ಒಂದು ಒಳ್ಳೆಯ ನುಡಿ - 156
ಸರ್ವಧರ್ಮಗಳಲ್ಲೂ ಅತಿಶ್ರೇಷ್ಠವಾದುದು- 'ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಗರಿಯಸೀ' ---ತಾಯಿ ತಂದೆ ಮತ್ತು ಗುರುಗಳ ಸೇವೆಗಿಂತ ಅತಿಶ್ರೇಷ್ಠವಾದ ಧರ್ಮಾಚರಣೆ ಬೇರೊಂದಿಲ್ಲ ಎಂಬುದಾಗಿ.ಈ ಮೂವರನ್ನು ನೋಡದವನು, ಗೌರವಿಸದವನು, ತಿರಸ್ಕರಿಸುವವನು ಮಾಡುವ ದೇವತಾಕಾರ್ಯಗಳೆಲ್ಲ ನಿಷ್ಪಲ. *ನಾಸ್ತಿ ಮಾತೃಸಮೋ ಗುರುಃ*- ತಾಯಿಗೆ ಸಮಾನವಾದ ಗುರು ಮತ್ತೊಬ್ಬರಿರಲು ಸಾಧ್ಯವಿಲ್ಲ ಈ ಪ್ರಪಂಚದಲ್ಲಿ. *ಮನೆಯೇ ಮೊದಲ ಪಾಠಶಾಲೆ, ಜನನೀ ತಾನೇ ಮೊದಲಗುರುವು*-ಗಾದೆ ಸುಮ್ಮನೆ ಮಾಡಿದ್ದಲ್ಲ. ದೇವರು ಮತ್ತು ಹೆತ್ತ ತಾಯಿ ಒಟ್ಟಿಗೆ ಇದ್ದಾಗ ಮೊದಲು ತಾಯಿಗೆ ನಮಸ್ಕರಿಸಬೇಕಂತೆ. ಅನಂತರ ಭಗವಂತನಿಗೆ ನಮಸ್ಕರಿಸಬೇಕಂತೆ. ನಿತ್ಯಸತ್ಯ ವಿಷಯಗಳನ್ನು ಅನುಭವಿಸಿ ಹೊರಹೊಮ್ಮಿದವೇ ಗಾದೆಗಳು.
ಯಾವುದೇ ಸಂದರ್ಭದಲ್ಲೂ ತಾಯಿ, ತಂದೆ ಮತ್ತು ಗುರುವಿಗೆ ಅವಮಾನ ಮಾಡಬಾರದು. ದೀನರ ಸೇವೆ ಪುಣ್ಯದ ಕೆಲಸ. ಬಡವರಿಗೆ ಸಹಕರಿಸುವುದು ಮಾನವ ಧರ್ಮ. ಪ್ರತಿದಿನ ಆಲಸಿಯಾಗದೆ ದುಡಿದು ಸಂಪಾದಿಸಿ ಉಣ್ಣುವುದು ಧರ್ಮ .ಹಿರಿಯರನ್ನು ಗೌರವಿಸುವುದು ಉತ್ತಮ ಸಂಸ್ಕಾರ. ನಮ್ಮ ರಕ್ತದಲ್ಲೇ ಅದು ಹಾಸುಹೊಕ್ಕಾಗಿದೆ. ಮಾನವ ಧರ್ಮವನ್ನು ಧಿಕ್ಕರಿಸುವ ಅಧಿಕಾರ ನಮಗಿಲ್ಲ, ಧಿಕ್ಕರಿಸಲೂ ಬಾರದು. ಈ ಸಮಾಜದಲ್ಲಿ ಹಿರಿಯ ಕವಿನುಡಿಯಂತೆ 'ಏನಾದರೂ ಆಗು ಮೊದಲು ಮಾನವನಾಗು' ಈ ತತ್ವವನ್ನು ಜೀವನದಲ್ಲಿ, ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ.
-ರತ್ನಾ ಕೆ.ಭಟ್ ತಲಂಜೇರಿ
(ಆಕರ: ಮಹಾಭಾರತ) ಚಿತ್ರ ಕೃಪೆ: ಇಂಟರ್ನೆಟ್ ತಾಣ