆ "ಒಬ್ಬ ಮಗ ಇದ್ದಾನೆ, ೧ನೇ ತರಗತಿ, ಮುಂದೆ ದೊಡ್ಡವನಾದಂತೆ ನಿಮ್ಮಿಬ್ಬರ ಬಗ್ಗೆ ತಿಳಿದಾಗ ಅವನಿಗೆ ಹೇಗೆ ಅನಿಸಬಹುದು, ಇಬ್ಬರನ್ನೂ ತುಚ್ಛೀಕರಿಸ್ತಾನೆ, ನಿಮ್ಮ ಕುರಿತಾಗಿ ಅಸಹ್ಯ ಪಟ್ಟಾನು. ನಿಮಗೆ ಆಗ ಬದುಕು ಬೇಕಾ?" ಹಾಗೆ ಆಗಬಾರದು ಹೇಳಿದರು ಒಂದೇ ಉಸುರಿಗೆ. ಆಕೆ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಳಂತೆ, ಅಲ್ಲಿ ಒಬ್ಬಾತ ಹೆಚ್ಚಾಗಿ ಮಾತನಾಡ್ತಾನೆ, ಗಂಡನ ಆರೋಪ. ಗಂಡನಿಗೆ ಸದಾ ಸಂಶಯ ಮನೋಭಾವ, ಅವನು ಬೇರೆ ಯಾರನ್ನೋ ಆಕೆಯ ಹಿಂದೆ ಛೂ ಬಿಟ್ಟಿದ್ದ. ಬೇರೆಯವರ ಮಾತು ಕೇಳಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಏನೆಲ್ಲಾ ಅನಾಹುತಕ್ಕೆ ಕಾರಣವಾಯಿತು. ಅವನು ಬರುತ್ತಿದ್ದ ಕಾರಣ, ಅವನ ಸಂಸಾರ ಸರಿಪಡಿಸಲು ಆಕೆಯ ಹತ್ತಿರ ಹೇಳಲು. ಕಷ್ಟವಾದಾಗ ಯಾರ ಹತ್ತಿರವಾದರೂ ಹೇಳಿಕೊಂಡಾಗ ಮನಸ್ಸು ಹಗುರವಾಗ್ತದೆ, ಅಷ್ಟೆ. ಈಕೆ ಎಷ್ಟು ಹೇಳಿದರೂ ಕೇಳದೆ ಹೀಗೆಲ್ಲ ಆಯಿತು.
ನಮ್ಮ ಬದುಕಿನಲ್ಲಿ ಇಂಥ ಸಣ್ಣಪುಟ್ಟ ಘಟನೆಗಳು ಆದಾಗ ನಾವು ನಾವೇ ಸರಿಪಡಿಸಿಕೊಂಡು ಮುಂದುವರಿಯಬೇಕಲ್ಲವೇ? ಮೂರನೆಯವರವರೆಗೆ ಹೋಗದಂತೆ ಜಾಗೃತೆ ವಹಿಸಬೇಕು. ಇಲ್ಲದಿದ್ದರೆ ನಾವೇ ಸಮಾಜಕ್ಕೆ ಡಂಗುರ ಸಾರಿದಂತಲ್ಲವೇ? ನಮ್ಮ ಮನೆಯ, ಮನದ ಹುಳುಕನ್ನು ಹೊರಗೆಡಹುವುದು ಎಷ್ಟು ಸರಿ? ಮನೆಯ ಮಜ್ಜಿಗೆ ತಾಳೆ ಮರದಡಿ ಕುಳಿತು ಕುಡಿದ ಹಾಗಾಯಿತು. ಅಪನಂಬಿಕೆ, ಸರಿಯಾಗಿ ತಿಳಿಯದಿರುವುದು, ಸಂದೇಹ ಬಿಟ್ಟು ಪರಸ್ಪರ ನಂಬಿಕೆ ಬೆಳೆಸಿಕೊಳ್ಳಬೇಕಲ್ಲವೇ? ಮನಸ್ಸುಗಳು ಮುರಿಯುವುದು ಎಷ್ಟು ಸರಿ? ಇರುವ ಒಂದು ಮನುಷ್ಯ ಜನ್ಮ, ಅದೂ ನಾಲ್ಕು ದಿನದ ಆಟವನ್ನು ಆದಷ್ಟೂ ಚಂದದಲ್ಲಿ, ಆರೋಗ್ಯಕರವಾಗಿ ನಗುನಗುತ್ತಾ ಅನುಭವಿಸೋಣ. ನಾವಾಗಿಯೇ ಬದುಕನ್ನು ಕಗ್ಗಂಟು ಮಾಡಿ ಜೇಡರ ಬಲೆಯೊಳಗೆ ಸಿಕ್ಕಿಸಿ ಹೊರಬರಲಾರದೆ ಒದ್ದಾಟ ಮಾಡುವುದು ಬೇಡ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ