ಒಂದು ಒಳ್ಳೆಯ ನುಡಿ - 143

ಒಂದು ಒಳ್ಳೆಯ ನುಡಿ - 143

ಎಪ್ರಿಲ್ 1 ಮೂರ್ಖರ ದಿನವೆಂದು ಪ್ರತೀತಿ. ಹಲವಾರು ಸಂದರ್ಭದಲ್ಲಿ ನಾವುಗಳು ಸುಮ್ಮಸುಮ್ಮನೆ ಮೂರ್ಖರಾಗುವುದಿದೆ. ತಮಾಷೆಯೋ, ಕುಶಾಲಿಗೋ ಬೇಸ್ತು ಬೀಳುವುದು ಒಂದು ರೀತಿಯ ಮೂರ್ಖತನವೇ ಆಗಿದೆ. ನಾನು ಅಧ್ಯಾಪಿಕೆಯಾಗಿ ಕೆಲಸಮಾಡುತ್ತಿರುವಾಗ ಮೂರ್ಖಳೆಂದು ಅನಿಸಿಕೊಳ್ಳಲಾರೆ ಎಂದು ದೃಢ ನಿರ್ಧಾರವನ್ನು  ಮಾಡುತ್ತಿದ್ದೆ. ಯಾರು ಏನು ಹೇಳಿದರೂ ಈ ದಿನ ಯೋಚಿಸಿಯೇ ಮುಂದಿನ ಮಾತು ಎಂದು ನಿಶ್ಚಯಿಸಿದೆ. ಆದರೆ ಈ ಮಕ್ಕಳು ಮೊದಲೇ ಬೇಕಾದ ತಯಾರಿ ಎಲ್ಲ ಮಾಡಿಯೇ ಯೋಜನೆಯೊಂದಿಗೆ ಸಿದ್ಧರಾಗುತ್ತಿದ್ದರು. ಬೆಳಗಿನ ಕೆಲಸಗಳ ಒತ್ತಡದಲ್ಲಿ ನಡೆದುಕೊಂಡು ಹೋಗಿ ಶಾಲಾ ಕೆಲಸವಿಂದು ಏನೇನು ಎಂದು ತಲೆಯಲ್ಲಿ ತುಂಬಿಕೊಂಡು ಹೋಗುವುದು ಮಾಮೂಲು. ಒಂದೆಡೆ ಶಾಲೆಯಲ್ಲಿ ಶಿಕ್ಷಕರ ಕೊರತೆ. ಎಲ್ಲವನ್ನೂ ನಿಭಾಯಿಸುವುದೇ ಹರಸಾಹಸ. ಶಾಲಾ ಗೇಟಿನ ಹತ್ತಿರ ಮಕ್ಕಳ ಸೈನ್ಯ ನನ್ನನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುವಾಗಲೂ ಮಂಡೆಗೆ ಹೋಗಿಲ್ಲ. ಯಾರ ಮೇಲೋ ದೂರು ಕೊಡಲು ನಿಂತಿರಬಹುದು ಯೋಚಿಸಿದೆ. ಕಛೇರಿಯೊಳಗೆ ಹೋಗಿ ಇನ್ನೇನು ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂದು ನೋಡಿದರೆ ಹಳದಿ ಬಣ್ಣದ ಹಾವೊಂದು ನನ್ನನ್ನೇ ನೋಡುತ್ತಿದೆ. ಕಿಟಕಿಯಲ್ಲಿ ಮಕ್ಕಳ ದಂಡು ಒಳಗೆ ಇಣುಕುವುದು ಕಾಣುತ್ತಿದೆ. ‘ಅಬ್ಬಾ ಎಂದು ಹೌಹಾರಿ’ ಹಿಂದಕ್ಕೆ ಹೆಜ್ಜೆಯಿಟ್ಟರೆ ಪುಟ್ಟ ಮಕ್ಕಳೆಲ್ಲ ‘ಹೋ’ ಎಂದು ಕಿರುಚುತ್ತಿದ್ದಾರೆ. ನಿಜವಾದ ನಾಗರಹಾವಿನಂತಿದೆ. ಒಂದುಕ್ಷಣ ಎದೆಬಡಿತವೇ ನಿಂತಹಾಗಾಗಿತ್ತು. ಬೊಬ್ಬೆ ಕೇಳ್ತಾ ಇದೆ ‘ಎಪ್ರಿಲ್ ಫೂಲ್, ಎಪ್ರಿಲ್ ಫೂಲ್’. ಬೇಸ್ತು ಬಿದ್ದದ್ದು ಸ್ಪಷ್ಟವಾಯಿತು. ಮಕ್ಕಳನ್ನು ಗದರಿಸಿ ಪ್ರಯೋಜನವಿಲ್ಲ. ನಾನು ಟ್ಯೂಬ್ ಲೈಟ್ ಆದದ್ದೇ ಆದ ತಪ್ಪು. 'ಜಾತ್ರೆಯಿಂದ ತಂದದ್ದು ಟೀಚರೇ, ಶಾಲೆಗೆ ಕೊಡಲು' ಹುಡುಗಿ ಹೇಳುವಾಗ ಇನ್ನೇನು ಮಾಡಲು ಸಾಧ್ಯ? ಅಬ್ಬಾ! ಪುಟ್ಟ ಮಕ್ಕಳ ತಲೆಯಲ್ಲಿ ಏನೆಲ್ಲ ಓಡ್ತದೆ ನೋಡಿ. ನಿನ್ನ ತಲೆಯಲ್ಲಿ ಕಸವುಂಟು ಶಾಲೆಯಲ್ಲಿ ಹೆಚ್ಚಾಗಿ ಮೂರ್ಖರನ್ನಾಗಿ ಮಕ್ಕಳು ಮಾಡುವ ಪ್ರಸಂಗ ನಾನು ನೋಡಿದ ಹಾಗೆ.

ನಿಜವಾಗಿಯೂ  ಮೂರ್ಖರ ದಿನವೆಂದಲ್ಲ. ಒಂದಿಲ್ಲೊಂದು ಪ್ರಸಂಗದಲ್ಲಿ ನಾವು ಮೂರ್ಖರಾಗುವುದು ಸರ್ವೇ ಸಾಮಾನ್ಯ. ಯಾವುದೋ ಸಾಮಾಗ್ರಿ ಕೊಳ್ಳಲು ಅಂಗಡಿಗೆ ಹೋಗ್ತೇವೆ. ಚೌಕಾಸಿ ಮಾಡಿ ಹಣಕೊಟ್ಟು, ಇನ್ನೊಂದು ಅಂಗಡಿಯಲ್ಲಿ ಅದೇ ವಸ್ತುವಿಗೆ ಮೌಲ್ಯ ಕೇಳಿದಾಗ ನಮ್ಮನ್ನು ಅಂಗಡಿಯಾತ ಮೂರ್ಖ ಮಾಡಿದ್ದು ಗೊತ್ತಾಗ್ತದೆ. ತಮಾಷೆಯೋ,ವ್ಯಂಗ್ಯವೋ, ಕೀಟಲೆಯೋ, ಮೋಸವೋ ಏನೇ ಇರಲಿ ಬೇಸ್ತು ಬಿದ್ದು ತೆಪ್ಪಗಾಗುವುದು ನಮ್ಮ ಸರದಿ. ಕೀಟಲೆ ಮಾಡಬೇಕು. ಆದರೆ ಅದಕ್ಕೂ ಪರಿಧಿ ಇದ್ದರೆ ಒಳಿತು‌. ಉಸಿರೇ ನಿಂತು ಹೋಗುವ ಮಟ್ಟಕ್ಕೆ ಹೋಗಬಾರದು. ತಮಾಷೆ ಬದುಕಿನ ಅವಿಭಾಜ್ಯ ಅಂಗ. ತಮಾಷೆ ಇಲ್ಲದವನ ಗಂಭೀರ ಮೊಗ ನೋಡಲಾಗದು. ಆರೋಗ್ಯಕ್ಕೂ ತಮಾಷೆ ನಗುವಿಗೂ ನಿಕಟ ಸಂಬಂಧವಿದೆ. ಹಾಗೆಂದು ಎಲ್ಲೆ ಮೀರಬಾರದಲ್ಲ. ಮನಯೊಳಗಿನ ಸದಸ್ಯರೇ ಒಮ್ಮೊಮ್ಮೆ ಕೆಲವು ವ್ಯವಹಾರದಲ್ಲಿ ಬೇಸ್ತು ಬೀಳುವುದಿದೆಯಲ್ಲವೇ? ಈ ಫೋನ್ ಗಳು ಬಂದ ಮೇಲೆ ಮೂರ್ಖತನದ ಆಟಗಳು ಹೆಚ್ಚಾಗಿದೆಯೆಂದು ಹಿರಿಯರೊಬ್ಬರ ಮಾತು. ಸಂಭಾಷಣೆ ಮಿತಿಮೀರಿ ಅನಾಹುತಕ್ಕೆ ದಾರಿ ಮಾಡದಂತೆ ಎಚ್ಚರವಿರಬೇಕು. ನಮ್ಮದಲ್ಲದ ದಿನಾಚರಣೆಗಳು, ನಮ್ಮೊಂದಿಗೆ ಸೇರಿಕೊಳ್ಳುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಜೀವನದ ಯಾವುದೇ ಹಂತದಲ್ಲಿ ಬೇಸ್ತು ಬೀಳದ ಹಾಗೆ ಜಾಗ್ರತೆ ವಹಿಸುತ್ತಾ, ಅಕಸ್ಮಾತ್ ಬೇಸ್ತು ಬಿದ್ದರೂ ಏನೂ ಆಗಿಲ್ಲವೇನೋ ಎಂಬಂತಿದ್ದು  ಮುಂದಡಿಯಿಡೋಣ. ಮೂರ್ಖರಿಗೆ ನೂರ್ಕಾಲ ಬುದ್ಧಿ ಹೇಳಿದರೂ ಯಾವುದೇ ಬದಲಾವಣೆ ಇರದು.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ