ಒಂದು ಒಳ್ಳೆಯ ನುಡಿ (153) - ವ್ಯಕ್ತಿ ಮತ್ತು ವ್ಯಕ್ತಿತ್ವ
ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ನಾವು ಅಳವಡಿಸಿ ಕೊಳ್ಳುವ ನಮ್ಮ ಗುಣ, ನಡತೆ, ಸ್ವಭಾವ ನಮ್ಮ ಅರ್ಹತೆ, ಯೋಗ್ಯತೆ, ವಿದ್ಯೆ, ಅಧಿಕಾರ, ಸ್ಥಾನ, ಅಂತಸ್ತುಗಳು ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ನೈತಿಕತೆ ಇನ್ನೂ ಹೆಚ್ಚು ಗೌರವ, ಖ್ಯಾತಿಯನ್ನು ತಂದುಕೊಡುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಹಿರಿಮೆ ಅವರು ನಡೆದುಕೊಳ್ಳುವ ರೀತಿ, ಮಾತು,ಬದುಕುವ ರೀತಿ ಸ್ವಲ್ಪ ಮಟ್ಟಿಗೆ ಮಾಹಿತಿ ಒದಗಿಸುತ್ತದೆ. ನಮ್ಮಲ್ಲಿ ಕೆಲವರನ್ನು ಒಳ್ಳೆಯವರು, ಕೆಟ್ಟವರು, ಸರಳ, ಸಜ್ಜನ, ಸಾತ್ವಿಕ, ಗುಣವಂತ, ವಿವೇಕಿ, ನಿರುಪದ್ರವಿ, ಸತ್ಯವಂತ, ಪರೋಪಕಾರಿ, ಆಪ್ತ ರಕ್ಷಕ, ಆಪ್ತ ಮಿತ್ರ, ಆಪ್ತ ಬಂಧು, ದುರಹಂಕಾರಿ, ದುರ್ಜನ, ನಿಷ್ಟುರ, ಕಠೋರ, ಕಲ್ಮಶ, ದುಷ್ಟ, ನೀಚ, ಕೊಲೆ ಪಾತಕಿ, ಮೋಸಗಾರ, ವಂಚಕ, ಭ್ರಷ್ಟ, ವ್ಯಭಿಚಾರಿ ಹೀಗೆ ಅನೇಕ ವಿಧದಲ್ಲಿ ಬ್ರಾಂಡ್ ಮಾಡುತ್ತೇವೆ. ನೋಡಿ ಬದುಕು ಯಾವ ಮಜಲುಗಳಿಗೆ ತೆರೆದುಕೊಳ್ಳುತ್ತದೆ. ವ್ಯಕ್ತಿ ತನ್ನ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅವನ ವೈಯಕ್ತಿಕ ಜವಾಬ್ದಾರಿ. ಈ ಜವಾಬ್ದಾರಿ ಸರಿಯಾಗಿ ನಿರ್ವಹಿಸಲು ನಾವು ಬದಲಾಗಬೇಕು. ನನ್ನಿಂದಲೇ ಅದು ಆರಂಭವಾಗಲಿ ಎಂಬ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು.
ನಮ್ಮಲ್ಲಿ ಅನೇಕರು ಬೇರೆಯವರು ಬದಲಾಗಬೇಕೆಂದು ಹೇಳುತ್ತೇವೆ. ಅಲ್ಲ ಮೊದಲು ನಾವು ಬದಲಾಗಿ ಬೇರೆಯವರ ಬಗ್ಗೆ ಮಾತಾಡಬೇಕು. ಹೇಳಿ ಮಾಡುವುದಕ್ಕೂ, ಹೇಳದೆಯೇ ಉತ್ತಮವಾದ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. ನಾವು ಯಾರನ್ನು ಮೆಚ್ಚಿಸಬೇಕಾಗಿಲ್ಲ. ನಾನು ಸರಿ ಎಂಬ ಶುದ್ಧ ಮನಸು ಇದ್ದವರು ಯಾರನ್ನು ಮೆಚ್ಚಿಸುವುದಿಲ್ಲ. ಸ್ವಲ್ಪ ಸ್ವಾರ್ಥ, ಅಭಿಲಾಷೆ, ಅನುಕೂಲ, ಅವಕಾಶ ಪಡೆಯುವ ಮನಸಿದ್ದರೆ ಇದ್ದದ್ದು ಅಲ್ಲವೆಂದು, ಅಲ್ಲದ್ದನ್ನು ಹೌದೆಂದು ಬದುಕುತ್ತಾರೆ. ಯಾರು ಸ್ವಂತಿಕೆ ಸ್ವಾಭಿಮಾನ ಹೊಂದಿಲ್ಲವೋ ಅವರು ನೇರ, ದಿಟ್ಟ ವ್ಯಕ್ತಿತ್ವ ರೂಪಿಸಿಕೊಳ್ಳಲಾರರು. ಅನೇಕರು ವ್ಯಕ್ತಿತ್ವ ಎಂದರೆ ಆಸ್ತಿ, ಅಂತಸ್ತು, ಸ್ಥಾನ, ಹಣ, ಅಧಿಕಾರವೆಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅಲ್ಲ, ವ್ಯಕ್ತಿತ್ವ ವ್ಯಕ್ತಿಯ ವರ್ತನೆಗಳು, ಯೋಚನೆಗಳು ಮತ್ತು ಭಾವನೆಗಳು.ಇವು ಉತ್ತಮವಾಗಿದ್ದರೆ ವ್ಯಕ್ತಿತ್ವ ಉತ್ತಮವಾಗಿರುತ್ತದೆ.
-ಸತೀಶ್ ಶೆಟ್ಟಿ ಚೇರ್ಕಾಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ