ಒಂದು ಒಳ್ಳೆಯ ನುಡಿ - 172

ಒಂದು ಒಳ್ಳೆಯ ನುಡಿ - 172

* ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ, ಮಾತು ಉತ್ತಮ ಸಾಧನ. ಮಾತು ನಮಗೆ ದೇವನಿತ್ತ ವರ. ಅದರ ಧಾಟಿಯನ್ನು ಬದಲಾಯಿಸದೆ, ಇತರರಿಗೆ ನೋವುಂಟು ಮಾಡದೆ ಚೆನ್ನುಡಿ, ನಲ್ನುಡಿಗಳನ್ನೇ ಆಡುವ ಮೂಲಕ ಗಟ್ಟಿತನ ಕಾಯ್ದು ಕೊಳ್ಳೋಣ. "ಸತ್ಯಮಪ್ರಿಯಂ ನ ಭ್ರೂಯಾತ್" ಗೀತೆಯಲ್ಲಿದ್ದಂತೆ ಏನು ನುಡಿಯಬಹುದು, ಏನನ್ನು ನುಡಿಯಬಾರದು ಎಂಬ ಸಾಮಾಜಿಕ ಪ್ರಜ್ಞೆ ನಮ್ಮಲ್ಲಿದ್ದರೆ ನಾವಾಡಿದ ಮಾತಿಗೆ ನೆಲೆ-ಬೆಲೆ ಎರಡೂ ಇದೆ.

* ಈ ಜಗತ್ತಿನ ಬೆಳಕನ್ನು ನಾವು ಕಂಡ ಮೇಲೆ, ನಮ್ಮದೇ ಆದ ಜವಾಬ್ದಾರಿಗಳಿವೆ. ಅದರಡಿಯಲ್ಲಿಯೇ ನಾವು ಬದುಕ ನಡೆಸುತ್ತೇವೆ. ನಮ್ಮ ಹಿರಿಯರ ನಡೆನುಡಿ ನಮಗೆ ಹೆಜ್ಜೆಯೂರಲು ಕಲಿಸುತ್ತದೆ. ಸಮಾಜದ ಕಟ್ಟುಪಾಡುಗಳು  ಚೌಕಟ್ಟಾಗಿರುತ್ತದೆ. ಈ ಪ್ರಪಂಚದಲ್ಲಿ ಯಾರು ಯಾರನ್ನು ಕಾಪಾಡಲು ಸಾಧ್ಯವಿಲ್ಲ ಅಥವಾ ನಾಶಮಾಡಲು ಸಾಧ್ಯವಾಗದು. ಅಗೋಚರ ಶಕ್ತಿಯೊಂದು ನಮ್ಮನ್ನು ಸಲಹುತ್ತಿರುತ್ತದೆ. ಮೀರಿ ಹೋಗುವುದು ತರವಲ್ಲ.

* ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ.ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ ನಮ್ಮ

ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಉರಿಯುವ ದೀಪದ ಬಳಿ ಬಂದ ಹಾತೆಯಂತೆ. ಬದುಕು ಗಟ್ಟಿಯಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಪ್ರಯತ್ನಿಸೋಣ, ಸಾಧಿಸೋಣ. ನೆಮ್ಮದಿಯ ಜೀವನ ಮಾಡೋಣ.

*ಪ್ರಾಣತ್ಯಯೇ ವಿವಾಹೇ ವಾ* *ಸರ್ವಜ್ಞಾತಿವಧಾತ್ಯಯೇ/*

*ನರ್ಮಣ್ಯಭಿಪ್ರವೃತ್ತೇ ವಾ ನ ಚ ಪ್ರೋಕ್ತಂ ಮೃಷಾ ಭವೇತ್//*

ಪ್ರಾಣಕ್ಕೆ ಸಂಚಕಾರ ಇದೆ ಹೇಳುವ ಸಮಯದಲ್ಲಿ, ಮದುವೆಯ ಕಾಲದಲ್ಲಿ ಏನೋ ಬಿಡಿಸಲಾರದ ತೊಂದರೆ, ಅಡ್ಡಿ ಆತಂಕಗಳು ಬಂದಲ್ಲಿ, ಕುಟುಂಬ ಸರ್ವನಾಶ ಆಗಬಹುದು ಎನ್ನುವ ಸಂದರ್ಭದಲ್ಲಿ ಸುಳ್ಳುಹೇಳಬಹುದಂತೆ. ಇದನ್ನು ಶಾಸ್ತ್ರಗಳು ಸಹ ಒಪ್ಪಿಕೊಳ್ಳುವುದಂತೆ. ಈ ಸಮಯಗಳಲ್ಲಿ ಉಪಾಯವಿಲ್ಲದೆ ಅನಿವಾರ್ಯವಾಗಿ  ಹೇಳುವ ಸುಳ್ಳಿನ ಪಾಪ,ಅಧರ್ಮ ಅಲ್ಲ ಎಂಬುದಾಗಿ ಧರ್ಮವನ್ನು ತಿಳಿದವರು ಹೇಳುವರು.

* ನಾನು ಸಾಧಿಸಿದೆ ಎಂದು ಬೀಗುವುದಕ್ಕೇನಿದೆ? ಆಯಾಯ ಕಾಲಕ್ಕೆ ಏನಾಗಬೇಕೋ ಅದು ದುಡಿದರೆ ಖಂಡಿತಾ ಆಗಬಹುದು. ಸುಮ್ಮನೆ ಹೆಸರಿಗಾಗಿ, ಸ್ಥಾನಕ್ಕಾಗಿ ಅದು ಮಾಡಿದೆ ಇದರ ಗಳಿಸಿದೆ ಎಂಬುದಕ್ಕೆ ಅರ್ಥವೇ ಇಲ್ಲ. ಹೆಸರಿಗಾಗಿ ಬೇಡ, ಕೆಸರು ಮೆಟ್ಟಿ ದುಡಿದು ಸಂಪಾದಿಸಿದರೆ ಬೆಲೆಯಿದೆ. ಒಂದೆಡೆ ಓದಿದ ನೆನಪು' ಶ್ರೀಗಂಧದ ಮರ ನಾನೇ ಶ್ರೇಷ್ಠ ಎಂದು ಅಹಂ ಪಟ್ಟಾಗ ಕಾಡ್ಗಿಚ್ಚು ಬಿದ್ದು ಮರ ಸುಟ್ಟಿತಂತೆ'. ಎಷ್ಟು ಎತ್ತರಕ್ಕೆ ಏರಿದವನೂ ಒಂದು ದಿನ ಬೀಳುತ್ತಾನೆ ಎಂಬುದು ತಿಳಿದಿರಲಿ. ಏರುವ ದಾರಿ ಸರಿಯಾಗಿರಲಿ. ವಾಮ ಮಾರ್ಗ ಅಪಾಯ, ಕ್ಷಣಿಕ ಎಂಬ ಪ್ರಜ್ಞೆಯಿರಲಿ. ಹಾಗಾಗಿ ಬಾಗೋಣ ಬೀಗುವುದು ಬೇಡ.

ಸಂಗ್ರಹ: ಮಹಾಭಾರತ ಚಿಂತನ

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ