ಒಂದು ಒಳ್ಳೆಯ ನುಡಿ (167) - ಸ್ನೇಹ
'ಸ್ನೇಹ' ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ. ನಾವೇ ಅರಸುತ್ತ ಗಳಿಸಿಕೊಳ್ಳಬೇಕು ಇಲ್ಲವೇ ಅದಾಗಿಯೇ ಲಭಿಸಬೇಕು. ಅದು ಹೃದಯದಿಂದ ಮೂಡಬೇಕು. 'ಸ್ನೇಹಿತರೇ' ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ (ಸುದಾಮ) ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿಕೆ ಅಳೆತಗೂ ಸಿಗದು.
ಬದುಕಿನ ನೋವು ನಲಿವು, ಸುಖ ದುಃಖ ಹಂಚಿಕೊಳ್ಳಲು 'ಸ್ನೇಹಿತರಷ್ಟು' ಬೇರೆ ಯಾರೂ ಸಿಗರು. ಹೃದಯದೊಳಗೆ ಬಂಧಿಸಲ್ಪಟ್ಟ, ಹುದುಗಿದ ಎಷ್ಟೋ ವಿಷಯಗಳನ್ನು ಸ್ನೇಹಿತರಲ್ಲಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ. ಬಹಳ ಸಂಕಷ್ಟದಲ್ಲಿ ಸಿಕ್ಕಿಬಿದ್ದಾಗ ಎಲ್ಲರೂ ದೂರ ಹೋಗುವರು, ಆದರೆ ನಿಜವಾದ ಸ್ನೇಹಿತರು ಹತ್ತಿರವೇ ನಿಂತು ಸಹಕಾರ, ಸಾಂತ್ವನ ಎರಡೂ ಹೇಳುವರು. ಜೀವಕ್ಕೆ ಜೀವ ಕೊಡುವ ಸ್ನೇಹಿತರು ತುಂಬಾ ಜನ ಇದ್ದಾರೆ. ಉತ್ತಮ ಸ್ನೇಹಿತರು ಸಿಗಲೂ ಪುಣ್ಯ ಮಾಡಿರಬೇಕು. ಕೆಲವು ಮಂದಿ ಗೆಳೆಯರಂತೆ ನಾಟಕವಾಡಿ ಬೆನ್ನಿಗೆ ಇರಿಯುವವರೂ ನಮ್ಮ ನಿಮ್ಮ ನಡುವೆ ಇದ್ದಾರೆ. ಅಂಥವರಿಂದ ಆದಷ್ಟೂ ದೂರವಿದ್ದರೆ ಲೇಸು.
ಕೊರೊನಾದಂತಹ ಕಷ್ಟಕಾಲದಲ್ಲಿ ಸ್ನೇಹಿತರು ಹೆಗಲಿಗೆ ಹೆಗಲಾದದ್ದನ್ನು ಮರೆಯಲು ಸಾಧ್ಯವೇ? ಎಷ್ಟೋ ವರುಷಗಳ ಅನಂತರ ಭೇಟಿಯಾದಾಗ ಸ್ನೇಹಿತರ ಪ್ರೀತಿಯ ಮಾತುಗಳ ಓಘವನ್ನು ವರ್ಣಿಸಲಸದಳ. ಮನಸ್ಸಿಗಾಗುವ ಆನಂದ, ಸಂತೋಷ ಅಪರಿಮಿತ. ಕಷ್ಟವೆಂಬ ಸಾಗರದಲ್ಲಿ ಬಿದ್ದು ತೊಳಲಾಡುತ್ತಿರುವಾಗ ಎಲ್ಲರೂ ಕೈಬಿಡುವವರೇ, ಹತ್ತಿರ ಹೋದರೆ ಎಲ್ಲಿ ತಮ್ಮ ಕಿಸೆಗೆ ಸಂಚಕಾರ ಬರುವುದೋ ಎಂದು ದೂರಸರಿಯುತ್ತಾರೆ. ಆದರೆ ನಿರ್ಗತಿಕರಾಗಿದ್ದರೂ ಗೆಳೆಯರು ಮಾತ್ರ ಹತ್ತಿರ ಬಂದು ಎಬ್ಬಿಸಲು ನೋಡಿ, ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿ ಯಾವ ಸ್ನೇಹಿತರಲ್ಲೂ ಭಿನ್ನಾಭಿಪ್ರಾಯ ಬರುವುದಿದೆ ಅಥವಾ ಇಬ್ಬರ ಮಧ್ಯೆ ತಂದಿಕ್ಕಿ ಚಂದ ನೋಡುವವರೂ ಇದ್ದಾರೆ. ಈ ವಿಷಯದಲ್ಲಿ ನಾವು ನಾವೇ ಜಾಗ್ರತೆ ವಹಿಸಬೇಕು. ಸ್ನೇಹ ಎನ್ನುವುದು ಸುಲಭದಲ್ಲಿ ಗಳಿಸಲಾಗದು. ನೋಡಿ ಮಾತನಾಡಿದ ಕೂಡಲೇ ಗೆಳೆಯರಾಗಲು ಸಾಧ್ಯವಿಲ್ಲ. ಹೇಗೆ? ಎಷ್ಟು? ಸ್ವಭಾವ ನೋಡಿ ಗೆಳೆತನ ಮಾಡಬೇಕು, ಇಲ್ಲದಿದ್ದರೆ 'ಕುರಿ ಹಳ್ಳಕ್ಕೆ' ಬಿದ್ದಂತಾಗಬಹುದು.
ಇಂದಿನ ಕಾಲಘಟ್ಟದಲ್ಲಿ ಸ್ನೇಹಿತರ ಅವಶ್ಯಕತೆ ಬಹಳವಿದೆ. ಬಹಳ ಹಿಂದಕ್ಕೆ ನೋಡಿದರೆ ಅವಿಭಕ್ತ ಕುಟುಂಬಗಳಲ್ಲಿ ಎಲ್ಲರೂ ಒಟ್ಟಾಗಿ ಇರುತ್ತಿದ್ದರು. ಇಂದು ಚಿಕ್ಕ ಕುಟುಂಬಗಳನ್ನೇ ಕಾಣ್ತಾ ಇದ್ದೇವೆ. ಪರಸ್ಪರ ಸಹಾಯಕ್ಕೆ ಸ್ನೇಹಿತರೇ ಬೇಕಾಗಿ ಬರಬಹುದು. ಒಬ್ಬರಿಗೊಬ್ಬರು ನೆರವಾಗುವುದು ಮಾನವೀಯತೆ ಸಹ. ಮನೆಯ ಸದಸ್ಯರು ಕಷ್ಟಕ್ಕೆ ಒದಗಿ ಬರದಿದ್ದರೂ ಜೀವಕ್ಕೆ ಜೀವ ನೀಡುವ ಗೆಳೆಯರನ್ನು ನಮ್ಮ ಸುತ್ತಮುತ್ತ ನೋಡುತ್ತೇವೆ.
ಸ್ನೇಹದಲ್ಲಿ ಜಾತಿ, ಮತ, ಧರ್ಮ, ಸಿರಿತನ, ಬಡತನ ಅಹಂಕಾರ ಸಲ್ಲದು. ಸ್ನೇಹದ ಉಸಿರು ಎಲ್ಲೆಡೆ ಪಸರಿಸಲಿ,ಪ್ರೀತಿಯ ಬೆಸುಗೆ ನಳನಳಿಸಲಿ ಎನ್ನುವ ಆಶಯದೊಂದಿಗೆ ಅಂತರಾಷ್ಟ್ರೀಯ ಸ್ನೇಹಿತರ ದಿನದ ಶುಭಹಾರೈಕೆಗಳು.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ