ಒಂದು ಒಳ್ಳೆಯ ನುಡಿ - 142

ಒಂದು ಒಳ್ಳೆಯ ನುಡಿ - 142

ತಾನು ಮಾತ್ರ ಶ್ರೇಷ್ಠ, ಉಳಿದವರು ಏನೂ ಪ್ರಯೋಜನವಿಲ್ಲದವರೆಂಬ ಭಾವನೆಯನ್ನು ಒಪ್ಪತಕ್ಕದ್ದಲ್ಲ. ತಾನು ಬರೆದದ್ದೇ ವೇದವಾಕ್ಯ ಎನ್ನುವುದು ತಪ್ಪು. ನಮ್ಮ ಬರವಣಿಗೆ ಸಮಾಜಕ್ಕೆ ಸಂದೇಶವನ್ನು ಕೊಡುವಂತಿರಬೇಕು. ಓದುವಾಗ ಇನ್ನಷ್ಟು ಇಂತಹ ವಿಚಾರಗಳು ಬರಲಿ, ಜನಮಾನಸದಲ್ಲಿ ಉಳಿವಂತಾಗಲಿ ಎಂಬಂತಿರಬೇಕು. ಮನದಲಿ ಮೂಡಿದ, ಮೂಡುವ ಆಲೋಚನೆಗಳು, ಜೀವನಾನುಭವಗಳು, ಕಣ್ಣಿಗೆ ಕಂಡದ್ದು ಮತ್ತು ಕಾಣುವ, ಕಿವಿಯಾರೆ ಕೇಳಿದ ವಿಷಯಾನುಭವಗಳು, ಎಲ್ಲೋ ಯಾವಾಗಲೋ ಓದಿದ ನೆನಪುಗಳು, ವಾಸ್ತವತೆಗಳು, ಭೂತ -ಭವಿಷ್ಯತ್ -ವರ್ತಮಾನಗಳ ವಿಚಾರಧಾರೆಗಳೇ ನಮ್ಮ ಲೇಖನಿಯಿಂದ ಹೊರಹೊಮ್ಮುವುದು, ಸಾಮಾನ್ಯ. ಹಾಗೆಂದು ಯಥಾವತ್ತಾಗಿ ಇತರರ ಬರಹಗಳನ್ನು ಭಟ್ಟಿ ಇಳಿಸಿ ಮೆರೆಯುವುದು ತರವಲ್ಲ. 

ನಮ್ಮ ಸಾಮರ್ಥ ನಮ್ಮ ಬರವಣಿಗೆಯಾಗಿರಬೇಕು. ತಪ್ಪು ಒಪ್ಪುಗಳನ್ನು ಆಮೇಲೆ ತಿದ್ದಿಕೊಳ್ಳೋಣ. ಮಗು ಹುಟ್ಟಿದ ತಕ್ಷಣ ಎದ್ದು ನಡೆಯಲಾರದಲ್ಲವೇ ಎದ್ದು ಬಿದ್ದು ನಡೆಯಲು ಕಲಿಯುತ್ತದೆ. ಹಾಗೆಯೇ ಸಾಹಿತ್ಯದ ಕೆಲಸ ಸಹ. ಯಾವುದೇ ಒಂದು ಲಲಿತಕಲೆಗಳಾದರೂ ತಪ್ಪಾಗಿಯೇ ಮತ್ತೆ ಸರಿಯಾಗುವುದಲ್ಲವೇ? ಆದಷ್ಟೂ ಉತ್ತಮವಾದ ಬರವಣಿಗೆಯಾದರೆ, ಮುಂದೆ ಗುರು ಹಿರಿಯರ, ಹಿರಿಯ ಸಾಹಿತ್ಯ ಕೃಷಿ ಮಾಡುವವರ ಸಲಹೆ -ಸೂಚನೆಗಳೊಂದಿಗೆ ಮುಂದುವರಿದಾಗ ನಮ್ಮ ಬರವಣಿಗೆ ಉತ್ತಮವಾಗಿ ಹೊರಹೊಮ್ಮಬಲ್ಲುದೆಂಬ ವಿಶ್ವಾಸ ನಮಗಿರಬೇಕು. ಎಲ್ಲರ ಸಹಕಾರ ಪಡೆಯುವುದು ತಪ್ಪಲ್ಲ. ತಪ್ಪುಗಳನ್ನು ಹೇಳಿದಾಗ ತಿದ್ದಿಕೊಳ್ಳುವವನೇ ನಿಜವಾದ ಸಾಹಿತಿ. ಮೊಂಡುವಾದ ಸಲ್ಲದು. ಆತ ಬೆಳೆಯಲಾರ, ಸಾಧಿಸಲಾರ ಸಾಹಿತ್ಯದಲ್ಲಿ ಕೃತಿಚೌರ್ಯ ಅಕ್ಷಮ್ಯ ಅಪರಾಧ. ಅದೆಂದಿಗೂ ಸಲ್ಲದು. ಯಾರದ್ದೋ ಶ್ರಮವನ್ನು ತನ್ನದೆಂದು ಸಾರುವುದರಲ್ಲಿ ಅರ್ಥವಿದೆಯೇ? ತಾನು ಕಷ್ಟಪಡಬೇಕು ಸಮಾಜದಲ್ಲಿ ಗುರುತಿಸಲ್ಪಡಬೇಕು. ಸಾರಿಕೊಂಡು ಹೋಗುವುದು, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು, ಹಣದ ಪ್ರಭಾವ, ದೊಡ್ಡವರ ಹಿಂದೆ ಹೋಗಿ ವೇದಿಕೆಯೇರುವುದು ಇದೆಲ್ಲ ಓರ್ವ ಸಭ್ಯ ಬರಹಗಾರನಿಗೆ ಹೇಳಿಸಿದ್ದಲ್ಲ. ‘ನೇರದಾರಿ’ ನಮ್ಮ ಹಿರಿಯರು ನಮಗೆ ಕಲಿಸಿದವರು, ವಕ್ರದಾರಿ, ವಾಮಮಾರ್ಗ ಸಲ್ಲದು, ಅದು ಕ್ಷೇಮವೂ ಅಲ್ಲ. ನಮ್ಮ ಬೆನ್ನು ನಮಗೆ ಕಾಣದು ಆದರೆ ಬೇರೆಯವರಿಗೆ ಕಾಣುತ್ತದೆಯಲ್ಲವೇ? ಅದರ ಅರಿವು ನಮಗಿರಬೇಕು. ನಮ್ಮ ಬರವಣಿಗೆಯಲ್ಲಿ ಕಾಗುಣಿತ ದೋಷಗಳಿಲ್ಲದ ಹಾಗೆ ಪ್ರಯತ್ನಿಸುವುದು ಅಗತ್ಯ. ಎಷ್ಟೇ ಉತ್ತಮ ಬರಹವಾದರೂ ಅಕ್ಷರ ದೋಷಗಳಿದ್ದಾಗ ಬರಹ ರಂಜಿಸದು.

ನಮ್ಮ ಸಾಮರ್ಥ್ಯ ನಮ್ಮ ಬರಹ. ನಾಲ್ಕು ಜನ ಓದುವಂತಿರಲಿ ಆಗದೇ? ನಮ್ಮ ರಚನೆಗಳ ಬಗ್ಗೆ ಟೀಕೆಗಳು ಬಂದಾಗ ಅದರಲ್ಲಿ ಸತ್ಯಾಂಶ ಇದೆಯೆಂದಾದರೆ ಸ್ವೀಕರಿಸಿ ಮುಂದೆ ತಿದ್ದಿಕೊಂಡು ಮುಂದುವರಿಯೋಣ. ಒಟ್ಟಿನಲ್ಲಿ ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶಗಳನ್ನು ಉಳಿಸುವ ಮಹತ್ತರ ಹೊಣೆಗಾರಿಕೆ ಎಲ್ಲರ ಮೇಲಿದೆ. ವರ್ತಮಾನದ ಆಗುಹೋಗುಗಳ ಅರ್ಥವಿಸುವುದು, ಭವಿಷ್ಯದ ನಡೆಯ ಬಗ್ಗೆ ವಿವರಿಸುವುದು ನಮ್ಮೆಲ್ಲರ ಕರ್ತವ್ಯ. ಉತ್ತಮ ಸಾಹಿತ್ಯದೊಂದಿಗೆ ಮಾತೆ ಸರಸ್ವತಿಯ ಸೇವೆ ಮಾಡೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ