ಒಂದು ಒಳ್ಳೆಯ ನುಡಿ -158

ಏನಿದ್ದರೇನು? ಎಷ್ಟು ಮೆರೆದಾಡಿದರೇನು? ಎಷ್ಟು ಗಳಿಸಿದರೇನು? ಕೊನೆಗೆ ಮಣ್ಣೇ ಗತಿ ಎಂಬುದರ ಅರಿವು ಮನುಜನಿಗಿದ್ದಿದ್ದರೆ ಈ ಹಾರಾಟ, ಓಡಾಟ, ರಂಪಾಟ, ಈ ಅಹಂಗಳ ಕೂಪದಲ್ಲಿ ಬಿದ್ದು ನರಳುತ್ತಿರಲಿಲ್ಲವೋ ಏನೋ ಎಂದು ಒಮ್ಮೊಮ್ಮೆ ಅನಿಸಿದ್ದಿದೆ.
ತನ್ನ ಬೇಳೆ ಬೇಯಿಸಿಕೊಳ್ಳಲು, ತನ್ನ ಹಣದ ಪೆಟ್ಟಿಗೆ ತುಂಬಲು ಬೇರೆಯವರಿಗೆ ಮಂಕುಬೂದಿ ಎರಚಿದರೆ, ಕೊನೆಗೆ ತಾನೇ ಹಳ್ಳಕ್ಕೆ ಬೀಳುವುದಂತೂ ಖಂಡಿತ, ಇಲ್ಲವೇ ಅವನ ಮಕ್ಕಳಾದರೂ ಜೇಡರಬಲೆಯಲ್ಲಿ ಸಿಲುಕಿ ನಲುಗಬೇಕಾಗಬಹುದು, ನಾವೆಲ್ಲರೂ ಇದನ್ನೆಲ್ಲ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ನಮ್ಮ ಪರಿಚಯದ ಬಂಧು ಬಳಗದವರಲ್ಲಿ ನೋಡ್ತಾ ಇದ್ದೇವೆ. ಆದರೂ ಮಾನವನ ದಾಹಕ್ಕೆ, ಸ್ವಾರ್ಥಕ್ಕೆ ಕೊನೆಯೇ ಇಲ್ಲವೇನೋ ಕಾಣ್ತದೆ. ತನ್ನಲ್ಲಿ ಏನಿದೆಯೋ, ತನ್ನ ಪಾಲಿಗೆ ಎಷ್ಟು ದಕ್ಕಿದೆಯೋ, ತನ್ನ ಕೆಲಸ ಗಳಿಕೆ ಸಾಮರ್ಥ್ಯ ನೋಡಿಕೊಂಡು ಬದುಕು ಸಾಗಿಸಿದರೆ ತೃಪ್ತಿ. 'ಏನಾದರೂ ಆಗು ಮೊದಲು ಮಾನವನಾಗು' ಹಿರಿಯ ಕವಿಗಳ ಮನದಾಳದ ಕೂಗು. ಮೊದಲು ಮಾನವ ಎನಿಸಿದರೆ ಯಾವ ಅನಾಹುತಕ್ಕೂ ಎಡೆಯಿಲ್ಲ. ನಮ್ಮ ಹಿರಿಯರು ನಡೆದ ಹಾದಿಯ ಪ್ರಜ್ಞೆಯಿದ್ದರೆ ಸಾಕು. 'ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳಬೇಕೆಂದು' ಹೇಳುವುದಿಲ್ಲ. ಅದರ ನೆರಳ ತಂಪಿನರಿವಿರಲಿ. ಆಧುನಿಕತೆಗೆ, ತಾಂತ್ರಿಕತೆಗೆ ಒಗ್ಗಿಕೊಳ್ಳಬೇಕಾದ್ದು ಅನಿವಾರ್ಯ. ಹಾಗೆಂದು ವಕ್ರಹಾದಿ ಯಾಕೆ? ಬೇನಾಮಿ ಗಳಿಸಿದ್ದನ್ನು ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಬಳಸಿದ್ದರೆ, ಆ ಮಕ್ಕಳೂ ಒಳ್ಳೆಯ ಜೀವನ ನಡೆಸಬಹುದಿತ್ತು.ಅದು ಕೋಟಿ ಪುಣ್ಯ ಸಂಪಾದನೆಯ ಕೆಲಸ. ಇದ್ದವರಿಗೆ ಕೈನೀಡಿ ದಾನಧರ್ಮ ಮಾಡುವ ಬುದ್ಧಿ ಕೆಲವೇ ಜನರಲ್ಲಿ ನೋಡ್ತಾ ಇದ್ದೇವೆ. ಇಲ್ಲದ ಬಡವನಿಗೆ ಕೊಡುವ ಮನಸ್ಸಿದೆ, ಕೊಡಲು ತಾಕತ್ತಿಲ್ಲ. ಒಮ್ಮೊಮ್ಮೆ ನಾನು ಭಗವಂತನ ಹತ್ತಿರ ನನ್ನದೇ ಧ್ವನಿಯಲ್ಲಿ ಸಂಭಾಷಣೆ ಮಾಡುವುದಿದೆ. ಯಾಕೆ ಹೀಗೆ ಮಾಡ್ತೀಯ ಎಂಬುದಾಗಿ.ಆಗ ದೇವನು ಹೇಳುವ ಉಕ್ತಿ 'ಎಲ್ಲಾ ಅವರವರ ಕರ್ಮಾನುಸಾರ,ಪಡೆದು ಬಂದುದು* ಎಂದು.ಇರಬಹುದೇನೋ.ಎಸಗಿದ ಒಳಿತು-ಕೆಡುಕುಗಳು ಕರ್ಮದ ರೂಪದಲ್ಲಿ ಬೆನ್ನ ಹಿಂದೆಯೇ ಬರ್ತದೆಯಂತೆ. ಆದರೂ ಭಗವಂತನ ಪ್ರಾರ್ಥನೆಯನ್ನು ಶ್ರಮದ ದುಡಿಮೆಯ ರೂಪದಲ್ಲಿ ನಾವು ಕಾಣಬೇಕು. ಒಳ್ಳೆಯ ಚಟುವಟಿಕೆಗಳು ಬದುಕಿನಲ್ಲಿ ಹಾಸುಹೊಕ್ಕಾಗಿರಲಿ. ಉಪಕಾರ ಸ್ಮರಣೆ ಸದಾ ಇರಲಿ. ವಿಧ್ವಂಸಕ ಕೃತ್ಯಗಳು ಆತ್ಮವಿನಾಶದತ್ತ ಒಯ್ಯಬಹುದು, ಅದನ್ನು ತಡೆಯುವುದಕ್ಕೆ ಮನೆಮನೆಯಲ್ಲೂ ಪ್ರಯತ್ನವಿರಬೇಕು. ಬೆಂಕಿಯಿಂದ ಬೆಂಕಿಯನ್ನು ನಂದಿಸಲಾಗಲಿ, ಕಡಿಮೆ ಮಾಡಲಾಗಲಿ ಸಾಧ್ಯವಿಲ್ಲ. ದ್ವೇಷದಿಂದ ದ್ವೇಷವನ್ನು ಹೋಗಲಾಡಿಸಲು ಸಾಧ್ಯವಾಗದು .ಉಸಿರೇ ನಿಂತರೆ ಬದುಕು ಇದೆಯೇ? ಪ್ರೀತಿ, ವಿಶ್ವಾಸ, ಸಹನೆ, ನಂಬಿಕೆ ಬಾಳಿನ ಸೋಪಾನಗಳು. ದು:ಖಕ್ಕೆ ಕಾರಣವಾದ ಧನದಾಹವನ್ನು ಇತಿಮಿತಿಯಲ್ಲಿಟ್ಟು ಜೀವನ ಸಾಗಿಸುವುದು ಒಳಿತು.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ