ಒಂದು ಒಳ್ಳೆಯ ನುಡಿ - 162
ಊರಿಗೆಲ್ಲ ಶಾಸ್ತ್ರ ಹೇಳುವ ಮಹನೀಯರು ಬಹಳಷ್ಟು ಜನರಿರುತ್ತಾರೆ. ಆದರೆ ತಮ್ಮ ಮನೆ, ತಮ್ಮ ವಿಷಯ, ತಮ್ಮ ಸಂಸಾರದ ಬಗ್ಗೆ ಗೊತ್ತೇ ಇರುವುದಿಲ್ಲ. ಅವರ ಮನೆಯಲ್ಲಿ ಏನಾದರೂ ಘಟನೆಗಳು ಸಂಭವಿಸಿದಾಗ ನನಗೆ ಅನಿಸುವುದು'ಯಾಕೆ ಇವರಿಗೆ ಗೊತ್ತಾಗಿಲ್ಲವೆಂದು'. ಹಾಗಾದರೆ ಬದುಕಿನ ಹಾದಿಗೆ ಶಾಸ್ತ್ರದ ಆಯ್ಕೆ ಇರಬಹುದೇ? ಭೂತ-ಭವಿಷ್ಯತ್-ವರ್ತಮಾನ ಎಲ್ಲವನ್ನೂ ಹೇಳುವುದಾದರೆ ಜನರೆಲ್ಲ ಇಷ್ಟು ನೋವು ಅನುಭವಿಸುವ ಅಗತ್ಯವೇ ಇಲ್ಲ. ಚಂಡಮಾರುತವೋ, ಧಾರಾಕಾರ ಮಳೆಯೋ, ಅಪಘಾತಗಳೋ, ಆಗುವ ಸಂದರ್ಭ ಎಚ್ಚರಿಕೆ ತೆಗೆದು ಕೊಳ್ಳಬಹುದು. ಹಾಗೆ-ಹೀಗೆ, ಜೀವಕ್ಕೆ ಕುತ್ತು ಎಂದಾಗ ಮನುಷ್ಯ ಸಹಜ ಅಂಜಿಕೆಯಲ್ಲಿ ಮತ್ತೂ ಕುಗ್ಗುತ್ತಾನೆ. ಇವನ ಮಾತಿಗೆ ಮರುಳಾಗಿ ಇದ್ದ ಹಣವನ್ನೆಲ್ಲ ಆತನಿಗೆ ಕಾಣಿಕೆ ಹಾಕಲು ಹಿಂದೆ -ಮುಂದೆ ನೋಡುವುದಿಲ್ಲ. ಜೋತಿಷ್ಯ, ವಾಸ್ತು, ಯಂತ್ರ-ತಂತ್ರ ಎಂಬುದಾಗಿ ಅಲೆದಾಡಿ ಬೀದಿಗೆ ಬಂದವರನ್ನು ಈ ಸಮಾಜದಲ್ಲಿ ಬಹಳಷ್ಟು ಜನರನ್ನು ನೋಡಿದ್ದೇವೆ. ಕಾಯಿಲೆ ಬಂದಾಗಲೂ ಹೋಗಬೇಕಾದವರ ಹತ್ತಿರ ಹೋಗದೆ, ಪರಿಹಾರ ಕೇಳಲು ಹೋಗಿ, ದೋಷ ಕೇಳುವ ಹೊತ್ತಿಗೆ ರೋಗಿಯ ಉಸಿರೇ ನಿಂತದ್ದಿದೆ. ಈ ಮೌಢ್ಯತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಕಷ್ಟ ಆಗಿದೆ, ಸಾಲದಲ್ಲಿ ಮುಳುಗಿದ್ದೇವೆ, ಬೇರೆ ದಾರಿಯೇ ಇಲ್ಲ ಎಂಬುದಾಗಿ ಜೀವನಯಾನವನ್ನೇ ಮುಗಿಸುವವರು ಬಹಳಷ್ಟು ಕಂಡಿದ್ದೇವೆ. ಎಲ್ಲಿಯಾದರೂ ಹೋಗಿ ಕೂಲಿ ಮಾಡಿಯಾದರೂ ಜೀವನ ನಡೆಸಬಾರದೇ? ಆ ಪುಟ್ಟ ಕಂದಮ್ಮಗಳನ್ನು ಯಾವುದಾದರೂ ಅನಾಥಾಶ್ರಮಗಳಿಗೆ ಕೊಡಬಾರದೇ? ಪ್ರಪಂಚವನ್ನು ಇನ್ನೂ ಕಣ್ಣುಬಿಟ್ಟು ನೋಡದ ಆ ಮಕ್ಕಳನ್ನು ತಮ್ಮೊಂದಿಗೆ ಒಯ್ಯುವ ಅಗತ್ಯವಾದರೂ ಏನು? ಹುಟ್ಟಿಸಿದ ದೇವನಿಗೆ ಹುಲ್ಲು ಮೇಯಿಸಲರದಿಯದೇ? ಯಾಕೆ ಹೀಗಾಯಿತು? ಬಾಲ್ಯದಲ್ಲಿ ಹೆತ್ತವರಿಂದ, ಶಾಲೆಗಳಿಂದ, ನೆರೆಹೊರೆ ಸಮಾಜದಿಂದ ಉತ್ತಮ ಮೌಲ್ಯಗಳು ಸಿಗದ ಕೊರತೆಯಾಗಿರಬಹುದು. ಬರಿಯ ಪುಸ್ತಕದ ಬದನೆಕಾಯಿ ಅಂಕಗಳಿಕೆಗೆ ಮಾತ್ರ. ನೈತಿಕ ಮೌಲ್ಯಗಳನ್ನು ಮಸ್ತಕಕ್ಕೆ ತುಂಬುವ ಕೆಲಸ ಜೀವನ ಶಿಕ್ಷಣ ನೀಡಬಲ್ಲುದು. ಪುಸ್ತಕದ ವಿಚಾರಧಾರೆಯ ಜೊತೆ ಆಧುನಿಕ ಸಮಸ್ಯೆಗಳ ಧಾರೆಯನ್ನು, ಪುರಾತನ ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು, ಹಿರಿಯರ ನಡೆನುಡಿಗಳನ್ನು ಜೊತೆಗೂಡಿಸಿ ತರಗತಿ ಕೋಣೆಗಳೊಳಗೆ ಯಾವಾತ ಬೋಧಿಸುವನೋ ಅವನೇ ಸಮರ್ಥ ಅಧ್ಯಾಪಕ ಎಂದು ಗುರುತಿಸಲ್ಪಡುತ್ತಾನೆ. ಬಾಯಿಪಾಠ ಪದ್ಧತಿ ಹೋದರೆ ಸ್ವಲ್ಪ ಸರಿ ಆಗಬಹುದು. ಬಾಲ್ಯದ ಬೋಧನೆಗಳು ಆತನ ಬದುಕಿನ ಪಾಯ, ಜೀವಮಾನವಿಡೀ ಅವನನ್ನು ಸನ್ಮಾರ್ಗದಲ್ಲಿ ಕರೆದೊಯ್ಯಲು ಅದುವೇ ತಳಹದಿ. ಆದರೆ ಇಂದಿನ ಅಂಕಗಳಿಕೆಯ ಧಾವಂತದಲ್ಲಿ ಎಲ್ಲವೂ ಮೂಲೆಗುಂಪಾಗಿದೆ. ಸೃಜನತೆಯು ಮನದಲ್ಲೇ ಇಂಗುತ್ತಿದೆ. ಹೊರಬರಲಾರದ ಚಡಪಡಿಕೆ ಕಾಣುತ್ತಿದೆ. ಹೆಕ್ಕಿ ತೆಗೆಯುವ ಕೆಲಸವಾಗಬೇಕು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು? ಎಂಬ ಪ್ರಶ್ನೆಯಲ್ಲಿಯೇ ಕಾಲಹರಣವಾಗುತ್ತಿದೆ. ಆಯುಷ್ಯ ಸವೆಯುತ್ತಿದೆ, ಅನಾರೋಗ್ಯ ಅಪ್ಪಿಕೊಳ್ಳುತ್ತಿದೆ. ಮನುಷ್ಯ ಮಾತ್ರ ಕಲಿಯುವುದೇ ಇಲ್ಲ. ಸ್ವಂತ ವಿವೇಚನಾಶಕ್ತಿಯಿಲ್ಲದವನಾಗಿ ಇತರರ ಮಾತಿಗೆ ಮರುಳಾಗಿ ಮಣೆ ಹಾಕಿ ತನ್ನತನವನ್ನು ಕಳೆದುಕೊಂಡು ಖಾಲಿ ಕೈಗಳಲಿ ನಿಲ್ಲುವ ಪರಿಸ್ಥಿತಿ ತಂದುಕೊಳ್ಳುತ್ತಾನೆ. ಕಣ್ಣನ್ನು ಆವರಿಸಿದ ಮೌಢ್ಯದ ಪೊರೆ ಕಳಚಬೇಕು. ಆದರೆ ಕಳಚುವವರು ಯಾರು? ಹೇಳಿದ್ದನ್ನು ಕಿವಿಮೇಲೆ ಹಾಕಿಕೊಳ್ಳುವುದೇ ಇಲ್ಲ. ಪದೇಪದೇ ಹೇಳುವುದೆಂದರೆ ಸರಿಹೋಗದು, ಅದು ಮುಜುಗರ ತರುವುದು. ಹಾಗಾದರೆ ಇದಕ್ಕೆ ದಾರಿ ನಾವು ಸರಿಯಾಗಿದ್ದರಾಯಿತು. ಇದ್ದುದರಲ್ಲಿಯೇ ದುಡಿಮೆ ಮಾಡುತ್ತಾ, ಶ್ರಮವಹಿಸಿದರೆ ನೆಮ್ಮದಿಯ ಜೀವನ. ತಮ್ಮ ಹಣೆಬರಹ ಗೊತ್ತಿಲ್ಲದವರು ಬೇರೆಯವರ ಹಣೆಬರಹ ಹೇಗೆ ಹೇಳಿಯಾರು ಎಂಬ ಪ್ರಜ್ಞೆ ನಮ್ಮಲ್ಲಿರಲಿ, ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ