ಒಂದು ಒಳ್ಳೆಯ ನುಡಿ - 175

ಒಂದು ಒಳ್ಳೆಯ ನುಡಿ - 175

* ಸಂಸ್ಕೃತಿ ಸಂಸ್ಕಾರ ಇವೆರಡು ನಮ್ಮ ಬದುಕಿನ ತಳಪಾಯ. ನಮ್ಮ ನಡತೆಯ, ನಮ್ಮ ವೈಯಕ್ತಿಕ ನಡವಳಿಕೆಯ ಇಂಚು ಇಂಚಲ್ಲಿ, ಕಾಣಿಸಬೇಕು. ಯಾರಲ್ಲಿ ಹೇಗೆ ಮಾತನಾಡಬೇಕು, ಯಾವ ವಸ್ತ್ರ ತೊಡಬೇಕು, ಹೇಗೆ ತೊಡಬೇಕು, ಗುರು ಹಿರಿಯರು, ವೃದ್ಧರ ಆರೈಕೆ ಹೇಗೆ ಮಾಡಬೇಕು ಇದೆಲ್ಲವೂ ಸಂಸ್ಕೃತಿಯಡಿಯೇ ಬರುತ್ತದೆ.

*ನೋಚ್ಚೈ:ಪದಂ ಲಂಭನೀಯೋ*

*ಗುಣ್ಯೋಪ್ಯನ್ವಯವರ್ಜಿತ:*/

*ರತ್ನಾಢ್ಯಮಪಿ ಕುರ್ವೀತ*

*ಮೂರ್ಧ್ಧ್ನಿ ಕ: ಪಾದ ಮಂಡನಂ//*

ಎಷ್ಟು ವಿದ್ಯಾಸಂಪನ್ನನಾದರೂ ಉತ್ತಮನೂ, ಒಳ್ಳೆಯವನೂ, ನೀತಿವಂತನೂ ಆದವನಾದರೆ ಮಾತ್ರ ಆತನನ್ನು ಉನ್ನತ ಸ್ಥಾನದಲ್ಲಿ ಕೂರಿಸಬಹುದು. ಗುಣವಿಹೀನನ ಕೈಗೆ ಸ್ಥಾನಮಾನ ಕೊಟ್ಟರೆ ಎಲ್ಲವೂ ಬುಡಮೇಲಾಗಬಹುದು. ಎಲ್ಲಿ ದುರ್ಬಲತೆಯೋ ಅಲ್ಲಿ ಮೂರನೇಯವರ ಪ್ರವೇಶವಾಗಬಹುದು. ಎಷ್ಟೇ ಹಣಕೊಟ್ಟು ತೆಗೆದ ಪಾದರಕ್ಷೆಗಳನ್ನು ತಲೆಯ ಮೇಲೆ ಇಟ್ಟುಕೊಳ್ಳುವುದಿಲ್ಲ ಅಲ್ಲವೇ? ಅದು ರತ್ನಖಚಿತವಾಗಿದ್ದರೂ ಸರಿ, ಚಪ್ಪಲಿ ಚಪ್ಪಲಿಯೇ .ಅನೀತಿವಂತನ ಬರಹೇಳಿ ಮಣೆ ಹಾಕಿದರೆ ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ ಆಗಬಹುದು.ಸ್ಥಾನ ಕೊಡುವಾಗ ಯೋಗ್ಯತೆಯ ನೋಡಿ ಕೊಡಬೇಕು.

* ಕಸ ಹೊಡೆಯುವ ಕೆಲಸಕ್ಕೆ ಸಹ ಅದರದ್ದೇ ಆದ ಗೌರವವಿದೆ. ಇಲ್ಲಿ ಕೀಳರಿಮೆ ಸಲ್ಲದು. ಒಂದು ಲಕ್ಷ ತಿಂಗಳ ಸಂಬಳ ಎಣಿಸುವವನ ವೃತ್ತಿಯೇ ಮೇಲೆಂದು ಭಾವಿಸಿದರೆ ಅದು ತಪ್ಪು. ಎಲ್ಲಾ ಕೆಲಸಕ್ಕೂ ಅದರದ್ದೇ ಆದ ವೃತ್ತಿ ಧರ್ಮವಿದೆ. ಇಲ್ಲಿ ಶ್ರದ್ಧೆ ಮುಖ್ಯವೇ ಹೊರತು ಮೇಲು-ಕೀಳು ಮುಖ್ಯವಲ್ಲ. ಈ ಮೇಲ್ಪಂಕ್ತಿ , ಈ ಗುಣನಡತೆ, ಈ ಆದರ್ಶವನ್ನು ಸರ್ ಎಂ ವಿಶ್ವೇಶ್ವರಯ್ಯನವರಲ್ಲಿ ಕಾಣಬಹುದು.

* ಹಿರಿಯರ ನುಡಿಗಳು ಯಾವತ್ತೂ ಸುಳ್ಳಾಗದು. ಅದು ಅನುಭವಗಳ ಹೂರಣ. ಪಕ್ವಗೊಂಡು ಅನುಭವಿಸಿ ಹಾಸಿದ  ತೋರಣ.

*ನಿರ್ಗತ್ಯ ನ ವಿಶೇದ್ಭೂಯೋ ಮಹತಾಂ ದಂತಿದಂತವತ್*/

*ಸರ್ಪಜಿಹ್ವೇವ ನೀಚಾನಾಂ ವಚ ಆಯಾತಿ ಯಾತಿ ಚ*//

* ಆನೆಗಳ ದಂತ ಹೇಗೆ ಹೊರಗೆ ಬಂದ ಮೇಲೆ ಹಿಂಜರಿಯುವುದಿಲ್ಲವೋ, ಹಿಂದಿರುಗಿ ನೋಡುವುದಿಲ್ಲವೋ ಹಾಗೆ ಹಿರಿಯರ ಮಾತುಗಳು ಸಹ. ಆದರೆ ನೀಚರು, ದುಷ್ಟರು ಎನಿಸಿಕೊಂಡವರ ನುಡಿಗಳು ಹಾವುಗಳ ಸೀಳು ನಾಲಗೆಯಂತೆ ಒಳಗೂ-ಹೊರಗೂ ಸುಳಿದಾಡುತ್ತಾ ಇಲ್ಲದ ಅನಾಹುತಗಳನ್ನು ಮಾಡಬಹುದು. ಅಂಥವರ ಬಳಿ ನಾವು ಜಾಗ್ರತೆವಹಿಸಬೇಕು.

* ಊರಿಗೆ ನೀರುಣಿಸುವ ಕೆರೆ-ಬಾವಿಗಳನ್ನು ಕಾಣೆಯಾಗಿಸಿ, ಅದರ ಮೇಲೆಯೇ ಮಹಡಿ ಮೇಲೆ ಮಹಡಿ ನಿರ್ಮಿಸಿದರೆ ಪರಿಣಾಮ ಏನಾಗುವುದೆಂದು ನಾವೆಲ್ಲರೂ ತಿಳಿದೆವು. ಹಾಗಾದರೆ ನಮ್ಮ ಸ್ವಾರ್ಥದ ಫಲವಾಗಿ ಸಂಕಷ್ಟಕ್ಕೆ ಒಳಗಾಗುವವರು ನಮ್ಮ ಮಕ್ಕಳು, ಮುಂದಿನ ಪೀಳಿಗೆ ಎಂಬುದು ಸತ್ಯ. ಹಣ ಜೇಬಿಗಿಳಿಸಿದವರು ಯಮಲೋಕಕ್ಕೆ ಹೋಗಿ ಆಗಿರ್ತದೆ. ನಮ್ಮ ಸಂತಾನದ ಮೇಲೆ ನಾವೇ ಕಲ್ಲು ಚಪ್ಪಡಿ ಹಾಕಿದ ಹಾಗಾಯಿತಲ್ಲವೇ? ಇರುವುದರಲ್ಲಿ ನೆಮ್ಮದಿ ಕಂಡರೆ ಹೀಗೆಲ್ಲ ಅನಾಹುತಗಳಾಗಲು ಅವಕಾಶವೇ ಇರುತ್ತಿರಲಿಲ್ಲ. ನೀರುಣಿಸುವ ಹಸಿರು ಮರಗಿಡಗಳ ನಾಶವೂ ಕಾರಣವಾಯಿತು. ಇನ್ನಾದರೂ ಎಚ್ಚೆತ್ತುಕೊಳ್ಳೋಣ,

(ಸಂಗ್ರಹ) - ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ