ಒಂದು ಒಳ್ಳೆಯ ನುಡಿ - 174

ಒಂದು ಒಳ್ಳೆಯ ನುಡಿ - 174

* ನಮ್ಮ ಜೀವನದ ಉದ್ದನೆಯ ಹಾದಿ ಮೈದಾನದಲ್ಲಿರುವ ಹಸಿರು ಹುಲ್ಲಿನಂತೆ. ಹುಲ್ಲನ್ನು ತುಳಿದರೆ, ಅದರ ಮೇಲೆ ನಡೆದಾಡಿದರೆ ಅದು ಚಿಗುರದು, ಎತ್ತರವಾಗಿ ಬೆಳೆಯದು. ತುಳಿಯದೇ ಇದ್ದಲ್ಲಿ ಸೊಗಸಾಗಿ ಹಸಿರು ಹಸಿರಾಗಿರುತ್ತದೆ. ಹೀಗೆಯೇ ನಮ್ಮ ಬಾಳುವೆ ಸಹ. ತುಳಿಯದೆ ಬೆಳೆಯಲು, ಬೆಳೆಸಲು ಪ್ರೋತ್ಸಾಹಿಸೋಣ.

* 'ಶಾಂತಿ' ಎಂಬ ಪದ ಬ್ಯಾಂಕ್  ಪಾಸ್ ಪುಸ್ತಕದಲ್ಲಿ, ಖಜಾನೆಯಲ್ಲಿ ,ಹಣ, ಒಡವೆ, ವಸ್ತ್ರಗಳಲ್ಲಿ, ದೊಡ್ಡ ದೊಡ್ಡ ಮನೆಗಳಲ್ಲಿ, ಆಸ್ತಿ ಅಂತಸ್ತಿನಲ್ಲಿ ಖಂಡಿತ ಸಿಗದು. ಕೋಟಿ ಕೊಟ್ಟು ಖರೀದಿಸಿದ ಬಂಗ್ಲೆಯಲ್ಲಿ ನೆಮ್ಮದಿಯಾಗಿರಲು ಮಳೆರಾಯ ಬಿಡಲಿಲ್ಲ ಎಂದಾಗ, ಉಳಿದವೆಲ್ಲ ಯಾವ ಲೆಕ್ಕ? ಪ್ರಕೃತಿಯೆದುರು ನಾವು ತಲೆಬಾಗಲೇಬೇಕು. ಇರುವಷ್ಟು ದಿನ ನಮ್ಮ ನಮ್ಮ ಗುಣನಡತೆಯಲ್ಲಿ,ವ್ಯವಹಾರದಲ್ಲಿ ಆರೋಗ್ಯಕರ ಅಭ್ಯಾಸಗಳಲ್ಲಿ, ಉತ್ತಮ ಮಾತುಗಾರಿಕೆಯಲ್ಲಿ ಮಾತ್ರ ಶಾಂತಿ, ನೆಮ್ಮದಿಯನ್ನು ಕಾಣೋಣ. 

* ವಿಕೃತ ಮನಸ್ಸು ಯಾವತ್ತೂ ಒಳ್ಳೆಯದನ್ನು ಚಿಂತಿಸಲಾರದು. ಕುಟಿಲ ಚರ್ಯೆಗಳನ್ನೇ ಎಸಗುವವರು ಅದರ ಬಗ್ಗೆಯೇ ಯೋಚಿಸುವುದು ಸಹಜ. ಇವರೆಲ್ಲರು ನೀಚರ ಸಾಲಿಗೆ ಸೇರಿದ ಮನುಷ್ಯರೂಪದ ರಾಕ್ಷಸರು. ಸಮಯ, ಸಂದರ್ಭ ಸಿಕ್ಕಾಗ ಹುಚ್ಚು ನಾಯಿಯಂತೆ ಕಚ್ಚಿಯೇ ಬಿಡುವರು. ಇವರಿಂದ ದೂರವಿದ್ದಷ್ಟೂ ಆರೋಗ್ಯ ಮತ್ತು ಕ್ಷೇಮ.

* ತಪ್ಪುಗಳನ್ನು ಎಸಗಿದರೆ ಜೀವನದ ಹಾದಿಯಲ್ಲಿ ಮತ್ತಷ್ಟೂ ಬೆಳೆಯಲು ಅವಕಾಶವಾಗಬಹುದು. ಮತ್ತೆ ಮತ್ತೆ ತಪ್ಪುಗಳಾಗದಂತೆ ಎಚ್ಚರವಹಿಸಬೇಕು. ಸೋಲಾದ ಮೇಲೆಯೇ ಗೆಲುವು ಸಿಗಬೇಕು, ಅದೇ ನಮ್ಮನ್ನು ಉತ್ತುಂಗಕ್ಕೇರಿಸಲು ಸಹಾಯ ಮಾಡುತ್ತದೆ. ಸೋತು ಗೆಲ್ಲೋಣ. ಹಂತ ಹಂತವಾಗಿ ಒಂದೊಂದೇ ಮೆಟ್ಟಿಲುಗಳನ್ನು ಏರೋಣ.

* ಧರ್ಮವೆಂಬುದು ಆ ಜಾತಿ ಈ ಜಾತಿ, ಆ ಮತ ಈ ಮತವಲ್ಲ. ಅದೊಂದು ಸಾಮಾಜಿಕವಾದುದು, ಸಾರ್ವತ್ರಿಕವಾದುದು. ಬದುಕಿನ ಮಜಲುಗಳಲ್ಲಿಯ ಅನುಸಂಧಾನ ವ್ಯವಸ್ಥೆ. ಅದೊಂದು ಕೌಶಲ. ಸದಾ ಕರ್ಮಯೋಗಿಯಾಗಿರುವವನಿಗೆ ಪುನ: ಪುನ: ಧರ್ಮದ ಬೋಧನೆಯ ಅಗತ್ಯವಿಲ್ಲ. ಕೆಲಸಕಾರ್ಯಗಳಲ್ಲಿಯೇ ಭಗವಂತನ ಆರಾಧನೆಯಿದೆ ಎಂದು ಅರ್ಥವಿಸಿಕೊಂಡಲ್ಲಿ ಅದೇ ಧರ್ಮ. ತಾನು ಬೆಳೆಯುತ್ತಿರುವ ಜೊತೆ ಇತರರನ್ನೂ ಬೆಳೆಯಲು, ಬೆಳಗಲು ಅವಕಾಶ ನೀಡುವುದೇ ಧರ್ಮ, ಮಾನವೀಯತೆ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ