ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ

ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ

ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು. ಯಾವುದೇ ಕಷ್ಟ ಬಂದಾಗ, ನೋವು ಪಟ್ಟಾಗ ಮಾತ್ರ ಭಗವಂತನನ್ನು ಸ್ಮರಿಸಿಕೊಳ್ಳುತ್ತೇವೆ.

ಹಾಗೆ ಸುಖ ಬಂದಾಗ, ಸಂತೋಷ ಆದಾಗಲೂ ನಾವು ದೇವರನ್ನು ನೆನಪಿಸಲೇ ಬೇಕಲ್ಲವೇ? ಆದರೆ ನಾವು ಹಾಗೆ ಮಾಡುವುದಿಲ್ಲ. ಕಾಲಿಗೆ ಕಲ್ಲು ತಾಗಿದಾಗ, ಮುಳ್ಳು ಚುಚ್ಚಿದಾಗ, ಎಲ್ಲೋ ಬಿದ್ದು ಪೆಟ್ಟಾದಾಗ,*ಅಯ್ಯೋ ಅಮ್ಮಾ*ಹೇಳುತ್ತೇವೆ.

ನಮ್ಮಲ್ಲಿಯೇ ಎರಡು ಯೋಚನೆಯ, ಭಾವನೆಯ, ಜನರಿದ್ದಾರೆ. ಒಂದು ವರ್ಗದವರು *ನಮ್ಮ ಉಸಿರೇ ದೇವರು,ಕಣ್ಣಿಗೆ ಕಾಣದ ಶಕ್ತಿ ಅವನು, ನಾವು ಏನು ಮಾಡಿದರೂ ಎಲ್ಲವನ್ನೂ ಅವನು, ನಮ್ಮ ಬೆನ್ನ ಹಿಂದೆ ನಿಂತು ನೋಡುತ್ತಾನೆ, ಭಗವಂತ ಎಲ್ಲೆಡೆಯೂ ಇದ್ದಾನೆ*ಹೇಳುವವರು. ಇವರು ಎಲ್ಲವನ್ನೂ ಧನಾತ್ಮಕವಾಗಿ ಯೋಚಿಸುತ್ತಾರೆ.ಪ್ರತಿ ಹೆಜ್ಜೆಯಲ್ಲೂ ತಮ್ಮನ್ನು ತಾವು ದೇವರಿಗೆ ಅರ್ಪಿಸಿಕೊಳ್ಳುತ್ತಾರೆ. ಅಂದರೆ ದೇವರ ಮೇಲೆ ಭಾರ ಹಾಕಿ, ತಮ್ಮ ಕರ್ತವ್ಯವನ್ನು ಮಾಡುತ್ತಿರುತ್ತಾರೆ.

ಇವರು ಸಾಧಕರು, ಮನಸ್ಸೆಂಬ ಆಯುಧ ನಮಗೆ ಭಗವಂತನ ಕೊಡುಗೆ. ಈ ಮನಸ್ಸನ್ನು ಚಂಚಲಗೊಳಿಸದೆ, ಸ್ಥಿರವಾಗಿಟ್ಟುಕೊಂಡು ವ್ಯವಹರಿಸುತ್ತಾರೆ. ಮನಸ್ಸಿನ ಮೇಲೆ ಬುದ್ಧಿಯ ಹಿಡಿತ ಯಾರಿಗಿದೆಯೋ, ಅವರು ಬದುಕಲ್ಲಿ ಗೆದ್ದ ಹಾಗೆ. ಇಂತಹ ವರ್ಗದ ಮನುಜರನ್ನು ದೇವನು ಸದಾ ಬೆನ್ನ ಹಿಂದೆ ನಿಂತು ಪೊರೆಯುತ್ತಾನೆ.

ಇನ್ನೊಂದು ವರ್ಗದವರು ಜನ್ಮತಾಃ ದೇವರನ್ನು ನಂಬದವರು. ಯಾರು ಹೇಳಿದ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದವರು. ಏನೇ ಕಷ್ಟ ನಷ್ಟ ಆದರೂ ನನ್ನ ಹಣೆಬರಹ, ಆ ಕಣ್ಣಿಗೆ ಕಾಣದ ಶಕ್ತಿ ಏನು ಮಾಡುವುದು ಅನ್ನುತ್ತಾರೆ. ದೇವರಿಗೆ ಅಗರಬತ್ತಿ ಹೊತ್ತಿಸಿದರೂ ಹಣ ಖರ್ಚು ಆಗುತ್ತದೆ ಎನ್ನುವವರೂ ಇದ್ದಾರೆ. ಹಿಂದಿನ ಪುರಾಣ, ಇತಿಹಾಸಗಳನ್ನು ಅವಲೋಕಿಸಿದರೆ, ಭಗವಂತ ನಮ್ಮ ಹಿಂದೆ ನಿಂತು ಸಹಾಯ ಮಾಡುವ ಅನನ್ಯ ಚೇತನ ಖಂಡಿತಾ. ದೇವರಿದ್ದಾನೆ ಎಂದಾದರೆ ಎಲ್ಲಾ ಸರಿ ಮಾಡಲಿ ಎನ್ನಬಹುದು. ಆದರೆ ಆತ ನಮ್ಮನ್ನು ಶೋಧಿಸಿ ಶುದ್ಧೀಕರಿಸಿ ಪರೀಕ್ಷೆ ಮಾಡುತ್ತಾನೆ.

ನಾವೆಲ್ಲರೂ ಕಣ್ಣಿಗೆ ಕಾಣದ ಆ ಶಕ್ತಿಯ ಆಶಯದಂತೆ ಬದುಕೋಣ. ಸತ್ಯ,ನ್ಯಾಯ, ಧರ್ಮ, ಸಹಕಾರ, ಅಹಿಂಸೆಯನ್ನು ಜೀವನದ ಹಾದಿಯಲಿ ಅಳವಡಿಸಿಕೊಂಡು, ಅದರಲ್ಲೇ ಭಗವಂತನನ್ನು ಕಾಣಲು ಪ್ರಯತ್ನಿಸೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ ನೆಟ್