ಒಂದು ಒಳ್ಳೆಯ ನುಡಿ - 149 - ನೆನೆಯೋಣ ದಾದಿಯರ..

‘ಆರೋಗ್ಯ ಸೇವಾಕ್ಷೇತ್ರದ ಮಾಣಿಕ್ಯಗಳು’ ರೋಗಿಗಳ ಸೇವೆ ಮಾಡುವ ದಾದಿಯರು. ತಮ್ಮ ವೈದ್ಯರು ಏನೆಲ್ಲ ಸಲಹೆ ಸೂಚನೆಗಳನ್ನು ಕೊಡುತ್ತಾರೋ ಅದನ್ನು ಚಾಚೂ ತಪ್ಪದೆ ಮಾಡುವರು. ಇಂದು ಫ್ಲಾರೆನ್ಸ್ ನೈಟಿಂಗೇಲ್ ರವರ ಜನುಮ ದಿನ. ಮಾನವತೆಯ ಪ್ರತೀಕವಾಗಿದ್ದ ಇವರ ಸೇವೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇವರೋರ್ವ ಅನುಭವಿ ದಾದಿ, ಜನಾನುರಾಗಿ, ಎಲ್ಲರ ಮನವ ಗೆದ್ದ ಭಾಗ್ಯವಂತೆ. ಈಕೆಯ ಹೆಸರಿನಲ್ಲಿ ‘ಫ್ಲಾರೆನ್ಸ್ ನೈಟಿಂಗೇಲ್’ ಪದಕವನ್ನು ಅತ್ಯುತ್ತಮ ಸೇವೆ ಮಾಡಿದ ಶುಶ್ರೂಕರಿಗೆ ಕೊಡಲು 1912ರಲ್ಲಿ ಪ್ರಾರಂಭಿಸಿದರು. ಎರಡು ವರುಷಕ್ಕೊಮ್ಮೆ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದರು. ಮುಂದೆ ನಮ್ಮ ದೇಶದಲ್ಲಿ 1973 ರಿಂದ ‘ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪದಕ’ ರಾಷ್ಟ್ರಪತಿಗಳಿಂದ ನೀಡುವ ಸಂಪ್ರದಾಯ ಆರಂಭಿಸಲಾಯಿತು. ಅವರ ನೆನಪಿನಲ್ಲಿ ‘ವಿಶ್ವ ದಾದಿಯರ ದಿನವನ್ನು’ ಆಚರಿಸಲಾಗುತ್ತಿದೆ.
ತಮ್ಮ ಡಾಕ್ಟರ್ ಏನನ್ನು ಹೇಳುವರೋ ಅದನ್ನು ಚಾಚೂ ತಪ್ಪದೆ ಅನುಷ್ಠಾನ ಗೊಳಿಸುವವರು ದಾದಿಗಳು. ಅನಾರೋಗ್ಯದ ಪ್ರತಿ ಹೆಜ್ಜೆಯಲ್ಲೂ ದಾದಿಯರ ಸೇವೆಯೇ ಹಿರಿದಾಗಿದೆ. ಸಾಂತ್ವನದ ಮೂರುತಿಗಳವರು. ಸಹನಾಶೀಲರು. ರೋಗಿಗಳು ರೋಗದ ಉಲ್ಬಣಾವಸ್ಥೆಯಲ್ಲಿ ಏನಾದರೂ ಹೇಳಿದರೆ ಕೋಪಿಸದೆ ಚಾಕಚಕ್ಯತೆಯಿಂದ ವ್ಯವಹರಿಸುವ ಮಾನವೀಯತೆ ಇರುವವರು. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಎದುರಾಗುವ ಎಂತಹ ಸಮಸ್ಯೆಗಳನ್ನು ಸಹ ಬಿಡಿಸುವ ಚಾಣಾಕ್ಷತನವಿದೆ. ಸಹೋದರತ್ವ, ಸಹೃದಯ, ಸಹಭಾಗಿತ್ವ, ಹೃದಯವಂತಿಕೆಯೊಂದಿಗೆ ಬೆಸೆದಿರುವ ದಾದಿಯರ ಆದರ್ಶ ಮರೆಯಲಾಗದ್ದು. ದಾದಿಯರನ್ನು ನಿಕೃಷ್ಟವಾಗಿ ನೋಡದೆ, ಅವರ ಕರ್ತವ್ಯಗಳನ್ನು ನೆನಪಿಸುವುದು, ಗೌರವಿಸುವುದು ನಮ್ಮೆಲ್ಲರ ಹೊಣೆಗಾರಿಕೆ.
ವಿಶ್ವವನ್ನೇ ನಡುಗಿಸಿ ತಲೆಕೆಳಗೆ ಮಾಡಿದ ‘ಕರೋನಾ’ ಅಲೆಯಲ್ಲಿ ಪ್ರಾಣದ ಹಂಗು ತೊರೆದ, ಸಂಸಾರ ಸುಖದ ಮುಖವ ಸಹ ನೋಡದ, ಹಗಲಿರುಳಿನ ವ್ಯತ್ಯಾಸವೇ ತಿಳಿಯದ, ದಾದಿಯರ ದುಡಿತಕ್ಕೆ ಬೆಲೆ ಕಟ್ಟಲಾದೀತೇ? ಹಲವಾರು ಸವಾಲುಗಳಿಗೆ ತಲೆಯೊಡ್ಡಿ ದುಡಿಯುವ ಎಲ್ಲಾ ದಾದಿಯರಿಗೂ ಈ ‘ವಿಶ್ವದಾದಿಯರ ದಿನ ಶುಭಾಶಯಗಳು’
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ