ಒಂದು ಒಳ್ಳೆಯ ನುಡಿ (17) - ಸುರಕ್ಷತೆ

ಒಂದು ಒಳ್ಳೆಯ ನುಡಿ (17) - ಸುರಕ್ಷತೆ

*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲಿ ಹೋದರೂ ಹೇಳುವುದು, ಕೇಳುವುದು ಒಂದೇ *ಕೊರೊನಾ*.

ಹೌದು ಸ್ನೇಹಿತರೇ  ನಾವು ಜಾಗೃತೆ ಮಾಡಲೇ ಬೇಕು. ಇಲ್ಲದಿದ್ದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ನಾವು ಬೇಕಾಬಿಟ್ಟಿ ತಿರುಗಾಟ ಮಾಡುವುದು, ಎಲ್ಲೆಂದರಲ್ಲಿ  ಹೋಗಿ ಆಹಾರ ಸೇವಿಸುವುದು, ಅಂಗಡಿಗಳಿಂದ ಖರೀದಿಸಿ ಅಲ್ಲಿಯೇ ತಿನ್ನುವುದು, ಹಣ್ಣುಗಳನ್ನು ಸ್ವಚ್ಛಮಾಡದೆ ತಿನ್ನುವುದು ಇದೆಲ್ಲ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ.

ಕೈಗಳನ್ನು *ಸ್ಯಾನಿಟೈಸರ್*ಹಾಕಿ ತೊಳೆಯಿರಿ, ಮುಖಕ್ಕೆ *ಮುಖಗೌಸು*ಹಾಕುವುದು,ಮಾತನಾಡುವಾಗ ಅಂತರ ಕಾಪಾಡುವುದು ಇವೆಲ್ಲವೂ ‌ಸುರಕ್ಷತೆಯ ಕ್ರಮಗಳಿರಬಹುದು. ಆದರೆ ಇದೇ ವಸ್ತುಗಳಿಂದ ನಮ್ಮ ಆರೋಗ್ಯ ಕೆಡಬಾರದಲ್ಲ? ಸ್ಯಾನಿಟೈಸರ್ ವಾಸನೆ *ಅಲರ್ಜಿ*ಇದ್ದವರಿಗೆ ಆಗುವುದಿಲ್ಲ. ಮುಖಗೌಸು ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಕ್ರಮೇಣ ಆತ ಏದುಸಿರು ಬಿಡುತ್ತಾನೆ. ಮಾತನಾಡದೆ ಸ್ವಲ್ಪ ದಿವಸ ಇರಬಹುದು, ಆದರೆ ಜೀವನಕ್ಕಾಗಿ ಹೋರಾಟ ಮಾಡಬೇಕಲ್ಲ?

ಜನಜಂಗುಳಿಯಿಂದ ದೂರ ಇರುವುದು *ಸುರಕ್ಷತೆ*ಯೇ ಆಗಿದೆ. ಅಲಕ್ಷ್ಯ ಮಾಡಿದರೆ ನಮ್ಮ ಅಮೂಲ್ಯವಾದ ಬದುಕಿಗೆ *ಇತಿಶ್ರೀ*ಹಾಡಬೇಕಾದೀತು. ನಮ್ಮ ಜೀವ ಈಗ ನಮ್ಮ ಕೈಯಲ್ಲಿ, ಆಟ ಭಗವಂತನದು ಅಷ್ಟೇ ಹೇಳಬೇಕಷ್ಟೆ. ಮುನ್ನೆಚ್ಚರಿಕೆ ಕ್ರಮಗಳೇ *ಸುರಕ್ಷತೆ*.ಮಗು ಶಾಲೆಗೆ, ಆಟಕ್ಕೆ ಹೋಗುವಾಗ ಜಾಗೃತೆ ಪದವನ್ನು ಬಳಸುತ್ತೇವೆ . ಇದು ಸಹ ನಿನ್ನನ್ನು ನೀನು ಸುರಕ್ಷಿತವಾಗಿಡು ಎಂಬ ಎಚ್ಚರಿಕೆಯ ಕರೆಗಂಟೆಯೇ ಆಗಿದೆ‌. ಗಾಳಿ, ನೀರು, ಬೆಂಕಿ ಇವುಗಳ ಜೊತೆ ಯಾವತ್ತೂ ಆಟ ಆಡಬಾರದು, ಇವು ನಮಗೆ ಎಷ್ಟು ಸಹಾಯ ಮಾಡಲು ಬೇಕೋ ಅಷ್ಟೇ ಅಪಾಯ ಸಹ ಇದೆ. ಇತ್ತೀಚೆಗೆ ಮನೆಗಳಲ್ಲಿರುವ ವಿದ್ಯುತ್ ಉಪಕರಣಗಳಿಂದಲೂ ಅಪಾಯವಿದೆ. ಅಲ್ಲಿಯೂ ಸುರಕ್ಷತೆ ಬೇಕೇ ಬೇಕು. ಗಾಳಿಮಳೆ ಜೋರಾಗಿ ಬರುತ್ತಿರುವಾಗ ದೊಡ್ಡ ಮರದಡಿಯಲ್ಲಿ ಆಶ್ರಯ ಪಡೆದ  ನಮಗೆ ನೆಮ್ಮದಿಯಿಲ್ಲ, ಆ ಮರ ಎಲ್ಲಿ ಬೀಳ್ತದೋ ಎಂಬ ಅಂಜಿಕೆಯೂ ಇರಬೇಕು. ಒಟ್ಟಿನಲ್ಲಿ *ಸುರಕ್ಷತೆ*ಯ ಎಲ್ಲಾ ನಿಯಮಗಳನ್ನು ಅರಿತು ಬಾಳ ದೋಣಿಯನ್ನು ನಡೆಸೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್