ಒಂದು ಒಳ್ಳೆಯ ನುಡಿ (147) - ವಿಶ್ವ ಪುಸ್ತಕ ದಿನ

ಒಂದು ಒಳ್ಳೆಯ ನುಡಿ (147) - ವಿಶ್ವ ಪುಸ್ತಕ ದಿನ

ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಬಳಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು,ನಿನಗೆ ಎಲ್ಲರೂ ಗೌರವ ಕೊಡುವಂತೆ ಮಾಡುವೆ. ಈ ಜಗತ್ತೇ ನಿನ್ನ ಕೈಬಿಟ್ಟರೂ,ನಾನು ಕೈ ಬಿಡದೆ ಮೇಲಕ್ಕೆತ್ತುವೆ. ಪುಸ್ತಕ ಇರದಿರೆ ಅಕ್ಷರಕ್ಕೆ ಅರ್ಥವಾದರೂ ಇದೆಯೇ? ಪುಸ್ತಕ ಓದಿರಿ ಜ್ಞಾನವಂತರಾಗಿರಿ. ಘೋಷವಾಕ್ಯಗಳು ಎಷ್ಟೂ ಇರಬಹುದು. ಆದರೆ ಹಣ ಕೊಟ್ಟು ಕೊಂಡು ಓದುವವರು ಎಷ್ಟು ಜನ ಇದ್ದಾರೆ, ಅದೇ ಪ್ರಶ್ನೆ.

ಎಪ್ರಿಲ್ ೨೩ ‘ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನ'. ೧೯೯೫ರ ಎಪ್ರಿಲ್ ೨೩ರಂದು ಆಚರಣೆಯಂತೆ, ಹೀಗೆಲ್ಲ ಹೇಳ್ತೇವೆ. ಆದರೆ ಬರೆದು ಮುದ್ರಿಸಿದವರಿಗೆ ನಾವೆಷ್ಟು ಬೆಂಬಲಕೊಡ್ತೇವೆ ಎಂಬುದು ಮುಖ್ಯ. ವಿಶ್ವ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಆಯೋಗದ ಮೂಲಕ, ಜನರಲ್ಲಿ ಓದುವಿಕೆ, ಪ್ರಕಾಶನ, ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಪ್ರಚಾರಕ್ಕಾಗಿ, ಪುಸ್ತಕ ಪ್ರೇಮ ಬೆಳೆಸಿಕೊಂಡು, ಉತ್ತಮ ಲೇಖನ, ಲೇಖಕರ ಗುರುತಿಸುವಿಕೆಗಾಗಿ, ಈ ದಿನವನ್ನು ಘೋಷಿಸಿತು. ಮನುಷ್ಯ ಅಳಿದರೂ ಆತನ ಕೃತಿ ಅಳಿಯದು. ಋಷಿವಾಣಿ ‘ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ’ ಜ್ಞಾನ ದೊರೆಯುವುದು ಪುಸ್ತಕಗಳಿಂದ, ಒಳ್ಳೆಯ ನುಡಿಗಳನ್ನು ಆಲಿಸುವುದರಿಂದಲ್ಲವೇ?

ನಮ್ಮ ನಮ್ಮ ಮನೆಗಳಲ್ಲಿ ಒಂದು ಪುಟ್ಟ ಗ್ರಂಥಾಲಯ ಮಾಡಿದರೆ, ಮನೆಮಂದಿಗೆ, ಬಂದು ಹೋಗುವವರಿಗೆ ಓದಲು ಅನುಕೂಲ. ಹಳೇ ಪುಸ್ತಕ ಸಂಗ್ರಹ, ನಿಯತಕಾಲಿಕೆಗಳ ಸಂಗ್ರಹ, ಕಥೆ, ಕಾದಂಬರಿ, ಶಿಶುಸಾಹಿತ್ಯ ಎಲ್ಲಾ ನಮ್ಮ ಗ್ರಂಥಾಲಯಗಳಲ್ಲಿರಲಿ. ಶೋಕಿಗಾಗಿ ಯಾರೂ ಪುಸ್ತಕ ಸಂಗ್ರಹಿಸುವುದು ಬೇಡ. ಎರವಲು ಪುಸ್ತಕ ಪಡೆದು ಓದುವವರು ತುಂಬಾ ಜನರಿದ್ದಾರೆ. ಅದು ಬೇಡ, ಹಣ ನೀಡಿ ಕೊಂಡು ಓದಿ ಪ್ರೋತ್ಸಾಹ ನೀಡೋಣ. ಎರವಲು ತಂದ ಪುಸ್ತಕ ಪುನಃ ವಾರಸುದಾರನಿಗೆ ಸಮಯಕ್ಕೆ ಸರಿಯಾಗಿ ತಲುಪುವುದು ವಿರಳ. ಇದು ಅನುಭವದ ಮಾತು ಸಹ. ಎಷ್ಟೋ ನಾಟಕ, ಯಕ್ಷಗಾನದ ಪುಸ್ತಕಗಳು ನಮ್ಮಲ್ಲಿಂದ ಹೋದದ್ದು ಪುನಃ ಬಂದದ್ದು ಕಡಿಮೆಯೇ.

‘ದೇಶ ಸುತ್ತದಿದ್ದರೂ ತೊಂದರೆಯಿಲ್ಲ ,ಕೋಶವನ್ನಾದರೂ ಓದಿ ತಿಳಿಯೋಣ’ ಮಕ್ಕಳಿಗೆ ಓದುವಂತೆ ಪ್ರೇರೇಪಿಸೋಣ. ಮೊಬೈಲ್, ಲ್ಯಾಪ್ಟಾಪ್, ಟಿ.ವಿ., ಇಂಟರ್ನೆಟ್ ಇದರಲ್ಲೇ ದಿನಕಳೆಯುತ್ತಿದ್ದಾರೆ ಮನೆಮಂದಿ, ನಮ್ಮ ಮಕ್ಕಳು ಸಹ. ಪಠ್ಯೇತರ ಚಟುವಟಿಕೆಗಳು, ಇದರಿಂದಾಚೆ ಸಹ ಪ್ರಪಂಚ ಇದೆ ಎಂಬುದನ್ನು ಮನವರಿಕೆ ಮಾಡೋಣ. ಪುಸ್ತಕ ಒಂದು ದಿನಕ್ಕೆ ಸೀಮಿತಗೊಳಿಸದೆ, ಇಡೀ ವರ್ಷ ಆಚರಿಸುವಂತಾಗಲಿ. ಪ್ರತಿನಿತ್ಯ ಏನನ್ನಾದರೂ ಓದೋಣ, ಓದಿದ ಜ್ಞಾನವನ್ನು ನಾಲ್ಕು ಜನಕ್ಕೆ ಹಂಚೋಣ.’ನಮ್ಮ ನಿಜವಾದ ಸ್ನೇಹಿತ ಎಂದರೆ ಒಂದೊಳ್ಳೆಯ ಪುಸ್ತಕ’.

(ಕಂಡದ್ದು, ಕೇಳಿದ್ದು, ಓದಿದ ಅನುಭವಗಳ ಸಾರ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ