ಒಂದು ಒಳ್ಳೆಯ ನುಡಿ - 165

ಒಂದು ಒಳ್ಳೆಯ ನುಡಿ - 165

ಕವಿಗೆ ಕಟ್ಟುಪಾಡುಗಳು ಬೇಡ. ನ್ಯೂನತೆಯಲ್ಲಿ ಪರಿಪೂರ್ಣತೆ, ಸಮಷ್ಟಿ ಚಿಂತನೆ, ವರ್ತಮಾನ ದರ್ಶನದ ಮೇಲೆ ಬೆಳಕು ಚೆಲ್ಲುವ ಮನೋಭಾವ, ಆದರ್ಶತನ, ರಸಾತ್ಮಕ ಚಮತ್ಕಾರ, ಕಾಗುಣಿತ ತಪ್ಪನ್ನೆಸಗದೆ ಬರೆಯುವ ಕಲೆ, ಭೂತ- ವರ್ತಮಾನ- ಭವಿಷ್ಯತ್ ನ ಸಮ್ಮಿಲನ, ಸತ್ಯಾಸತ್ಯತೆ, ನಿಷ್ಪಕ್ಷಪಾತ ಧೋರಣೆಯ ಬರಹ ಅಭಿವ್ಯಕ್ತಿ ಗೊಳಿಸುವವನೇ ನಿಜವಾದ ಒಬ್ಬ/ಳು ಕವಿ,ಬರಹಗಾರ ಅನಿಸಬಹುದು.ಹೀಗೆ ಓದಿದ್ದು - ದೇ.ಜವರೇಗೌಡ ಅವರ ಪರಿಚಯ ಲೇಖನ ಮಾಲಿಕೆಯಲ್ಲಿ...

ಎಷ್ಟು ಸತ್ಯವಲ್ಲವೇ ಅನ್ನಿಸಿತು. ನಿಜವಾಗಿಯೂ ಕಣ್ಣಿಗೆ ಕಂಡದ್ದನ್ನು, ಕಿವಿಗೆ ಕೇಳಿದ್ದನ್ನು, ತನ್ನ ಅನುಭವಗಳ ಬುತ್ತಿಯ ಸಂಗ್ರಹವನ್ನು, ಪರಿಸರದ ಆಗುಹೋಗುಗಳನ್ನು ಕವಿಯಾದವನು, ಸಾಹಿತಿಯಾದವನು ಯಾವುದೋ ಒಂದು ನೆಲೆಗಟ್ಟಿನಡಿ ಬರೆಯಬಹುದು. ಕೆಲವೊಂದು ಬರೆಹಗಳಿಗೆ 'ಹೀಗೇ ಬರೆಯಬೇಕೆಂಬ' ಕಟ್ಟುಪಾಡಿದೆ. ಅದಕ್ಕೆ ಧಕ್ಕೆ ಬಾರದಂತೆ ರಚನೆಗಳಿರಬೇಕು. ಕೆಲವಕ್ಕೆ ಪ್ರಾಸಗಳಿರಲೇ ಬೇಕು. ಎಲ್ಲದಕ್ಕೂ ಪ್ರಾಸ ತರಲು ನೋಡಿ ಒಟ್ಟಂದದಲಿ ರಚನೆಗಳೇ ಹಳ್ಳ ಹಿಡಿಯುತ್ತಿರುವುದು ಬೇಸರದ ಸಂಗತಿ. ಪ್ರಾಸಗಳು ಬರೆಯುವವನಿಗೆ ತ್ರಾಸವಾಗದಂತಿದ್ದರೆ ಚಂದ. ಅರ್ಥವೇ ಇಲ್ಲದ ಪ್ರಾಸಗಳ್ಯಾಕೆ? ತನ್ನ ರಚನೆ ಸಮಾಜಕ್ಕೊಂದು ಸಂದೇಶ ನೀಡುವಂತಿರಬೇಕು ಅದು ಮುಖ್ಯ ಅಷ್ಟೆ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ರಚಿಸಲ್ಪಟ್ಟ ಹೆಚ್ಚಿನ ಕವನ ಕಥೆಗಳನ್ನು ಓದಿದಾಗ ಪರತಂತ್ರದ ನೋವು, ಒದ್ದೋಡಿಸಬೇಕೆಂಬ ತುಡಿತ, ಸ್ವಾತಂತ್ರ್ಯದ ಕಿಚ್ಚು, ಹೊಗೆಯ ಭಾವವು ಬಿಂಬಿತವಾದ್ದು ಸ್ಪಷ್ಟ. ದೇಶ ಕಾಲಕ್ಕೆ ಸರಿಯಾದ ಬರವಣಿಗೆಗಳು ಪೂರಕ. ಕೊರೊನಾ ಸಂಕಷ್ಟ ಸಮಯದಲ್ಲಿ ಮನೆಯಿಂದ ಹೊರಬರಲಾಗದ ಸ್ಥಿತಿ. ಅದೆಷ್ಟು ಸಾಹಿತ್ಯ ಪ್ರೋತ್ಸಾಹಕ ಜಾಲತಾಣ ಬಳಗಗಳು ತಲೆಯೆತ್ತಿ ಬರೆಯುವವರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿತು. ಕೊರೊನಾದ ಬಗ್ಗೆಯೇ ಲೇಖನಗಳು ಬರೆಯಲ್ಪಟ್ಟಿತು. ವರ್ತಮಾನದ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಸಾಹಿತ್ಯ ಇನ್ನಷ್ಟು ಬರಬೇಕು. ಭವಿಷ್ಯದಲ್ಲಿ ಹಾಗಾಗಬಹುದೇ? ಹೀಗಾದರೆ ಹೇಗೆ? ಎಂಬ ಚಿಂತನೆ ಅವಶ್ಯವಾಗಿ ಬೇಕು. ಜಳ್ಳು ಪೊಳ್ಳುಗಳೆಲ್ಲ ಹೋಗಿ ಉತ್ತಮ ಸಾಹಿತ್ಯ ಪ್ರಕಾರಗಳು ಉಳಿಯಲಿ, ಬೆಳೆಸಲಿ, ಬೆಳೆಯಲಿ, ಮಾದರಿಯಾಗಲಿ ಕಿರಿಯರಿಗೆ ಎಂಬ ಆಶಯ. ಕಾಗುಣಿತ ದೋಷಗಳನ್ನು ಓರ್ವ ಲೇಖಕನಾದವ ಗಮನಿಸಲೇ ಬೇಕು. ಎಷ್ಟು ಉತ್ತಮ ಬರವಣಿಗೆಯಾದರೂ ಅಕ್ಷರದೋಷ ಕಂಡಾಗ ಅರ್ಥ ಹೋಗಿ ಅನರ್ಥ, ಅಪಾರ್ಥ ಆಗುವುದು ಸಹಜ. ಓರ್ವ ಬರಹಗಾರನಿಗೆ ತನ್ನ ಕೆಲವು ಪ್ರಕಾರದ ಬರವಣಿಗೆಯಲ್ಲಿ ಹಿಡಿತವಿರುತ್ತದೆ.ಅದನ್ನು ಅವನು ಸೊಗಸಾಗಿ ಬರೆಯಬಲ್ಲ. ಹಾಗೆಂದು ಎಲ್ಲಾ ಪ್ರಕಾರಗಳನ್ನು ಬರೆಯುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಸ್ಪರ್ಧೆಗಳಲ್ಲಿ ನೀಡಿದ್ದನ್ನು ಮನಸ್ಸಿದ್ದರೆ ಕಲಿತಾದರೂ ಬರೆಯಬಹುದು. ಹಾಸ್ಯ, ವಿಡಂಬನೆ, ಗಂಭೀರ, ಚಿಂತನೆ, ನಗು, ಸತ್ಯಾಂಶಗಳ ಬಗ್ಗೆ, ಕಥೆಯೋ, ವರದಿಯೋ, ಚರ್ಚೆಯೋ, ಕವನಗಳೋ ವಿವಿಧ ಪ್ರಕಾರಗಳಲ್ಲಿ ಇರಬಹುದು. ಆದರೆ ಒಬ್ಬರನ್ನು ಕಾಲೆಳೆಯುವ, ತುಳಿಯುವ, ಮನಸ್ಸನ್ನು ಮುದುಡಿಸುವ ಸಾಹಿತ್ಯ ಒಮ್ಮೆಗೆ ಜಯಿಸಿದರೂ, ಅನಂತರ ಬಿದ್ದು ಹೋಗಬಹುದು. ಸಾಹಿತ್ಯದಲ್ಲಿ ಕಲ್ಪನೆಯ ಹೆಣಿಗೆ ಎದ್ದು ಕಾಣುವುದು ಸಹಜವಾದರೂ ವಾಸ್ತವಕ್ಕೆ ಹತ್ತಿರವಿದ್ದಾಗ ವಿಜೃಂಭಿಸಬಹುದು. ನಾನು ಬರೆದದ್ದೇ ಸರಿ, ಎಲ್ಲರೂ ಅದನ್ನೇ ಅನುಕರಣೆ ಮಾಡಲಿ ಎಂಬ ಧೋರಣೆ ಬೇಡ. ಅವರವರ ಭಾವ, ಅನುಭವಕ್ಕೆ ಬಿಟ್ಟ ವಿಚಾರ. ಚೌಕಟ್ಟಿನೊಳಗಿರಬೇಕಾದ್ದಕ್ಕೆ ಗಮನ ನೀಡುತ, ತೋಚಿದ್ದನ್ನು ಗೀಚುವಾಗ ಸಾರವನ್ನು ಉಳಿಸಿಕೊಳ್ಳುವತ್ತ ಹೆಜ್ಜೆಯೂರೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ