ಒಂದು ಒಳ್ಳೆಯ ನುಡಿ (18) - ಬದುಕೆಂಬ ಪರೀಕ್ಷೆ

ಒಂದು ಒಳ್ಳೆಯ ನುಡಿ (18) - ಬದುಕೆಂಬ ಪರೀಕ್ಷೆ

ಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವೋ ಆಗಬಹುದು. ಅದು ನಾವು ಮಾಡುವ ಕೆಲಸಗಳು, ವ್ಯವಹಾರಗಳನ್ನು ಹೊಂದಿಕೊಂಡು ನಿರ್ಣಯಿಸಲ್ಪಡುತ್ತದೆ.

ಸಂಕಷ್ಟಗಳು, ನೋವುಗಳು, ಬೇನೆ ಬೇಸರಿಕೆಗಳು ಹೇಳಿ-ಕೇಳಿ ಬರುವುದಿಲ್ಲ. ಬಂದಾಗ ದಿಕ್ಕು ತೋಚದೆ ದಡಬಡಿಸುತ್ತೇವೆ. ಅದನ್ನು ತಾಳ್ಮೆಯಿಂದ ನಿಭಾಯಿಸುವ ಜಾಣತನ ನಮ್ಮಲ್ಲಿದ್ದರೆ, ನಾವು ಉತ್ತೀರ್ಣ. ಇಲ್ಲವಾದರೆ ಮತ್ತೂ ಹೊಂಡಕ್ಕೆ ಬಿದ್ದು ಕಷ್ಟ ಅನುಭವಿಸುತ್ತೇವೆ. ಕಷ್ಟಕಾಲದಲ್ಲಿ ನಮ್ಮತನವನ್ನು ಕಳೆದುಕೊಳ್ಳದೆ, ಅದನ್ನು *ಪಂಥಾಹ್ವಾನ* (challenge) ಆಗಿ ಸ್ವೀಕರಿಸಿ, ಪರಿಹಾರ ಕಂಡುಕೊಳ್ಳಬೇಕು. ಒಬ್ಬ ಮನುಷ್ಯನ ಮಾನವೀಯ ಮೌಲ್ಯಗಳ ತುಲನೆಯಾಗುವುದು ಇದೇ ಸಂದರ್ಭದಲ್ಲಿ. ಆತನ ಗುಣ, ನಡತೆ, ಸಹಕಾರ, ಚಾರಿತ್ರ್ಯ ಎಲ್ಲವೂ ಸ್ಫುಟವಾಗುವ ಕಾಲ ಇದುವೇ.

ಹೇಗೆ ಚಿನ್ನವನ್ನು ಒರೆಗಲ್ಲಿಗೆ ತಿಕ್ಕಿ ಪರೀಕ್ಷೆ ಮಾಡುವರೋ ಹಾಗೆ ಇದು ಸಹ. ಬಣ್ಣ, ಗುಣ ಕಳಕೊಂಡಾಗ ಅದು ಅಪ್ಪಟ ಬಂಗಾರ ಅಲ್ಲ. ಅಮೂಲ್ಯತೆಯನ್ನು ಕಳೆದುಕೊಂಡಾಗ ಯಾರಿಗೂ ಅದು ಬೇಡವಾದ ವಸ್ತು. ಮನುಷ್ಯನ ಅವಸ್ಥೆಯೂ ಚಿನ್ನದ ಹಾಗೆ *ಸಂಕಟಗಳ ತಿಕ್ಕುವಿಕೆ, ಕತ್ತರಿಸುವಿಕೆ, ಬೇಯಿಸುವಿಕೆ, ಬಡಿಯುವಿಕೆ*. ನಾವು ಧೃತಿ ಗೆಡಬಾರದು. ಕಬ್ಬಿಣವನ್ನು ಕಾಯಿಸಿ, ಬೆಂಕಿಯ ಕೆನ್ನಾಲಿಗೆಗಿಟ್ಟು, ನೀರು ಕೊಟ್ಟು ಬಡಿದಾಗಲೇ, ಅದರ ರೂಪ ಸರಿಯಾಗುತ್ತದೆ.ಕಷ್ಟ ಕಾಲದಲ್ಲಿ ರೂಪ, ಗುಣ, ಸ್ವಭಾವ ಬದಲಾಯಿಸದೆ, ಸ್ಥಿತಪ್ರಜ್ಜನಾಗಿರುವವನೇ ನಿಜವಾದ ಉತ್ತೀರ್ಣ ಹೊಂದಿದ ಮನುಷ್ಯ. ಎಲ್ಲಾ ಅಗ್ನಿಪರೀಕ್ಷೆ ಗಳನ್ನು ದಾಟಿ ಬಂದವನೇ ಮಹಾಪುರುಷ.

*ಸತ್ಯ ಹರಿಶ್ಚಂದ್ರ, ಧರ್ಮರಾಯ* ಇವರ ಬದುಕಿನ ಚಿತ್ರಣಗಳನ್ನು ಅವಲೋಕಿಸಿದರೆ, ನಮಗೆ ಸತ್ಯದ ಅರಿವಾಗಬಹುದು. 'ಸತ್ಯವಂತರಿಗಿದು ಕಾಲವಲ್ಲ' ನಿಜ, ಆದರೆ ಎಲ್ಲಾ ಕಷ್ಟಗಳ ಬೇಲಿಯನ್ನು ದಾಟಿದಾಗ *ಸತ್ಯಕ್ಕೆ ಜಯ ಖಂಡಿತ*.

ಏನೇ ಬರಲಿ, ಗೋವಿಂದನ ದಯೆಯಿರಲಿ, ಧನಾತ್ಮಕ ಚಿಂತನೆ ನಮ್ಮ ಬದುಕಿನ ಪಯಣದಲ್ಲಿರಲಿ, ಒಳ್ಳೆಯ ಮನಸ್ಸೇ ನಮಗೆ ಭಗವಂತ ನೀಡಿದ ಶ್ರೀರಕ್ಷೆ‌. ಏನಾದರೂ ನಮ್ಮ ಸತ್ವ, ಸತ್ಯ ಗಟ್ಟಿಯಾಗಿರಲಿ.

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದೊಡಂ/

ಧೀರ ಪಥವನೆ ಬದುಕು ಸಕಲ ಸಮಯದೊಳಂ//

ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? /

ಹೋರಿ ಸತ್ವವ ಮೆರಸು---ಮಂಕುತಿಮ್ಮ//

-ರತ್ನಾಭಟ್ ತಲಂಜೇರಿ

(ಆಧಾರ--ಸೂಕ್ತಿ ಸೌರಭ).

ಚಿತ್ರ : ಅಂತರ್ಜಾಲ ತಾಣ