ಒಂದು ಒಳ್ಳೆಯ ನುಡಿ - 157 - ಸಂಬಂಧ

ಒಂದು ಒಳ್ಳೆಯ ನುಡಿ - 157 - ಸಂಬಂಧ

'ಸಂಬಂಧ' ಎಂಬ ಪದಕ್ಕೆ ನಾನಾ ಅರ್ಥಗಳಿರಬಹುದು. ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಸೋದರಿಯರು, ಬಂಧುಗಳು, ನೆರೆಹೊರೆಯವರು, ಸ್ನೇಹಿತರು, ಕಷ್ಟಕಾಲದಲಿ ಕೈಹಿಡಿದು ಮುನ್ನಡೆಸುವವರು, ಗುರು-ಶಿಷ್ಯ ಸಂಬಂಧ, ಗೆಳೆಯ-ಗೆಳತಿ, ಮೇಲಾಧಿಕಾರಿಗಳು ಹೀಗೆ ಹತ್ತು ಹಲವು ರೀತಿಯಲಿರಬಹುದು. ಅದನ್ನು 'ಉಳಿಸಿ ಬೆಳೆಸುವುದು ಅಥವಾ ಹಾಳುಗೆಡಹುವುದು' ನಮ್ಮ ನಮ್ಮ ಕೈಯಲ್ಲಿದೆ. 'ಕೈಬಾಯಿಗಳು ಶುದ್ಧವಿದ್ದರೆ' ಸಂಬಂಧ ಚಿರಕಾಲ ಬಾಳಿಕೆ ಬರಬಹುದು.

ದಿನನಿತ್ಯದ ವ್ಯವಹಾರದಲ್ಲಿ ಸಂಬಂಧಗಳ ತಾಕಲಾಟ, ಮೇಲಾಟ, ಒಳ್ಳೆಯತನ, ಹೊಯ್ದಾಟ, ಹ್ಯೊಕೈ ನೋಡುತ್ತಿದ್ದೇವೆ. ಪವಿತ್ರವಾದ ಗಂಡ-ಹೆಂಡತಿ ಸಂಬಂಧಕ್ಕೆ ಇತ್ತೀಚೆಗೆ ಯಾಕೋ ದಿಕ್ಕುದೆಸೆ ಇಲ್ಲದಾಗಿದೆ. ಬಹುಶ: (ಅಹಂ) ಎಂಬ ಅಡ್ಡಗೋಡೆ, ಆರ್ಥಿಕ ಬಲಾಢ್ಯತೆ, ನಾನೇನು ಕಮ್ಮಿ ನಿನಗಿಂತ ಎಂಬ ಧೋರಣೆಯೂ ಇರಬಹುದು ಅನ್ನಿಸುತ್ತದೆ. ಹೀಗೆ ಓರ್ವ ಮಿತ್ರರ ಮಗ ಮೊನ್ನೆ ಭೇಟಿಯಾದಾಗ ಹೇಳಿದ ಮಾತುಗಳು 'ನಾಲ್ಕು ವರ್ಷ ನಮಗೆ ಮಕ್ಕಳು ಬೇಡ ಅಂಥ ನಿರ್ಧಾರ ಮಾಡಿದ್ದೇವೆ. ವಿದೇಶದಲ್ಲಿ ಕೆಲಸ, ಕೈತುಂಬಾ ಸಂಪಾದನೆ.ಯಾರ ನಿರ್ಧಾರ ಮಗ?  ಕೇಳಿದಾಗ ನನ್ನವಳ ಮತ್ತು ಅವಳ ತಾಯಿಯ' ಹೇಳಿದ. ಹಾಗಾದರೆ ನಿನ್ನ ಅಭಿಪ್ರಾಯ ಏನು ಎಂದಾಗ, ನನಗೆ ಈಗಾಗಲೇ ೩೬, ಅವಳಿಗೆ ೩೪ , ನನಗೆ ಮಕ್ಕಳೆಂದರೆ ಪ್ರಾಣ ಎನ್ನಬೇಕೇ? ಪತ್ನಿಗೆ ಹೇಳಿನೋಡು, ಮನಸ್ಸನ್ನು ಪರಿವರ್ತಿಸು ಎಂದೆ.' ಸಾಧ್ಯವಿಲ್ಲ, ಎಲ್ಲಾ ಹೇಳಿ, ನೋಡಿ, ಈಗ ಮೌನಿಯಾಗಿರುವೆ, ನಮ್ಮೊಳಗಿನ 'ಸಂಬಂಧ' ಹಾಳಾಗ್ತದೆ, ಹೆಚ್ಚು ಹೇಳಿದರೆ ಬೇರೆ ಬೇರೆಯಾಗಬೇಕೆಂದ. ಹಾಗಾದರೆ ಇದಕ್ಕೆ ಏನೆನ್ನಬೇಕು ಹೇಳಿ?

ಇವರಿಗೆ ಬೇಕು ಎಂದಾಗ ಕೈಗೆ ಸಿಗುವುದೇ?. ಪ್ರಕೃತಿಯನ್ನು ಅವಲೋಕಿಸಿದರೆ ಎಷ್ಟೊಂದು ಬಂಧಗಳಿವೆ, ಒಂದಕ್ಕೊಂದು ಪೂರಕ -ಪೋಷಕ.ನೆಲ-ಜಲ,ವಾಯು, ಅಗ್ನಿ, ಆಕಾಶ, ಹಸಿರು ಸಸ್ಯಗಳು ಎಲ್ಲವೂ ಒಂದಕ್ಕೊಂದು ಬೇಕು. ಸೂರ್ಯನಿಲ್ಲದೆ ಜೀವಿಗಳೇ ಇಲ್ಲ. ಚಂದ್ರಮನ ತಂಪು ಅವಶ್ಯ. 'ಭಗವಂತ-ಭಕ್ತನ ಸಂಬಂಧ ವರ್ಣನಾತೀತ' ನಮ್ಮ ಜೀವನದ ಪಕ್ವತೆಗೆ ಸಂಬಂಧಗಳ ಬೆಸುಗೆಯೇ ಕಾರಣ. ಯಾರೋ ಒಬ್ಬಾತ ಗುರುತು ಪರಿಚಯವಿಲ್ಲದವ ಒಂದು ಘಟನೆಯಲ್ಲಿ ಆಕಸ್ಮಿಕ ಹತ್ತಿರವಾಗಿ, ಬಿಡಿಸಲಾರದ ಸಂಬಂಧವೇರ್ಪಡಬಹುದು.

ಇತ್ತೀಚೆಗೆ ವಾಟ್ಸಪ್, ಫೇಸ್ಬುಕ್ ಸಂಬಂಧಗಳಲ್ಲಿ ಗುರುತುಪರಿಚಯವಿಲ್ಲ, ಭೇಟಿಯಿಲ್ಲ. ಆದರೂ ಸಂಬಂಧಗಳ ಸರಮಾಲೆ ಹೂವಮಾಲೆಯಂತೆ ನೇಯಲ್ಪಟ್ಟಿದೆ. 'ಅಪ್ಪ-ಮಕ್ಕಳ ಸಂಬಂಧ, ಪತಿ-ಪತ್ನಿ ಸಂಬಂಧ' ಹಾಳಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ನಮ್ಮ ಕರ್ತವ್ಯ ಪ್ರಜ್ಞೆಯನ್ನು ಜಾಗ್ರತಗೊಳಿಸಿ ನಮ್ಮ ಕ್ಷೇಮದೊಂದಿಗೆ ಸುತ್ತಲಿನವರ ಕ್ಷೇಮಕ್ಕಾಗಿ ಮನಸ್ಸು ಮಾಡೋಣ.

*ಸಂಬಂಧವ ನಂಬಿ ನಡೆ*

*ಅದರಲ್ಲಿ ಉನ್ನತಿಯ ಪಡೆ*

*ಅಹಮಿಕೆಯ ಬಿಟ್ಟುಬಿಡೆ* 

*ನೈಜ ಮಾನವತ್ವದಿ ನಡೆ*

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ