ಒಂದು ಒಳ್ಳೆಯ ನುಡಿ - 171

ಒಂದು ಒಳ್ಳೆಯ ನುಡಿ - 171

* ದುಷ್ಟರು ಶಿಷ್ಟರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಅವರ ಇರುಳು-ಹಗಲು, ನೋವು-ನಲಿವು, ಕಷ್ಟ-ಸುಖದಂತೆ ನಮ್ಮೊಂದಿಗೆ ನಮ್ಮೊಳಗೆ ಬೆರೆತಿರುತ್ತಾರೆ. ಆದರೆ ನಮಗೆ ಗೊತ್ತಾಗುವಾಗ ಎಲ್ಲವನ್ನೂ ಅನುಭವಿಸಿ ಆಗಿರುತ್ತದೆ. ಅನಂತರ ಯೋಚಿಸುವಾಗ ಅರಿವಿಗೆ ಬರುತ್ತದೆ. ನಾವು ಏನೂ ತಪ್ಪು ಮಾಡದೆ ನಮ್ಮಷ್ಟಕ್ಕೇ ಇದ್ದರೂ ಒಮ್ಮೊಮ್ಮೆ ಸಿಕ್ಕಿ ಬೀಳುವುದೆಂದರೇ ಇದೇ ಆಗಿದೆ. ತಿಳಿದೂ ತಿಳಿದೂ ಹೊಂಡಕ್ಕೆ, ಕೆಸರಿಗೆ ಬೀಳ್ತೇವೆ.ಹಿರಿಯರು ಹೇಳುವುದೊಂದೇ ವಿಧಿಬರಹ ತಪ್ಪಿಸಲಾಗದೆಂದು.ಹಾಗಾದರೆ ತಪ್ಪುಗಳು ಕರ್ಮದ ಫಲದಿಂದ ಲಭ್ಯವಿರಬಹುದೇನೋ,ಬೆನ್ನು ಬಿಡದ ಬೇತಾಳನಂತೆ ಬಂದದ್ದಿರಬಹುದೇನೋ ಅನ್ನಿಸ್ತದೆ. ಜ್ಞಾತ-ಅಜ್ಞಾತವೆಂಬ ಎರಡು ರೀತಿಯ ಪಾಪಗಳಿವೆಯಂತೆ. ಇಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಳ್ಳೋಣ, ಮುಂದೆ ನಮ್ಮೊಂದಿಗೆ ಬರುವುದು ಬೇಡ ಅಲ್ಲವೇ?

* ಆ ಮಧುಸೂದನ, ಕೇಶವ, ಅಚ್ಚುತ, ನಾರಾಯಣ, ಗೋವಿಂದ, ಮುಕುಂದ, ಮುರಾರಿ, ಅಸುರಾರಿ ಭಗವಾನ್ ಶ್ರೀಕೃಷ್ಣನನ್ನು ಸ್ಮರಿಸುತ್ತಾ ಒಂದೊಳ್ಳೆಯ ಕಾರ್ಯಗಳನ್ನು ದಿನನಿತ್ಯದ ಹಾದಿಯಲ್ಲಿ ಕಾಯಕದಲ್ಲಿ, ವ್ಯವಹಾರದಲ್ಲಿ, ನಡೆನುಡಿಯಲ್ಲಿ ಅನುಸರಿಸಲು ಸಾಧ್ಯವಿದ್ದಷ್ಟೂ ಪ್ರಯತ್ನಿಸೋಣ.

*ಅಭ್ಯಾಸಾದ್ಧಾರ್ಯತೇ ವಿದ್ಯಾ ಕುಲಂ ಶೀಲೇನ ಧಾರ್ಯತೇ/*

*ಗುಣೇನ ಧಾರ್ಯತೇ ತ್ವಾರ್ಯ: ಕೀರ್ತ್ಯಾ ಸರ್ವಂ ಹಿ  ಧಾರ್ಯತೇ//*

*ಸುಭಾಷಿತದಲ್ಲಿ ನಾವು ಒಂದೆಡೆ ಓದಿದಂತೆ ಕೀರ್ತಿ ಎನ್ನುವುದರ ಧಾರಣಶಕ್ತಿಯ ಬಗ್ಗೆ ಕಠಿಣ ಪರಿಶ್ರಮ ಬೇಕು.ಸುಖಾಸುಮ್ಮನೆ ಹೆಸರು ಬಾರದು.ಅನ್ಯಮಾರ್ಗ ಹೆಸರಿಗಾಗಿ ಹಿಡಿಯಬಾರದು. ಚೆನ್ನಾಗಿ ಅಭ್ಯಾಸ ಮಾಡಿದಾಗ ವಿದ್ಯೆ ಸಿಗಬಹುದು. ನಕಲು ಮಾಡಿದರೆ ಅಂಕಗಳು ದೊರೆಯಬಹುದು, ಆದರೆ ಬುದ್ಧಿವಂತಿಕೆ, ಜಾಣ್ಮೆ ಶೂನ್ಯ. ಮರ್ಯಾದೆ, ಶಿಷ್ಟಾಚಾರ ಮನೆತನವನ್ನು ಉಳಿಸಬಹುದು. ಬದುಕಿನ ಚೌಕಟ್ಟನ್ನು ಹಾರಿ, ಬೇಲಿಯನ್ನು ದಾಟಿ ಹೊರಗೆ ಹೋದವನಿಗೆ ಯಾವ ಮರ್ಯಾದೆಯೂ ಇಲ್ಲ. ಸದ್ಗುಣ ಮನುಷ್ಯನ ವ್ಯಕ್ತಿತ್ವವನ್ನು ಕಾಪಾಡುತ್ತದೆ. ಅದೇ ಇಲ್ಲದವ ಬದುಕಿದ್ದರೂ ಸತ್ತ ಫಲ. ಒಮ್ಮೆಗೆ ಮೋಸ ಮಾಡಿ ಜಯಿಸಿದೆ ಎಂದು ಬೀಗಬಹುದು, ಅನಂತರ ಕೆಳಗೆ ಬಿದ್ದಾಗ ಯಾರೂ ಬರಲಾರರು. ಎಲ್ಲವೂ ಕೀರ್ತಿಯಿಂದ ಉಳಿಯುತ್ತದೆ. ಧಾರಣಶಕ್ತಿ ಉತ್ತಮವಾಗಿರಲು ಶ್ರಮಿಸಬೇಕು. ನೇರ ದಾರಿಗಳ ಹಿಂದೆ ಸಾಗಬೇಕು.

* ಉತ್ತಮ ಕಾರ್ಯಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸಬೇಕು ಹೊರತು ಋಣಾತ್ಮಕ ಭಾವನೆಗಳನ್ನು ಹರಿಯಬಿಡಬಾರದು. ಪ್ರಶಂಸೆ, ಹೊಗಳಿಕೆ ಬದುಕಿನ ಒಂದೊಂದೇ ಮೆಟ್ಟಿಲುಗಳನ್ನೇರಲು ಸಹಕಾರಿಯಾಗುವಂತಿರಲಿ.

ಹೊಗಳಿಕೆಗೆ ಇತಿಮಿತಿಗಳಿದ್ದರೆ ಚಂದ.

*ಪ್ರಶಂಸಾ ನಕ್ರಸಂಕಾಶಾ ನರಾನಾಂತಂ ಗಿಲತ್ಯಹೋ/*

*ಆಕ್ಷೇಪ: ಸ್ನಾನಸಂಕಾಶಾ: ಕ್ಷಾಲಯತ್ಯಾಂತಮಂಜಸಾ//*

*ಅಂಕೆಯಿಲ್ಲದ ಹೊಗಳಿಕೆಯು ಮೊಸಳೆಯಂತೆ ಮನುಷ್ಯರನ್ನು ನುಂಗಿನೊಣೆಯಬಹುದು.ಹೊಗಳಿಕೆ, ವಿಮರ್ಶೆ, ಬೆನ್ನುತಟ್ಟುವಿಕೆ  ಎಂಬುದು ವಿವೇಕದಿಂದ, ವಿವೇಚನೆಯಿಂದ ಕೂಡಿದ್ದರೆ ತೀರ್ಥಸ್ನಾನದಂತೆ ನಮ್ಮನ್ನು ಬಾಹ್ಯ-ಆಂತರ್ಯ ಎರಡನ್ನೂ ಸ್ವಚ್ಛ ಗೊಳಿಸಿ, ಇನ್ನಷ್ಟು ಉತ್ತಮಗೊಳಿಸಲು ಸಹಕಾರಿಯಾಗಬಹುದು.

* ಶಿಕ್ಷಣ ಎಂದರೆ ಓದುವಿಕೆ, ಬರೆಯುವಿಕೆ, ಜ್ಞಾನ ಸಂಪಾದನೆ ಮಾತ್ರವಲ್ಲ. ನಮ್ಮ ಹಿರಿಯರು ಶಾಲೆಗೆ ಹೋಗದೆ ಸಮಾಜದಲ್ಲಿ ಎಷ್ಟು ಸಂಸ್ಕಾರಯುತ ಜೀವನ ನಡೆಸಿದ್ದಾರಲ್ಲವೇ? ಶಿಕ್ಷಣ ಎಂದರೆ ಶೀಲ ಸಂವರ್ಧನೆ ಮತ್ತು ನಾವು ಹೇಗಿರಬೇಕೆಂಬ ಕರ್ತವ್ಯ ಪ್ರಜ್ಞೆಯ ಅರಿವು.

* ದೋಷಯುಕ್ತವಾದ ಕೆಟ್ಟಫಲಗಳನ್ನು ತರುವ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು. ಎಲ್ಲಿ ವಿಪತ್ತು ಪ್ರವೇಶವಾಯಿತೋ ಅಲ್ಲಿ ಕಷ್ಟ-ನಷ್ಟಗಳು ಬರುವುದು ಖಾತ್ರಿ.

* ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು, ಕೊನೆಗೊಮ್ಮೆ ಹೋದದ್ದು ಅಷ್ಟೇ ಆದೀತಷ್ಟೆ. ಹಾಗಾಗಿ ಏನಾದರೂ ಸಾಧಿಸಬೇಕೆಂದರೆ ವಯಸ್ಸಿರುವಾಗಲೇ ಪ್ರಯತ್ನಿಸೋಣ. ಇಲ್ಲದಿದ್ದರೆ ರೈಲು ಹೋದ ಮೇಲೆ ಟಿಕೆಟ್ ತೆಗೆದ ಹಾಗೆ ಆಗಬಹುದು.

-ರತ್ನಾ ಕೆ .ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ