ಒಂದು ಒಳ್ಳೆಯ ನುಡಿ (15) - ನಿಶ್ಚಿತ ಗುರಿ

ಒಂದು ಒಳ್ಳೆಯ ನುಡಿ (15) - ನಿಶ್ಚಿತ ಗುರಿ

*ಗುರಿ ಬೇಕು ನಡೆಯಲ್ಲಿ

ಗುರಿ ಬೇಕು ನುಡಿಯಲ್ಲಿ

ಛಲ ಬೇಕು ಸಾಧನೆಯ ಹಾದಿಯಲ್ಲಿ*

ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ.

ನಮ್ಮ ನಡೆಗೊಂದು *ಗುರಿ*ಇಲ್ಲದಿದ್ದರೆ, ನಾವು ಎಲ್ಲೆಲ್ಲೋ ಸಾಗಬಹುದು. ನಾವು *ನಿಶ್ಚಿತ ಗುರಿ*ಯನ್ನಿಟ್ಟು ಕೊಳ್ಳದೆ ಬದುಕನ್ನು ಸಾಗಿಸುತ್ತೇವೆ ಅಂತ ಹೊರಟರೆ *ವೆಂಕು ಪಣಂಬೂರಿಗೆ ಹೋಗಿ ಬಂದ ಹಾಗೆ* ಆದೀತು. ಯಾಕೆ ಹೋದ್ದು, ಅಲ್ಲಿ ಏನಿತ್ತು, ಯಾವುದೂ ಗೊತ್ತಿಲ್ಲದ ಹಾಗೆ ಆಗಬಹುದು. ನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಗುರಿ ಬೇಕೇ ಬೇಕು. ಇಲ್ಲದಲ್ಲಿ ನಮ್ಮ ಆಯುಷ್ಯವು ಹೋಗುತ್ತಾ ಇರುತ್ತದೆ, ಪ್ರಯೋಜನವಿಲ್ಲ.

ಬದುಕಿನ ನಡೆ ರೀತಿ-ನೀತಿಗಳಲ್ಲಿ ಸ್ಪಷ್ಟತೆ ಬೇಕು.*ಎಲುಬಿಲ್ಲದ ನಾಲಗೆ* ಹೇಳುವುದುಂಟು, ಬಾಯಿಯಲ್ಲಿ ಆಡಿದ್ದೆಲ್ಲ ಮಾತಾಗಲು ಸಾಧ್ಯವಿಲ್ಲ. ಸುಳ್ಳನ್ನೇ ಬಂಡವಾಳ ಮಾಡಿಕೊಂಡವರು ನಮ್ಮೆದುರೇ ರಾಜರೋಷವಾಗಿ ಮೆರೆಯುತ್ತಿರುತ್ತಾರೆ. ಏನೂ ಮಾಡಲಾಗದು. ಅವರ ಮಾತುಗಳಿಗೆ ಸಮಾಜ ಮನ್ನಣೆ ಕೊಡಲಾರದು, ಬೆನ್ನ ಹಿಂದೆ ಆಡಿಕೊಳ್ಳುವರು. ಅದು ನಮಗೆ ಬೇಡ. ಮಾತು ಕೃತಿ ಎರಡರಲ್ಲೂ ಹೊಂದಾಣಿಕೆ ಇರಲಿ. ಯೋಚನೆ ಮಾಡಿಯೇ ಮಾತನಾಡೋಣ. ಮನಸಾಕ್ಷಿ ಎಂಬುದನ್ನು ಗುರಿಯಾಗಿಟ್ಟು ಮಾತುಗಳಿರಲಿ. ಜಿಹ್ವಾ ಚಾಪಲ್ಯದ ಮಾತುಗಳು ಬೇಡ. ನಮ್ಮ ನುಡಿಗೊಂದು ವಿಶ್ವಾಸಾರ್ಹತೆ ಇರಲಿ ಅಲ್ಲವೇ?

ಕಠಿಣ ಪರಿಶ್ರಮ, ಸಾಧನೆ, ಪ್ರಾಮಾಣಿಕತನ, ಒಳ್ಳೆಯ ದುಡಿಮೆ, ಇವುಗಳಿಂದ ನಮ್ಮ ಗುರಿ ಸಾಧಿಸೋಣ. ದುಡಿಯದೆ, ಕಷ್ಟ ಪಡದೆ ಉಣ್ಣುವ ಹಕ್ಕಾದರೂ ಇದೆಯೇ? ಮಾನಸಿಕ ಛಲ-ಬಲಗಳನ್ನು ಗಟ್ಟಿಗೊಳಿಸೋಣ. ಪ್ರಯತ್ನ ನಮ್ಮದು-ಫಲ ದೇವರದು.

-ರತ್ನಾಭಟ್ ತಲಂಜೇರಿ