ಒಂದು ಒಳ್ಳೆಯ ನುಡಿ - 169

* ಮನುಷ್ಯತ್ವಂ ಹಿ ದುರ್ಲಭಮ್ ಮನುಷ್ಯ ಜನ್ಮವು ಮಹಾ ದುರ್ಲಭವಾದುದು. ಮಾನವರಾಗಿ ಹುಟ್ಟಿದ ಮೇಲೆ ಮನುಷ್ಯತ್ವ ಎಂಬುದು ಮತ್ತೂ ದುರ್ಲಭ. ಹಾಗಾದರೆ ಇದನ್ನು ಧರ್ಮಾಚರಣೆಯಿಂದ, ಧರ್ಮ, ಕರ್ಮ, ಕಾರ್ಯಗಳಿಂದ ಪಡೆದುಕೊಳ್ಳಬಹುದು. ಧರ್ಮವೇ ಹೆತ್ತವರ ಸೇವೆ, ಧರ್ಮವೇ ಸಹೋದರ ಸಹೋದರಿಯರ ಪ್ರೀತಿ ಬಾಂಧವ್ಯ, ಧರ್ಮವೇ ಕುಟುಂಬ ಜೀವನ ಧರ್ಮವೇ ನೆರೆಹೊರೆ. ಹಸಿದವನ ಹೊಟ್ಟೆ ತುಂಬಿಸುವುದು ಧರ್ಮ. ಪಾಪ ಕಾರ್ಯಗಳನ್ನು ಮಾಡದಿರುವುದೇ ಧರ್ಮ.
* ಕಣ್ಣಿಲ್ಲದವರನ್ನು ಕುರುಡರೆಂದು ಹೇಳುವುದು ವಾಡಿಕೆ. ಆದರೆ ಕೆಲವು ಜನರು ಕಣ್ಣಿದ್ದೂ ಸಮಾಜದಲ್ಲಿ ಕುರುಡರೆನಿಸಿಕೊಳ್ತಾರೆ. ತನ್ನಲ್ಲಿರುವ ಎಲ್ಲಾ ತಪ್ಪುಗಳನ್ನು ಮುಚ್ಚಿಡುವವರು ಮಹಾಕುರುಡರು. ಇವರ ಒಳಗಣ್ಣ ತೆರೆಯಲು ಸೃಷ್ಟಿಸಿದ ಬ್ರಹ್ಮನಿಗೂ ಸಾಧ್ಯವಿಲ್ಲ. ಇತರರಿಗೆ ಕೆಡುಕು ಮಾಡುವುದು, ಅದನ್ನು ಹೇಳುವುದು, ಏನೂ ಸಹಕರಿಸದೇ ಇರುವುದು, ಬಿದ್ದಾಗ ಕೈಕೊಡದಿರುವುದು ಇವೆಲ್ಲ ಕಣ್ಣಿದ್ದೂ ಕುರುಡರೆನಿಸಿಕೊಂಡವರ ದುರ್ಗುಣಗಳು. ಮೂರು ದಿನದ ಜೀವನದಲ್ಲಿ ಕುರುಡರಾಗದಿರಲು ಪ್ರಯತ್ನಿಸೋಣ.
* ಬೆಂಕಿಯಿಂದ ಬೆಂಕಿಯನ್ನು ನಂದಿಸಲು ಸಾಧ್ಯವಿಲ್ಲ. ಪಾಪದ ಕೆಲಸಗಳಿಂದ ಮತ್ತಷ್ಟೂ ಪಾಪ ಕಾರ್ಯಗಳನ್ನು ತಡೆಯಲಾಗದು. ಪಾಪವನ್ನು ಪಾಪವೇ ಅಳಿಸಲಾಗಲಿ, ಕಡಿಮೆ ಮಾಡಲಾಗಲಿ ಸಾಧ್ಯವಿಲ್ಲ. ಜೊತೆಗೆ ಒಂದಿಷ್ಟು ನೈತಿಕಮೌಲ್ಯಗಳನ್ನು ಮಾತುಕೃತಿಯಲಿ ಅಳವಡಿಸಿ ಕಡಿಮೆ ಮಾಡಿಕೊಳ್ಳಬಹುದಷ್ಟೆ.
* ಮಾತು ಮುತ್ತು ಪೋಣಿಸಿದಂತಿರಬೇಕು. ಕೇಳಲು ಅಪ್ಯಾಯಮಾನವಾಗಿರಬೇಕು. ಹಿತಕರವಾಗಿರಬೇಕು. ಕೆಲವರಿಗೆ ಉತ್ತಮ ಮಾತುಗಾರಿಕೆ ದೈವೀ ಕೊಡುಗೆ. ಇನ್ನು ಕೆಲವರು ಆರ್ಜಿಸಿಕೊಂಡದ್ದು, ಕೇಳಿ ಕಲಿತದ್ದೂ ಇದೆ.
*ಅನುದ್ವೇಗಕರಂವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್/*
*ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ//ಉದ್ವೇಗ ರಹಿತ, ಎಲ್ಲರಿಗೂ ಪ್ರಿಯವೂ, ಸತ್ಯವೂ, ಹಿತಕರವೂ ಆದ, ಸ್ವತ: ಅಧ್ಯಯನದಿಂದ ಗಳಿಸಿದ ಮಾತುಗಳೆಲ್ಲ ತಪಸ್ಸಿನಂತೆ. ಎಲ್ಲರಲ್ಲೂ ನೈಜ ಮಾತುಗಳನ್ನಾಡೋಣ, ಅದಕ್ಕೆ ಧನ ಖರ್ಚಿಲ್ಲ, ಕೃತ್ತಿಮತೆ, ಜಿಪುಣತನ ಬೇಡ.
* ಮನೆಯ ಹಿರಿಯರು ಅಮೂಲ್ಯ ಆಭರಣಕ್ಕೆ ಸಮ. ಅವರ ಒಂದೊಂದು ನುಡಿಗಳು ರತ್ನವೇ. ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವುತ್ತೇವೆ ಅಷ್ಟೆ. ಅರ್ಥ ಆಗುವ ಕಾಲಕ್ಕೆ ಹಿರಿಯರನ್ನು ಕಳಕೊಂಡಾಗಿರುತ್ತದೆ. ಅನಂತರ ಪೇಚಾಡಿದರೆ ಏನು ಪ್ರಯೋಜನ? ಅವರ ಅನುಭವಕ್ಕೆ ಬೇರಾವುದೂ ಸರಿಸಮ ಆಗಲಾರದು. ಉತ್ತಮ ಬದುಕು, ಪ್ರೀತಿ, ಗೌರವ ಕೊಟ್ಟು ಅವರುಗಳ ಹಿತವನ್ನು ಕಾಪಾಡೋಣ.
-ರತ್ನಾ ಕೆ. ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ