ಒಂದು ಒಳ್ಳೆಯ ನುಡಿ (178) - ಗೆಳೆತನ
ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ. ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗುತ್ತಾರೆ. ಅಥವಾ ವ್ಯವಹಾರ ಕೈತಪ್ಪಿ ಇತರರ ಮೇಲೆ ಅವಲಂಬಿತರಾದರೋ ಆಗ ಸ್ವತಂತ್ರವಾಗಿ ಸ್ನೇಹಿತರೊಂದಿಗೆ ಕಳೆಯ ಬೇಕಾದ ಕಾಲಕ್ಕೂ ಸಂಚಕಾರ ಒದಗುತ್ತದೆ. ಇನ್ನು ಅಂತಸ್ತು, ಹುದ್ದೆಯ ಕಾರಣದಿಂದ ಸ್ನೇಹಿತರಿಂದ ದೂರಾಗಿ ಮತ್ತೆ ಅನತಿ ಕಾಲದಲ್ಲೇ ಸಮಾನಾಭಿರುಚಿಯವರ ಗೆಳೆತನಕ್ಕೆ ಹಂಬಲಿಸಿದರೂ ಸಿಗುವ ಸಾಧ್ಯತೆ ಕಡಿಮೆಯೇ. ಬಹುದಿನದ ಬಳಿಕ ಸಿಕ್ಕ ಬಾಲ್ಯದ ಗೆಳೆಯರೂ, ನಮ್ಮನ್ನು ಹೋಗೋ ಬಾರೋ ಎಂದು ತಿದ್ದಿ ತೀಡಿದ ಹಿರಿಯರು, ಬೆತ್ತದಲ್ಲಿ ಬಾರಿಸಿ ಕಿವಿಹಿಂಡಿ ಕಲಿಸಿದ ಮಾಸ್ತರೂ ಸಹ ದಿನಕಳೆದಂತೆ ನಮ್ಮನ್ನು ಹೋಗಿ, ಬನ್ನಿ ಎಂದು ಮಾತನಾಡಿಸುವುದು ಕೇಳಿದರೆ ಸಂಕಟವಾಗುತ್ತದೆ. ವ್ಯಕ್ತಿ ಎಷ್ಟೇ ಸಾಧಿಸಿರಲಿ, ಸಹಪಥಿಕರಿಗಾಗಿ ಹಂಬಲಿಸುವುದು ಹೆಚ್ಚಾಗುತ್ತಲೇ ಹೋಗುತ್ತದೆ. ಅದು ತೋರಿಕೆಯಲ್ಲಿ ಕಾಣಬರದಿದ್ದರೂ ಆಳದಲ್ಲಿ ಹುದುಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಪ್ರತಿಷ್ಠೆಯನ್ನು ದೂರವಿಟ್ಟು ರಜನಿಕಾಂತ್ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಬೆಂಗಳೂರಿಗೆ ಬಂದು ಹೋಗುತ್ತಾರೆ ಎಂಬುದನ್ನು ಹಿಂದೆ ಓದಿದಾಗ ನಗುತ್ತಿದ್ದೆ. ಆದರೆ ಅದು ವಾಸ್ತವದ ಬಯಕೆ ಎಂಬುದು ಅರ್ಥವಾಗುತ್ತಿದೆ.
ಅಡಿಗರು ತಮ್ಮ ಕೊನೆಗಾಲದ ಡೈರಿಯ ಪುಟಗಳಲ್ಲಿ ʼಇಂದು ನನ್ನನ್ನು ನೋಡಲು ಯಾರೂ ಬರಲಿಲ್ಲʼ ಎಂದು ಅನೇಕ ಬಾರಿ ಬರೆದುಕೊಂಡಿದ್ದರೆಂದು ಬಲ್ಲವರು ತಿಳಿಸಿದ್ದರು. ಸ್ವಾತಂತ್ರ್ಯ ಧುರಿಣರಾದ ಗೋಖಲೆಯವರು ತೀರಿಕೊಂಡ ಸಮಯದಲ್ಲಿ, ʼಏಷ್ಟೇ ದೊಡ್ಡವರಾದರೂ ತಿಲಕರು ಮತ್ತು ಗೋಖಲೆಯರು ಮಿತ್ರತ್ವವನ್ನು ಕಲಿಯಲಿಲ್ಲʼ ಎಂಬ ಮಾತು ಕಿವಿಗೆ ಬಿದ್ದು ಬೇಂದ್ರೆಯವರು ʼಏನೇ ಆಗಲಿ ಏನೇ ಹೋಗಲಿ ಗೆಳೆಯರಿದ್ದರೆ ಸಾಕುʼ ಎಂಬ ತೀರ್ಮಾನಕ್ಕೆ ಬಂದು ಗೆಳೆಯರ ಗುಂಪಿನ ಯೋಚನೆ ಮಾಡಿದರು. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಮುಂದೆ ಈ ಗುಂಪು ಮುರಿದರೂ ಬೇಂದ್ರೆಯವರಿಗೆ ಹಲವು ಮಿತ್ರರನ್ನು ಕೊನೆಗಾಲದವರೆಗೆ ನೀಡಿತ್ತು. ʼಇಷ್ಟೇ ನನಗೆ ಸಾಕುʼ ಎಂಬುದು ಅವರ ಅಭಿಮತವಾಗಿತ್ತು.
ಬಹುಶಃ ನಾಲ್ಕನೇ ತರಗತಿಯ ಪಠ್ಯದಲ್ಲಿತ್ತು ಎಂಬ ಕಾರಣದಿಂದ ಚನ್ನವೀರ ಕಣವಿಯವರ ʼಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನುʼ ಪದ್ಯ ಕಂಠಸ್ಥ ಮಾಡಿಕೊಂಡಿದ್ದರೂ ಅದು ಅರ್ಥವಾಗಲು ಮೂರು ದಶಕಗಳೇ ಬೇಕಾದವು. ಒಮ್ಮೆ ನಿಮ್ಮ ಗೆಳೆತನದ ಸ್ಟಾಕ್ ಚೆಕ್ ಮಾಡಿಕೊಳ್ಳಿ, ಎಷ್ಟು ಹಳೆಯ ಸ್ಟಾಕ್ ನಿಮ್ಮಲ್ಲಿರುವುದೋ ಅಷ್ಟು ಭಾಗ್ಯಶಾಲಿಗಳು ನೀವು.
(ಆಧಾರ) ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ