ಒಂದು ಒಳ್ಳೆಯ ನುಡಿ - 153
ನಮಗಾದ ಕಷ್ಟ-ನಷ್ಟಗಳು, ನೋವುಗಳನ್ನು ಹಾಗೆಯೇ ಮನಸ್ಸಿನಲ್ಲಿಟ್ಟುಕೊಂಡು ಸದಾ ಚಿಂತಿಸುವುದು ಒಳ್ಳೆಯದಲ್ಲ. ಅದನ್ನು ಬೇರು ಸಹಿತ ಕಿತ್ತು ಎಸೆಯಲು ಪ್ರಯತ್ನಿಸಬೇಕು. ಹಾಗೆ ಮನಸ್ಸಿಂದ ಹೊರಗೆ ಹಾಕಲು ಮನದೊಳಗೆ ಇನ್ನೇನೋ ವಿಷಯ ವಾಸನೆಗಳ ತುಂಬಿಸಬೇಕು. ಒಲವು, ಸ್ನೇಹ, ಪ್ರೀತಿ, ಮಮತೆ ಇವುಗಳೆಲ್ಲ ಒಮ್ಮೆಗೆ ಗಾಯವನ್ನು ಗುಣಪಡಿಸಬಹುದಾದ ಮುಲಾಮುಗಳಿದ್ದಂತೆ.
ಎಸಗಿದ ತಪ್ಪುಗಳನ್ನು ಪದೇಪದೇ ಮಾಡಬಾರದು. ಗೊತ್ತಿದ್ದೂ ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ನಮಗೆ ಗೋಚರವಾಗದ ಎಷ್ಟೋ ತಪ್ಪುಗಳು ನಮ್ಮಿಂದ ಆಗುವುದು ಸಹಜ. ಅದರ ಅರಿವಾದಾಗ ಒಪ್ಪುವುದು ದೊಡ್ಡಗುಣ. ದ್ವೇಷ, ಅಪರಾಧಗಳನ್ನು ಬೆಳೆಯಗೊಡದೆ ಮರೆಯಲು ಪ್ರಯತ್ನಿಸೋಣ. ಕೆಲವರು ಹೇಳುವುದುಂಟು ‘ಅವನನ್ನು ಸಂದರ್ಭ ಸಿಕ್ಕಾಗ ಒಂದು ಕೈ ನೋಡ್ತೇನೆ’ ಎಂಬುದಾಗಿ. ಅದನ್ನು ಬಿಡಬೇಕು. ಅದು ಒಳ್ಳೆಯ ಗುಣವಲ್ಲ. ಮೇಲೊಬ್ಬ ಎಲ್ಲವನ್ನೂ ನೋಡುವವ ಇದ್ದ ಮೇಲೆ ನಮಗೇಕೆ ಚಿಂತೆ? ಈ ರಾಗ-ದ್ವೇಷ ಎಲ್ಲ ಬೇಕಾ ಹೇಳಿ. ಇಲ್ಲದ ಕಸಗಳನ್ನು, ಕಳೆಗಳನ್ನು ತುಂಬಿ ಮನಸ್ಸನ್ನು ರಾಡಿ ಮಾಡಿಕೊಂಡರೆ ಕಷ್ಟ ನಮಗೇ ಅಲ್ಲವೇ? ಬೇರೆಯವರು ಎಸಗಿದ ತಪ್ಪನ್ನು ಮನ್ನಿಸುವುದು ದೈವತ್ವಕ್ಕೆ ಸಮ. ಕ್ಷಮಾಗುಣ ಸಂಪನ್ನ, ತುಂಬಿದ ಕೊಡ ನಮ್ಮನ್ನು ರಕ್ಷಿಸುವ ಆ ಕಣ್ಣಿಗೆ ಕಾಣಿಸದ ಅದ್ಭುತ ಶಕ್ತಿ. ನಾವು ಮಹಾಭಾರತವನ್ನೊಮ್ಮೆ ಅವಲೋಕಿಸಿದರೆ ಜೂಜಾಡಿ ಸೋತ ಧರ್ಮರಾಯ ಮತ್ತೂ ಮತ್ತೂ ಕರೆದಾಗ ಜೂಜಾಡಲು ಹೋದ. ಮುಂದೇನಾಯಿತು ನಮಗೆಲ್ಲ ತಿಳಿದೇ ಇದೆ. ಅರಿತರಿತು ಮಾಡಿದ ತಪ್ಪು. ಭಗವಂತ ಸಹ ಸಹಾಯಕ್ಕೆ ಬರಲಾರ. ಕ್ಷಮೆ ಎಂಬುದು ಸುಮ್ಮನೆ ನೀಡುವುದಕ್ಕಾಗದು. ಅಷ್ಟೂ ಬೆಲೆಯಿದೆ. ಸಂಸ್ಕಾರ, ರಕ್ತ, ಹುಟ್ಟಿನಿಂದಲೇ ಬರುವ ಆಭರಣವೇ ಸಂಸ್ಕಾರ. ಕ್ಷಮೆಗೆ ಮತ್ತು ದಾನಕ್ಕೆ ಮುಖ್ಯ ‘ಹೃದಯ ಶ್ರೀಮಂತಿಕೆ’ ಬೇಕು. ಸಿರಿತನ ಎಷ್ಟಿದ್ದರೇನು ಕೊಡುವ ಗುಣವಿಲ್ಲದ ಮೇಲೆ. ಕಾಲ ಸರಿದಂತೆ ಅವಗುಣಗಳ ಮರೆಯೋಣ, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳೋಣ ಉತ್ತಮರಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ