ಒಂದು ಒಳ್ಳೆಯ ನುಡಿ - 181

* ದುಡಿದು ಉಣ್ಣುವುದು ಧರ್ಮ. ದುಡಿಯದೆ, ಬೆವರು ಹರಿಸದೆ ಉಂಡರೆ ದೇಹ ಸ್ವೀಕರಿಸದು. ಕಾಯಕನಿಷ್ಠೆ ಅಗತ್ಯ. ಅಧರ್ಮದ ಹಾದಿಯನ್ನು ತಿರಸ್ಕರಿಸಿ, ಧರ್ಮದ ದಾರಿಯಲ್ಲಿ ಹೆಜ್ಜೆ ಊರೋಣ.
* ಮಾನವತೆಯ ಮರೆತವನು ದಾನವನು. ಮಾನವತ್ವ ಶ್ರೇಷ್ಠ ನಡೆ. ಇತರರ ನೋವನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಮನಸ್ಸಿರಲಿ. ಅದನ್ನು ಬಿಡದಿರು ಮನುಜ.
* ಓರ್ವ ಮಹನೀಯರು ಒಂದಷ್ಟು ತನ್ನಂತೆ ಇರುವ ಆಸಕ್ತರನ್ನು ಒಟ್ಟುಗೂಡಿಸಿ ಒಂದು ಕಾರ್ಯಕ್ರಮ ಮಾಡ್ತಾರೆ ಎಂದಾದರೆ ನಮ್ಮಿಂದಾದ ಸಹಕಾರ ನೀಡುವುದು ಧರ್ಮ. ಅದು ಬಿಟ್ಟು ಪುಕ್ಕಟೆ ಸಲಹೆ ನೀಡಿ ಅವರ ತಲೆತಿನ್ನುವುದು, ಇನ್ಯಾರನ್ನೋ ಎತ್ತಿಕಟ್ಟುವುದು ಮಾನವೀಯತೆ ಖಂಡಿತಾ ಅಲ್ಲ. ವಿಘ್ನಸಂತೋಷಿಗಳು ತುಂಬಿಹೋದ ಈ ಜಗತ್ತಿನಲ್ಲಿ ಇದೊಂದು ಅಮಾನವೀಯತೆಯೇ ಸರಿ. ಸಹಾಯ ಮಾಡಲು ಮನಸ್ಸಿಲ್ಲವಾದಲ್ಲಿ ಮೌನವಾಗಿ ಕೂರುವುದು ಶ್ರೇಯಸ್ಸು, ಅದು ಬಿಟ್ಟು ಹಾಗೆ ಮಾಡಿ ಹೀಗೆ ಮಾಡಿ ಎನುವ ಬಿಟ್ಟಿ ಸಲಹೆ, ಬುದ್ಧಿವಾದದ ಮಾತುಗಳು ಯಾಕೆ? (ನನ್ನ ಸ್ವಅನುಭವದ ಮಾತುಗಳಿದು.)
* ಗೆಳೆಯರು, ಬಂಧುಗಳು, ಒಡಹುಟ್ಟುಗಳು, ನಮ್ಮವರೆನಿಸಿಕೊಂಡವರೆಲ್ಲ ನಮ್ಮನ್ನಗಲಿ ಹೋಗಬಹುದು, ಸಾಯಬಹುದು. ಆದರೆ ಅವರೆಲ್ಲರೊಡನೆ ಇದ್ದ ಮಧುರವಾದ ಬಂಧನಗಳು, ನವಿರಾದ ಭಾವನೆಗಳು, ನಡೆದ ಕೆಲವೊಂದು ಮಾತುಕತೆಗಳು ಎಂದೂ ಸಾಯದು.
* ನತದೃಷ್ಟನ ಹತ್ತಿರ ಕಷ್ಟ ಹೇಳಿಕೊಂಡರೆ, ದು:ಖದ ಕಾರಣ ತಿಳಿಸಿದರೆ ಏನೂ ಪ್ರಯೋಜನವಾಗದು. ಸುಂಕ ವಸೂಲಿ ಮಾಡುವವನ ಹತ್ತಿರ ಕಷ್ಟ ಹೇಳಿದರೆ ಅವನಿಗೆ ಕನಿಕರ ಹುಟ್ಟಲು ಸಾಧ್ಯವೇ? ಜನ, ಸಮಯ, ಸಂದರ್ಭ, ಸ್ಥಿತಿಗತಿ ನೋಡಿ ಮಾತನಾಡಬೇಕು.
(ಆಧಾರ) - ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ