ಒಂದು ಒಳ್ಳೆಯ ನುಡಿ - 187

ಒಂದು ಒಳ್ಳೆಯ ನುಡಿ - 187

* ಕನ್ನಡದ ನುಡಿಗಳೆಂದರೆ ಹೊನ್ನಿಗಿಂತಲೂ ಮಿಗಿಲು ಕನ್ನಡಿಗರ ಪಾಲಿಗೆ. ಆದರೆ ಆಂಗ್ಲ ವ್ಯಾಮೋಹ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಗಿಸಿದೆ. ಇತರ ಭಾಷೆಗಳು ವ್ಯವಹಾರಕ್ಕೆ ಸೀಮಿತವಾಗಿರಲಿ. ಆಂಗ್ಲ ಭಾಷೆಯೇ ಬದುಕಲ್ಲ. ಈ ಬೇಲಿಯ ದಾಟಿ ಹೊರಬಂದು ನಾಡುನುಡಿಗಾಗಿ ಶ್ರಮಿಸೋಣ.

* ಅ ಆ ಇ ಈ ಓದೋಣ, ಓದುವ ಜೊತೆಗೆ ಬರೆಯೋಣ. ಅಕ್ಷರದಿಂದ ಪದಗಳ ಹೆಣೆದು ವಾಕ್ಯರೂಪವ ರಚಿಸೋಣ ಕನ್ನಡ ವರ್ಣಮಾಲೆಯೇ ಚಂದ, ಪದಗಳು ಇನ್ನೂ ಅಂದ. ತಾಯಿ ಭಾಷೆಯ ಮರೆಯದಿರೋಣ.

* ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ ನಿನ್ನಯ ಝೇಂಕಾರದಲಿ, ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಬರೆದ ಸಾಲುಗಳಿವು. ಎಷ್ಟೊಂದು ಹಿತವಾಗಿದೆಯಲ್ಲವೇ? ಪ್ರಕೃತಿಯಲ್ಲಿಯೂ ನಾಡುನುಡಿಯನ್ನು ಕಂಡವರು ನಮ್ಮ ನಾಡಿನ ಹಿರಿಯ ಸಾಹಿತಿಗಳು. ನಾವು ಅಳಿಲ ಸೇವೆಯನ್ನಾದರೂ ಸಲ್ಲಿಸಿ ಧನ್ಯರಾಗೋಣ.

*ತಾಯೆ ಬಾರ, ಮೊಗವ ತೋರ,ಕನ್ನಡಿಗರ ಮಾತೆಯೆ!*

*ಹರಸು ತಾಯೆ,ಸುತರ ಕಾಯೆ,ನಮ್ಮ ಜನ್ಮದಾತೆಯೆ!*

ಈ ಸಾಲುಗಳಲ್ಲಿರುವ ಒಂದೊಂದು ಪದವೂ ಮೈ ರೋಮಾಂಚನಗೊಳ್ಳುವಂತಿದೆ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ರಾಷ್ಟ್ರಕವಿ ಎಂ ಗೋವಿಂದಪೈಯವರ ಈ ರಚನೆಯನ್ನು ಮರೆಯಲು ಸಾಧ್ಯವೇ?

* ಮನೆಮನೆಯ, ಮನಮನದ ಸುಂದರ ಪುಷ್ಪಗಳೇ ಮಕ್ಕಳು. ಭಗವಂತನ ತೋಟದ ವರಪ್ರಸಾದದ ನಲಿವ ಕುಸುಮಗಳು. ನಮ್ಮ ಮುದ್ದು ಕಂದಮ್ಮಗಳನ್ನು ತಿದ್ದಿತೀಡಿ, ಗುಣವಂತರನ್ನಾಗಿ ಮಾಡೋಣ. ಒಂದನ್ನು ಪಡೆಯಲು ಇನ್ನೊಂದನ್ನು ಸ್ವಲ್ಪ ತ್ಯಾಗ ಮಾಡಬೇಕೆಂಬುದನ್ನು ನೆನಪಿನಲ್ಲಿಟ್ಟು, ಇಂದಿನಿಂದಲೇ ತಳಪಾಯ ಗಟ್ಟಿಗೊಳಿಸೋಣ.

*ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ*

*ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ*

ಕನ್ನಡ ನಾಡು ನುಡಿಯ ಕುರಿತಾಗಿ ಬರೆದ ಈ ಸಾಹಿತ್ಯ ಎನಿತು ಸುಂದರ? ಏನು ಬಂಧುರ ಅಲ್ಲವೇ? ಕನ್ನಡದ ನೆಲಜಲವೇ ಕರ್ನಾಟಕದ ಮಣ್ಣಿನಮಕ್ಕಳ ಆಡೊಂಬಲ, ಮನೆ, ಉಸಿರು.

-ರತ್ನಾ ಕೆ ಭಟ್ , ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ