ಒಂದು ಒಳ್ಳೆಯ ನುಡಿ - 164
* ಪರಮಾತ್ಮನ ಒಲುಮೆಗಾಗಿ ಮೌನವಾಗಿ ಕುಳಿತು ಪ್ರಾರ್ಥನೆಯೇ ಮಾಡಬೇಕಾಗಿಲ್ಲ. ದೇವಾಲಯಗಳಿಗೆ ಹೋಗಿಯೇ ದೇವರನ್ನು ಕಾಣಬೇಕೆಂದೇನಿಲ್ಲ. ಮರವನ್ನು ಸುತ್ತಿದರೆ ಭಗವಂತನ ಆಶೀರ್ವಾದವಿದೆಯೆಂಬ ಮಾತು ಸತ್ಯವೋ ಮಿಥ್ಯವೋ ಎಂಬ ಅರಿವಿಲ್ಲ. ಆದರೆ ನಾವು ಕೈಗೊಳ್ಳುವ ಪ್ರತಿ ಕೆಲಸದಲ್ಲೂ ಭಗವಂತನನ್ನು ಕಾಣಬಹುದು. ದೀನರ, ಕೈಲಾಗದವರ, ವೃದ್ಧರ, ಹೆತ್ತವರ ಸೇವೆ ಸಹಕಾರಗಳಲ್ಲಿ ದೇವನ ದಿವ್ಯ ಸಾನಿಧ್ಯವಿದೆಯೆಂಬ ಅರಿವಿದ್ದರೆ ಸಾಕು. ಹಸಿವಿನಿಂದ ಬಳಲುತ್ತಿರುವವನಿಗೆ ಹಸಿವು ನೀಗಿಸುವುದೇ ಭಗವಂತನ ಸೇವೆ.
* ಕೈಗೊಳ್ಳುವ ಕಾರ್ಯದಲಿ ಅಪರಿಮಿತ ಆಸಕ್ತಿ,ಉತ್ಸಾಹ,ಸಾಧಿಸಲೇ ಬೇಕೆಂಬ ಹಠ, ಕಾರ್ಯದಕ್ಷತೆ, ಕ್ಷಮತೆ, ಏಕಾಗ್ರತೆ, ಸೋಲನ್ನು ಒಪ್ಪಿಕೊಳ್ಳದ ಮನೋಭಾವ ಗುಣಗಳು ಇದ್ದಲ್ಲಿ ಆತ ಎಲ್ಲವನ್ನೂ ಗೆಲ್ಲಬಲ್ಲ.
* ಇನ್ನೂ ಕಲಿಯುವುದಕ್ಕಿದೆ, ಎಲ್ಲಾ ಮಕ್ಕಳು ಕಲಿತಷ್ಟು ನಾನು ಕಲಿತರೆ ಸಾಲದು ಎಂಬ ಆಸೆ, ಆಕಾಂಕ್ಷೆ, ತುಡಿತ ಕಾಡಿನ ಬೇಡರ ದೊರೆ ಹಿರಣ್ಯಧನನ ಪುತ್ರ ಏಕಲವ್ಯನದು. ಬೇಟೆಯಾಡುವುದು, ತಿನ್ನುವುದು, ಮಲಗುವುದು ಇದಿಷ್ಟು ಜೀವನವಲ್ಲವೆಂದು ಆತನ ಮನಸ್ಸು ಸದಾ ಯೋಚಿಸಿ, ಆಚಾರ್ಯ ದ್ರೋಣರ ಶಿಷ್ಯನಾಗಬೇಕೆಂದು ಬಯಸಿತು. ಏಕಾಗ್ರತೆ, ಶ್ರದ್ಧೆ, ಕಲಿಯಬೇಕೆಂಬ ಹಂಬಲ ಆತನನ್ನು ಕಲಿಯುವಂತೆ ಮಾಡಿತಲ್ಲವೇ? ನಾವು ಸಹ ವಿದ್ಯಾಭ್ಯಾಸದ ಕಾಲದಲ್ಲಿ, ಹಿರಿಯರ ಪ್ರೋತ್ಸಾಹದೊಂದಿಗೆ ಚೆನ್ನಾಗಿ ಕಲಿತು ಬದುಕಿನ ಹಾದಿಗೆ ತೆರೆದುಕೊಳ್ಳೋಣ.
* ಕಷ್ಟ-ನಷ್ಟಗಳು ಸಾಮಾನ್ಯ. ನೋವು -ನಲಿವು, ಬೇನೆ-ಬೇಸರಿಕೆ ಎಂಬುದು ಹಾದಿಯ ಕಲ್ಲು-ಮುಳ್ಳುಗಳಿದ್ದಂತೆ. ಗುಡುಗಿನೊಂದಿಗೆ ಒಮ್ಮೊಮ್ಮೆ ಬರುವ ಮಿಂಚಿನಂತೆ. ಯಾವುದಕ್ಕೂ ಅಂಜದೆ ಎಲ್ಲವನ್ನೂ ಬದಿಗೆ ಸರಿಸಿಕೊಂಡು ಮುಂದೆ ಮುಂದೆ ಹೋಗುವುದೇ ಜಾಣತನ, ಬುದ್ಧಿವಂತಿಕೆ. ಇದೇ ಜೀವನ.
* ಎಲ್ಲವೂ ನಾವಂದುಕೊಂಡಂತೆ ಆಗಬೇಕೆಂದು ಬಯಸುವುದು ಸರಿಯಲ್ಲ. ಮೇಲಿನವನ ಆಟ ನಮಗರಿಯದು. ಪ್ರಾಮಾಣಿಕತನ ಬಾಳಗುರಿಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಐಶ್ವರ್ಯ ಇನ್ನೇನಿದೆ? ನಮ್ಮ ಮೂಗಿನ ನೇರಕ್ಕೆ ಮಾತನಾಡುವುದನ್ನು ಬಿಟ್ಟು, ಸಾಚಾತನದಿಂದ ವ್ಯವಹರಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ