ಒಂದು ಒಳ್ಳೆಯ ನುಡಿ (155) - ಮನಸೆಳೆದ ಮಾತು...

ಒಂದು ಒಳ್ಳೆಯ ನುಡಿ (155) - ಮನಸೆಳೆದ ಮಾತು...

* ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ… ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ ಮನೆ ನಡೆಸಲು ಮನಗಳು ಒಟ್ಟುಸೇರಬೇಕು.

* ಹಣವಂತನಾಗುವುದು ಹೇಗೆಂಬುದನ್ನು ಸಂತೆಯ ವ್ಯವಹಾರಗಳು ಕಲಿಸಿಕೊಡಬಹುದು.., ಗುಣವಂತನಾಗುವುದು ಹೇಗೆಂಬುದನ್ನು ಯಾರೂ ಕಲಿಸಿಕೊಡಲಾರರು.. ಗುಣವಿಲ್ಲದ ಹಣ ಹೊರಲಾರದ ಹೆಣ.

* ಮದುವೆಯ ಸಂದರ್ಭದಲ್ಲಿ ಪುರೋಹಿತರು ವಧು-ವರರಿಗೆ ತಾಳಿ ಕಟ್ಟಿಸಿ ಪತಿ-ಪತ್ನಿಯರೆಂದು ಘೋಷಿಸುತ್ತಾರೆ. ಆದರೆ ನಂತರ ಅವರಿಬ್ಬರೂ ಬಾಳ ಸಂಗಾತಿಗಳಾಗಿ ಹೇಗೆ ಬಾಳಬೇಕೆಂಬುದನ್ನು ಯಾವ ಪುರೋಹಿತರು ಕೂಡಾ ಹೇಳಿಕೊಡಲಾರರು.. ಕೈ ಹಿಡಿಯುವುದು ಬೇರೆ, ಕೈ ಬಿಡದಿರುವುದು ಬೇರೆ.

ಹರಿಕಥಾ ದಾಸರೊಬ್ಬರು ನೆರೆದ ಭಕ್ತರನ್ನು ಕೇಳಿದರು, ನಿಮ್ಮಲ್ಲಿ ಯಾರೆಲ್ಲಾ ಸ್ವರ್ಗಕ್ಕೆ ಹೋಗಲು ಬಯಸುತ್ತೀರಿ? ಎಲ್ಲರೂ ಪಟಪಟನೆ ಕೈ ಎತ್ತಿದರು. ಮೂಲೆಯಲ್ಲಿ ಒಬ್ಬ ಮುದುಕಿ ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತಿದ್ದಳು..!

ದಾಸರು ಕುತೂಹಲದಿಂದ ಕೇಳಿದರು, "ಯೇನಜ್ಜೀ, ಸ್ವರ್ಗ ಸುಖ ಬೇಡ್ವಾ?" 

ಸ್ವರ್ಗ ಸುಖ ಯಾರಿಗೆ ತಾನೇ ಬೇಡ ಗುರುಗಳೇ..?"

"ಮತ್ತೆ ನೀನು ಕೈ ಎತ್ತಲೇ ಇಲ್ಲ?"

ತುಸು ನಗುತ್ತಾ ಅಜ್ಜಿ ಹೇಳಿತು. "ಈ ಕೈ ಎತ್ತಿದ ಎಲ್ಲಾ ಮಹಾನುಭಾವರ ಕತೆ ನನಗೆ ಚೆನ್ನಾಗಿ ಗೊತ್ತು ಗುರುಗಳೇ.. ವರ್ಷ ವರ್ಷಗಳಿಂದ ಇವರು ಮಾಡುವ ಅನಾಚಾರಗಳನ್ನು , ಅಧರ್ಮಗಳನ್ನು ನೋಡುತ್ತಲೇ ಮುದುಕಾದೆ... ಇಂಥಹ ಈ ಫಟಿಂಗರೆಲ್ಲರೂ ಸ್ವರ್ಗಕ್ಕೆ ಹೋಗುತ್ತಲೇ ಸ್ವರ್ಗ ನರಕವಾಗಿ ಈ ಊರೇ ನಿಜವಾದ ಸ್ವರ್ಗವಾಗುತ್ತದೆ... ಅವರೆಲ್ಲಾ ಮೇಲಕ್ಕೆ ಹೋಗಲಿ, ನಾನಿಲ್ಲೇ ಸುಖವಾಗಿ ಇರುತ್ತೇನೆ...!!"

(ಆಧಾರ) ಸುಧಾಕರ ಕೆ ಹೆಗ್ಡೆ, ಮೈಸೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ