ಒಂದು ಒಳ್ಳೆಯ ನುಡಿ - 146

ಒಂದು ಒಳ್ಳೆಯ ನುಡಿ - 146

ಒಂದು ಮಾತಿದೆ ಹಳ್ಳಿಯಲ್ಲಿ ‘ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಒಳ್ಳೆಯವರು ಸಿಗುವುದು ಅಪರೂಪ’. ಹಾಗಾದರೆ ಉತ್ತಮರನ್ನು ಎಲ್ಲಿ ಹುಡುಕುವುದು ಎಂಬ ಪ್ರಶ್ನೆ ‌ಸಹಜ. ಹೌದು ಕಷ್ಟವಿದೆ. ಮೊದಲು ನಾವೇ ಪರಿವರ್ತನೆಯಾಗೋಣ. ನಾಲ್ಕು ಜನರಿಗೆ ಮಾದರಿಯಾಗೋಣ ಆಗದೇ?

ಹೀಗೆ ಒಮ್ಮೆ ಲೋಕಾಭಿರಾಮ ಹರಟೆ ‌ಸಂದರ್ಭದಲ್ಲಿ ಒಬ್ಬಿಬ್ಬರು ಹೇಳುವುದು ಕಿವಿಗೆ ಬಿತ್ತು 'ಆ ಮನುಷ್ಯ ಬೇರೆಯವರಿಗೆ ಹೇಳ್ತಾನೆ, ಭಾರೀ ಲೇಖನಗಳನ್ನು ಬರೆಯುತ್ತಾನೆ, ತಾನು ಮಾತ್ರ ಸುಭಗನ ಹಾಗೆ ನಾಟಕ ಮಾಡ್ತಾನೆ ' ಎಂಬುದಾಗಿ. ಆ ಬರೆಯುವವನನ್ನೂ ನನಗೆ ಪರಿಚಯವಿತ್ತು. ನನ್ನ ಹತ್ತಿರವೇ ತುಂಬಾ ಸಲ ಹೇಳಿದ ಮಾತುಗಳು ನೆನಪಾಯಿತು. 'ಅಕ್ಕಾ, ನಾನು ಈಗೀಗ ಸಾಹಿತ್ಯ ಚಟುವಟಿಕೆ ಪ್ರಾರಂಭಿಸಿರುವೆ. ನನ್ನ ಬರಹದ ಶೈಲಿ ಹೇಗಿದೆ ಹೇಳಿ' ಎಂದು ಹೇಳಿದಾಗ ಹೀಗೆ ಕಲಿಯುತ್ತಾ, ಬೇರೆ ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಿ, ಉತ್ತಮ ರಚನೆಗಳನ್ನು ಓದಿ, ಪುರಾಣ, ಇತಿಹಾಸ, ಸುಭಾಷಿತ, ಶ್ಲೋಕಗಳಲ್ಲಿ ಬಹಳಷ್ಟು ವಿಷಯಗಳು ಸಿಗ್ತದೆ. ತಮ್ಮದೇ ಶೈಲಿಯಲ್ಲಿ ಬರೆಯಲು ಅಭ್ಯಾಸ ಮಾಡಿ' ಎಂದಿದ್ದೆ. ಒಂದಷ್ಟು ದಿನ ತೊಂದರೆಯಿಲ್ಲದ ಲೇಖನ, ಕವನ ಇತ್ಯಾದಿಗಳನ್ನು ಬರೆದ ಮನುಷ್ಯನ ಬಗ್ಗೆ ಅಭಿಮಾನವಿತ್ತು. ಸರಾಗ ಮನದ ಮಾತುಗಳ ಓದಿದಾಗ ಇದನ್ನು ಎಲ್ಲಿಯೋ ಓದಿದ್ದೇನೆ ಎಂದು ಅನ್ನಿಸಿತು. ಯಾವುದೋ ಮಾಹಿತಿಗಾಗಿ ಗೂಗಲ್ ನೋಡಿದಾಗ ಈ ಮಹಾನುಭಾವ ಯಥಾಪ್ರತಿ ನಕಲೆಂದು ತಿಳಿಯಿತು. ನಾವೆಲ್ಲಿಯಾದರೂ ಬುದ್ಧಿವಾದ ಹೇಳಿದರೆ ರುಚಿಸದು. ಒಂದೆರಡು ಸಲ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರೆಡೆಯಲ್ಲಿ ಆತನಿಗೆ ಹಲವಾರು ಪ್ರಶಸ್ತಿಗಳ ಸರಮಾಲೆ ಬೇರೆ. ನೋಡಿಯೇ ಸಾಕಾಗಿ ಹೋಯಿತು ನನಗೆ. ಮೂಲ ಲೇಖನ, ಲೇಖಕರ ಹೆಸರು‌ ಯಾವುದೂ ಹಾಕದೆ ತನ್ನದೆಂದು ಘೋಷಿಸುವುದು ಅಕ್ಷಮ್ಯ ಅಪರಾಧ ಎಂದೆನಿಸಿತು. ಇಂತಹ ಸ್ಥಿತಿಯಲ್ಲಿ, ಸ್ವಂತಿಕೆಯಿಲ್ಲದವರ ಬಗ್ಗೆ ಏನು ಹೇಳೋಣ? ಬರೆಯಲಿ, ಕಲಿಯಲಿ, ತಪ್ಪಾದರೂ ತೊಂದರೆಯಿಲ್ಲ, ತಿದ್ದಿಕೊಂಡು ಬರೆಯಲಿ, ಆಗ ಉತ್ತಮನೆನಿಸಬಹುದು. ಕಾಗುಣಿತ ದೋಷಗಳು ಎಷ್ಟು ಒಳ್ಳೆಯ, ಮೌಲ್ಯಯುತವಾದ ರಚನೆಗಳ ತೂಕವನ್ನು ಕಡಿಮೆ ಮಾಡುತ್ತದೆ.

ನಡೆ-ನುಡಿ, ಮಾತು, ವ್ಯವಹಾರ ಕೆಲಸ,ಣ ಕಾರ್ಯಕ್ಷೇತ್ರ ಎಲ್ಲಾ ದಿಕ್ಕಿನಿಂದ ನೋಡಿದಾಗಲೂ ನೂರಕ್ಕೆ ನೂರು ಅಲ್ಲದಿದ್ದರೂ  ೮೦% ಆದರೂ ನೈತಿಕತೆ ಬೆಳೆಸಿಕೊಂಡರೆ ಚಂದವಲ್ಲವೇ? ಓರ್ವ/ಓರ್ವಳಲ್ಲಿ ಪರಿಪೂರ್ಣತೆ ಅಪರೂಪ. ಮಾನವ ಸಹಜ ಲೋಪದೋಷಗಳಿರಬಹುದು. ಹಿರಿಯರು, ತಿಳಿದವರು ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಅನುಭವಿಗಳು (ವಯಸ್ಸಿನಲ್ಲಿ ಸಣ್ಣವರಾದರೂ) ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ತಿದ್ದಿಕೊಳ್ಳಬಹುದು. ಮುಖ್ಯ ‘ನಾನು ಮತ್ತು ಹೆಸರಿಗಾಗಿ ಮನಸ್ಸು’ ಇದನ್ನು ಬಿಡಬೇಕು. ಬೇರೆಯವರು ಗುರುತಿಸಬೇಕು. ನಾವಿಡುವ ಪ್ರತಿಹೆಜ್ಜೆ ಸಹ ಆರೋಗ್ಯಯುತವಾಗಿರಲಿ. ನಮ್ಮ ಮನಸ್ಸು ಒಪ್ಪುವಂತಿರಲಿ. ಆತ್ಮವಂಚನೆ ಎನ್ನುವುದು ‘ಗುಂಗಿ ಹುಳದಂತೆ’ ಸದಾ ಕೊರೆದು ಕೊರೆದು ನಾಶಕ್ಕೆ ಕಾರಣವಾಗಬಹುದು. ನಮ್ಮ ತಲೆ ಮೇಲೆ ನಾವೇ ಕಲ್ಲುಚಪ್ಪಡಿ ಹಾಕಿಕೊಳ್ಳುವುದು ಬೇಡ. ನಮ್ಮನ್ನು ನೋಡಿ ಇತರರು ಅನುಕರಣೆ ಮಾಡುವಂತಿರೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ