ಒಂದು ಒಳ್ಳೆಯ ನುಡಿ - 159

ಕಣ್ಣೆದುರು ನಡೆಯುವ ಎಷ್ಟೋ ಘಟನೆಗಳನ್ನು ಅವಲೋಕಿಸಿದಾಗ 'ಹೆಣ್ಣು, ಹೊನ್ನು, ಮಣ್ಣು' ಇದೇ ಕಾರಣಕ್ಕಾಗಿ ಎಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಹಿರಿಯರ ಈ ಮಾತಿನ ತಿಳುವಳಿಕೆ, ಬುದ್ಧಿವಂತಿಕೆಗೆ ತಲೆಬಾಗಲೇ ಬೇಕು. ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಅವಲೋಕಿಸಿದರೂ ಇದೇ ಕಾಣಸಿಗುವುದು. ಯಾವುದೇ ಕತೆ ಕಾದಂಬರಿಗಳನ್ನು ಓದಿದರೂ ಇದೇ ವಿಷಯದ ಮೇಲೆಯೇ ಹೆಣಿಗೆ ಕಾಣಸಿಗುವುದು. ಹಾಗಾದರೆ ನಾವೇನು ಮಾಡಬಹುದು? ಎಲ್ಲವೂ ಇತಿಮಿತಿಯಲ್ಲಿದ್ದರೆ ಚಂದ. ಮಿತಿಮೀರಿದಾಗ ಅನಾಹುತಗಳಿಗೆ ನಾಂದಿಯಾಗುತ್ತದೆ. 'ಅತಿಯಾದರೆ ಅಮೃತವೂ ವಿಷವಾಗಬಹುದಂತೆ'. ನಮ್ಮ ಬದುಕಿಗೆ ಈ ಮೂರೂ ಬೇಕೇ ಬೇಕು. ಬಾಯಿ ಮಾತಿಗೆ ಹೇಳಬಹುದು ಹೊನ್ನಿಲ್ಲದೆ ಬದುಕಬಲ್ಲೆ ಎಂಬುದಾಗಿ, ಆದರೆ ಸಾಧ್ಯವೇ? ಅದೂ ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಮನುಜನಿಗೆ. ಹೆಣ್ಣಿಲ್ಲದೆ ಬದುಕಿಲ್ಲ, ಬಾಳಿಲ್ಲ, ಆಕೆಯೇ ಮನೆಯ ಮಹಾಲಕ್ಷ್ಮೀ. ಹೆಣ್ಣಿನ ನಾನಾ ಮುಖಗಳನ್ನು, ಜವಾಬ್ದಾರಿಗಳನ್ನು ,ಆಕೆ ನಿರ್ವಹಿಸುವ ಪಾತ್ರಗಳನ್ನು ಅರ್ಥೈಸಿಕೊಂಡು ನಡೆದರೆ ಬಾಳಿನ ಹಾದಿಗೆ ಸುಗಂಧ ಹಾಸಿದಂತೆ. ಎಲ್ಲಿ ಅರಿವಿನ ಮತ್ತು ಅರ್ಥೈಸುವ ಕೊರತೆ ಕಾಣುತ್ತದೋ ಅಲ್ಲಿ ಎಲ್ಲವೂ ಅಯೋಮಯ. ಯಾವುದೂ ಸರಿಯಾಗಿಲ್ಲ ಅನಿಸುವುದು, 'ಇವಳು ಬಂದ ಮೇಲೆಯೇ ಹೀಗೆ ಆಗುತ್ತಿದೆ' ಎನ್ನುವ ಆಪಾದನೆಗಳು ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ತನ್ನಿಂತಾನೆ ಸೃಷ್ಟಿಯಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಹೆಣ್ಣೇ ಹೆಣ್ಣಿಗೆ ಶತ್ರು. ಎಲ್ಲವೂ ಅರಿತರೆ, ಹೊಂದಾಣಿಕೆಯಲ್ಲಿ ಸಾಗಿದರೆ ಹಾದಿ ಸುಗಮ. ಇಲ್ಲದಿರೆ ನೆಮ್ಮದಿ, ಶಾಂತಿ ಕನಸಿನ ಮಾತು. ಅವಳಿಗಾಗಿ ಹೊಡೆದಾಟ ಬಡಿದಾಟಗಳು ದಿನನಿತ್ಯ ಕೇಳ್ತಾ ಇದ್ದೇವೆ. ಇದೆಲ್ಲ ತಾವಾಗಿಯೇ ಎಳೆದು ಹಾಕಿಕೊಂಡ ಪ್ರಾರಬ್ಧಗಳಲ್ಲವೇ? ಆಸ್ತಿಗಾಗಿ ಹೇಳುವುದೇ ಬೇಡ. ಕೌರವನ 'ಸೂಜಿಮೊನೆ ಊರುವಷ್ಟೂ ಜಾಗ ಬಿಟ್ಟುಕೊಡಲಾರೆ' ಎಂಬ ವಿಷಯ ತಿಳಿದೇ ಇದೆ. ಇದು ದಾಯಾದಿ ಮತ್ಸರದಿಂದ, ಹಠದಿಂದ, ಛಲದಿಂದ, ಏಕಚಕ್ರಾಧಿಪತ್ಯವೆಂಬ ಮನೋಭಾವದಿಂದ,ನಾನೋರ್ವನೇ ವಿಜೃಂಭಿಸಬೇಕೆಂಬ ವಾಂಛೆಯಿಂದ ಆಯಿತು. ವಿಧಿ ಲಿಖಿತವೂ ಸೇರಿಕೊಂಡಿರಬಹುದು, ಹಣೆಬರಹ ಬದಲಾಯಿಸಲಾಗದು. ಈಗ ಸಹ ಇವುಗಳನ್ನೆಲ್ಲ ಕಾಣಬಹುದು. ತನ್ನ ಒಂದಿಂಚು ಜಮೀನಿಗೆ ಹೋಗುವ ದಾರಿಗೆ ಬೇಲಿ ಹಾಕಿದ್ದಕ್ಕೆ ಹೆಣಗಳುರುಳುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಕುಟುಂಬ ಕಲಹಗಳು 'ಕೊಡೆ ಬಿಡೆ' ಎಂಬ ಸ್ವಾರ್ಥಕ್ಕೆ ಸಿಲುಕಿ ಮನುಜರು ಹೈರಾಣರಾಗಿರುವರು.
ಒಟ್ಟಿನಲ್ಲಿ 'ಚಾಕು ಚೂರಿ' ಸಂಸ್ಕೃತಿ ಬಂದಿದೆಯೇ ಅನ್ನಿಸುತ್ತಿದೆ. ನಮ್ಮ ಮಕ್ಕಳ, ಮೊಮ್ಮಕ್ಕಳ ಕಾಲ ಮುಂದೆ ಹೇಗೋ, ಮುಂದಿನ ಪೀಳಿಗೆ ಹೇಗೋ ಎಂಬ ಅಂಜಿಕೆ ಮನೆಮಾಡಿದೆ ಎಂದರೂ ತಪ್ಪಾಗಲಾರದು. ನಾವು ಎಚ್ಚೆತ್ತುಕೊಂಡರೆ ಏನಾದರೂ ಒಳ್ಳೆಯ ಪರಿಣಾಮಗಳನ್ನು ಎದುರು ನೋಡಬಹುದು. ನೈತಿಕ ಮೌಲ್ಯಗಳ ಕುಸಿತವ ತಡೆಯುವ ಕೆಲಸವಾಗಬೇಕು. ಸತ್ಸಂಗ, ಭಜನೆ, ಮಾಹಿತಿಗಳನ್ನು ನೀಡುವ ಕಾರ್ಯಕ್ರಮಗಳಾಗಬೇಕು. ಮನೆಮನೆಯಲ್ಲೂ ಅರಿವಿನ ಹೊನಲು ಹರಿದರೆ ಮಾತ್ರ ಏನಾದರೂ ಬದಲಾವಣೆಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಹೆಜ್ಜೆ ಊರೋಣ, ಬಂಧುಗಳೇ, ಎಲ್ಲರೂ ಕೈಜೋಡಿಸಿ ಒಂದಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂತರ್ನೆಟ್ ತಾಣ