ಒಂದು ಒಳ್ಳೆಯ ನುಡಿ - 161

ಒಂದು ಒಳ್ಳೆಯ ನುಡಿ - 161

ಸಾಹಿತ್ಯವೆನ್ನುವುದು ಬರಿಯ ಮನೋರಂಜನೆ, ಬರಹ ಸಮಯದ ಸದುಪಯೋಗ ಮಾತ್ರವಲ್ಲ. ಅದು ಮನುಷ್ಯರಿಗೆ ಜೀವನ ಪರ್ಯಂತ ಒಡನಾಡಿ, ಸ್ನೇಹಿತ, ಮಹಾಶಕ್ತಿ ಸಹ. ನಾವು ಎಷ್ಟೋ ಸಂದರ್ಭಗಳಲ್ಲಿ ಸಾಹಿತ್ಯದ ಮೊರೆ ಹೋಗ್ತೇವೆ. ನೋವನ್ನು ಮರೆಯಲು ರಹದಾರಿ. ಮನಸಿನ ಭಾವತರಂಗಗಳನ್ನು ಮೀಟಲು ಓದು, ಬರವಣಿಗೆ ದಿವ್ಯ ಔಷಧ. ಹೃದಯ ಸೌಂದರ್ಯದ ಕದವ ತೆರೆದು ಲೇಖನಿಯಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಒಂದು ಉತ್ತಮ ಪುಸ್ತಕ ನಮ್ಮ ಸ್ನೇಹಿತನಂತೆ. ನಾವು ಎಲ್ಲೇ ಹೋಗುವುದಾದರೂ ನಮ್ಮ ಕೈಚೀಲದಲ್ಲಿ ಒಂದೆರಡು ಪುಸ್ತಕಗಳಿದ್ದರೆ ಸಮಯದ ಸದುಪಯೋಗವಾಗಬಹುದು. ಮನಸ್ಸಿಗೂ ಖುಷಿ. ಒಳ್ಳೆಯ ವಿಷಯಗಳನ್ನು ಬರೆದಿಡುವ ಅಭ್ಯಾಸ ಕೆಲವು ಜನರಲ್ಲಿರುತ್ತದೆ. ಉತ್ತಮ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ಸಾಹಿತ್ಯವೇ. ಮುಂದುವರಿದ ಭಾಗವೇ ಸಂಗೀತ. ಉತ್ತಮ ಸಾಹಿತ್ಯದ ಸಂಗೀತ ಎನ್ನುವುದು ವರ್ಣಿಸಲಾಗದಷ್ಟು ಅನುಭೂತಿ ನೀಡಬಹುದು. ಓರ್ವ ಒಳ್ಳೆಯ ಸಾಹಿತಿ ಜನರ ಮೌಡ್ಯವನ್ನು ಕಳೆಯುವವನಾಗಿರಬೇಕು, ಆಗ ಬರಹ ಸಾರ್ಥಕ. ವರ್ತಮಾನದೊಂದಿಗೆ ಭೂತ ಭವಿಷ್ಯತ್ ಗಳ ಚಿಂತನೆಯಿಂದ ಒಡಗೂಡಿರಬೇಕು. ಪ್ರಸಕ್ತ ಸಮಸ್ಯೆಗಳನ್ನು, ಸತ್ಯಾಸತ್ಯತೆಗಳನ್ನು, ಎಲ್ಲರೂ ಮೆಚ್ಚುವ ವಿಷಯಗಳನ್ನು ಅಳವಡಿಸಿದರೆ ಸಾಹಿತ್ಯದಲ್ಲಿ ಗಟ್ಟಿತನ ಉಳಿಯಬಹುದು. ಪಂಡಿತ ಜವಹರಲಾಲ ನೆಹರೂರವರು ತಮ್ಮ ಒಂದು ಬರವಣಿಗೆಯಲ್ಲಿ ಬರೆದ ಸಾಲುಗಳು 'ಒಂದು ದೇಶದ ಪ್ರಗತಿಯನ್ನು ಅಲ್ಲಿಯ ಸಾಹಿತ್ಯದ ಪ್ರಗತಿಯಿಂದ ಅಳೆಯಬಹುದು' ಎಂದಿದ್ದಾರೆ. ಸಾಹಿತ್ಯದ ಶಕ್ತಿ ಜನರ ಜೀವನ, ನಡೆನುಡಿಯನ್ನೇ ಬದಲಾಯಿಸಬಹುದು.

ಪಂಡಿತನೆಂದರೆ ತನ್ನ ಪಾಂಡಿತ್ಯ ಮಾತ್ರ ಪ್ರದರ್ಶನಕ್ಕೆ ಇಡುವವನಲ್ಲ. ತನ್ನನ್ನು ಮಾತ್ರ ಜನರು, ಓದುಗರು ಮೆಚ್ಚಬೇಕೆಂಬ ಅಹಂಭಾವ ಸಲ್ಲದು. ತನ್ನ ಕುಶಲತೆಯನ್ನು ತಿಳಿಯಪಡಿಸುವವನಲ್ಲ. ತನ್ನೊಂದಿಗೆ ಇತರರಿಗೂ ಕಲಿಸುವವ, ಮೇಲಕ್ಕೆತ್ತುವವ, ಅಜ್ಞಾನಿಗಳ ಅಜ್ಞಾನವನ್ನು ಹೋಗಲಾಡಿಸುವವ, ಜ್ಞಾನವನ್ನು ಪಸರಿಸುವವ, ಸಮಾಜಕ್ಕೆ ಉತ್ತಮ ಸಂದೇಶ ನೀಡುವವನೇ ನಿಜವಾದ ಪಂಡಿತ ಅಥವಾ ಜ್ಞಾನಿ ಎನಿಸಿಕೊಳ್ಳಲು ಯೋಗ್ಯ.-ಜ್ಞಾನಯೋಗಿ

ಬರೆಯುವವನಿಗೆ ಕಟ್ಟುಪಾಡುಗಳು ಸಾಹಿತ್ಯ ಪ್ರಕಾರಗಳಿಗೆ ತಕ್ಕಂತೆ ಇರಬಹುದು. ಸಾಹಿತ್ಯ ಎನ್ನುವುದು ದೊಡ್ಡ ಆಲದ ಮರದಂತೆ. ಅದರ ನೆರಳಿನಾಶ್ರಯವಿರಬೇಕು. ಅದರ ಮೂಲ ಬೇರನ್ನು ಮರೆಯದಂತೆ ಬರವಣಿಗೆ ಸಾಗಿದಾಗ ಓದುಗರ ಹೃದಯವನ್ನು ತಟ್ಟಬಹುದು, ಮುಟ್ಟಬಹುದು. ಆದರ್ಶತನ, ರಸಾತ್ಮಕ ಚಮತ್ಕಾರಗಳ ಹೂರಣ, ಕಾಗುಣಿತ ದೋಷಗಳಿಣುಕದೆ ರಚನೆಯ ಸಾಮರ್ಥ್ಯ, ನಿಷ್ಪಕ್ಷಪಾತ ಧೋರಣೆ ಸಾಹಿತ್ಯದಲ್ಲಿ ವಿಜೃಂಭಿಸಬೇಕು. ಸಾಮಾಜಿಕ ಚಿಂತನೆಗಳ ಆಗರವಾಗಿರಬೇಕು. ಭಾಷೆ ಬೆಸೆಯುವ, ಜನರ ಒಗ್ಗೂಡಿಸುವ ಕೆಲಸ ಸಾಹಿತ್ಯದಿಂದಾಗಲಿ. ಬರೆಯೋಣ, ಓದೋಣ, ನಮ್ಮಿಂದಾದ ಕೊಡುಗೆ ಸಲ್ಲಿಸೋಣ. ಸಾಹಿತ್ಯ ನಿಂತ ನೀರಾಗದಂತೆ ಶ್ರಮಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ