ಒಂದು ಒಳ್ಳೆಯ ನುಡಿ - 189

ಒಂದು ಒಳ್ಳೆಯ ನುಡಿ - 189

ಪ್ರೇಮ ಮಾಡಬೇಕು ನಿಜ. ಪ್ರೇಮಿಸಿ, ಬೇಡ ಎನ್ನಲು ನಾವ್ಯಾರು ? ಅಥವಾ ನೀವ್ಯಾರು? ಪ್ರಶ್ನೆ ಸಹಜ. ದೇವರಲ್ಲಿ ಭಕ್ತಿ ಪ್ರೇಮವಿರಲಿ, ಹೆತ್ತವರಲಿರಲಿ, ನೆರೆಹೊರೆಯವರಲ್ಲಿರಲಿ, ಮುದ್ದು ಮಕ್ಕಳ ಮೇಲಿರಲಿ. ಎಲ್ಲದಕ್ಕೂ ಒಂದು ಪರಿಧಿ, ಮಿತಿ ಇದೆ. ಅದನ್ನೂ ಮೀರಿ ಹೋದಾಗ ಅನಾಹುತಕ್ಕೆ ದಾರಿಯಾಗುತ್ತದೆ. ‘ಪ್ರೇಮವೇ’ ಕಾಮವಾದಾಗ, ಮಿತಿಮೀರಿದಾಗ, ಯಾವುದೂ ಕೈಯಲ್ಲಿಲ್ಲ. ಹಿಡಿತ ತಪ್ಪಿದ ಮೇಲೆ ಬಂಧಿಸಲು, ಸರಿದಾರಿಗೆ ತರಲು ತುಂಬಾ ಕಷ್ಟವಿದೆ. ‘ಕಾಮ ಅಂದರೆ ಬಯಕೆ’. ಅದು ಮನಸಿನಲ್ಲಿ ಹುಟ್ಟುವುದು. ಧನಾತ್ಮಕ ಕಾಮಕ್ಕೆ ನೆಲೆ-ಬೆಲೆ ಎರಡೂ ಇದೆ. ಆದರೆ ಋಣಾತ್ಮಕ-ಅದಕ್ಕೂ ಕಡಿವಾಣ ಅವರವರ ಕೈಯಲ್ಲೇ ಇದ್ದರೆ ಚಂದ. ಬೇಲಿ ದಾಟಿ ಹೊರಗೆ ಹಾರಿದರೆ ಕಷ್ಟ. ಇತ್ತೀಚೆಗೆ ನಾವು ಮಾಧ್ಯಮಗಳಲ್ಲಿ ನೋಡಿದ ಹಾಗೆ ಬಲೆಗೆ ಬೀಳಿಸುವುದು, ಒಂದಷ್ಟು ದಿನ ಓಡಾಟಗಳು, ಅನಂತರ ಒಳಜಗಳ, ಬಹಿರಂಗ ಜಗಳ, ದುರುಪಯೋಗ, ಅನಂತರ, ವಿಚ್ಛೇದನ ಇಲ್ಲವೇ ಉಸಿರು ನಿಲ್ಲಿಸಿ ಅಂತ್ಯ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಮದುವೆಯಾಗದೆ ಒಂದೇ ಮನೆಯೊಳಗೆ ಗಂಡ ಹೆಂಡಿರಂತೆ ಇರುವುದು.ಮುಂದೆ ಎಲ್ಲಾ ಅರಿವಾದಾಗ ರಾತ್ರಿ ಕಳೆದು ಬೆಳಗಾಗುತ್ತದೆ. ಸುಮಾರು ವರುಷಗಳ ಹಿಂದೆ ಉಣಲು ಉಡಲು ಧಾರಾಳವಾಗಿದ್ದು, ಉತ್ತಮ ವಿದ್ಯಾಭ್ಯಾಸ, ಊರಲ್ಲಿ ಒಳ್ಳೆಯ ಹೆಸರಿದ್ದ ಕುಟುಂಬದಲ್ಲಿ ನಡೆದ ಘಟನೆ.ಓರ್ವ ಹೆಣ್ಣು ಮಗಳಿಗೆ ದೂರದ ಉ.ಕರ್ನಾಟಕದಲ್ಲಿ ಸರಕಾರಿ ಕೆಲಸ ಸಿಕ್ಕಿತು. ಮನೆಯವರು ಮೊದಲು ಕಳುಹಿಸಲು ಅಂಜಿದರು. ಹುಡುಗಿ ಆಶ್ವಾಸನೆ ಕೊಟ್ಟಳು.

ಅಂತೂ ಕೆಲಸಕ್ಕೆ ಸೇರಿದಳು. ಒಂದು ವರುಷದೊಳಗೆ ಅವಳಷ್ಟಕ್ಕೇ ಮದುವೆಯೂ ಆದಳು. ಮನೆಯವರಿಗೆ ಗೊತ್ತಾಗಿ ಆಕೆಯನ್ನು ಕರೆತರಲು ಬಹಳ ಬಹಳ ಪ್ರಯತ್ನ ಪಟ್ಟರು. ಆದರೆ ಕಾರ್ಯ ಮಿಂಚಿ ಹೋಗಿತ್ತು. ಇಲ್ಲಿ ಅವಳಿಗೇನೂ ಅಪಾಯವಾಗಿಲ್ಲ. ಇವತ್ತಿಗೂ ಎರಡು ಮಕ್ಕಳೊಂದಿಗೆ ಆಕೆ ಚೆನ್ನಾಗಿದ್ದಾಳೆ.ಆದರೆ ಯಾವುದಕ್ಕೂ ಮಗಳು ಹೇಳಿದ್ದನ್ನು ಕೇಳಲಿಲ್ಲ, ಮನೆಯ ಮರ್ಯಾದೆ ಬೀದಿ ಪಾಲಾಯಿತೆಂದು ಆಕೆಯ ತಾಯಿ,ಚಿಕ್ಕಪ್ಪ ಜೀವ ತೆಗೆದುಕೊಂಡರು. ಅದೇ ಕೊರಗಿನಲ್ಲಿ ಇನ್ನೊಬ್ಬ ಚಿಕ್ಕಪ್ಪ ಸಹ ಬಾವಿಗೆ ಹಾರಿದರು. ಕೂಡು ಕುಟುಂಬದ ಮನೆಯಾಗಿತ್ತು. ತಂದೆ ಅನಾರೋಗ್ಯದಿಂದ ಇಲ್ಲವಾದರು.

ಯಾಕೆ ಹೀಗೆ? ಹಿರಿಯರ ಅತಿಯಾದ ಸಲುಗೆಯೇ? 'ನಾನು ಏನು ಮಾಡಿದರೂ ಕೇಳುವವರಿಲ್ಲ' ಎಂಬ ಭಾವನೆಯೇ? ಮನೆಯಲ್ಲಿ ಮಕ್ಕಳ ಸಂಖ್ಯೆಯ ಕೊರತೆಯೇ? ಹೊತ್ತು, ಹೆತ್ತು, ಸಾಕಿ ಸಲಹಿದ ಹೆತ್ತವರ ಮಾತಿಗೆ ಬೆಲೆಯೇ ಇಲ್ಲವೇ? ಮನೆ, ಮನೆತನದ ಗೌರವಗಳನ್ನು ಗಾಳಿಗೆ ತೂರುವುದೇ? ಹೆಚ್ಚಾಗಿ ಓರ್ವ ದಂಪತಿಗೆ ಒಂದೇ ಮಗು ಇತ್ತೀಚೆಗಿನ ಬೆಳವಣಿಗೆ ನಾವು ಕಂಡಂತೆ.

ಹೌದು, ಅದಕ್ಕೂ ಕಾರಣವಿದೆ. ಒಂದನ್ನೇ ಸಾಕಿ, ವಿದ್ಯೆ ಕಲಿಸಿ ಆಗುವಾಗ ತಂದೆತಾಯಿ ಕಂಗಾಲು. ಸರಕಾರಿ ಶಾಲೆಯಾದರೆ ಸ್ವಲ್ಪ ಉಪಕಾರ. ಆದರೆ ಖಾಸಗಿ ಶಾಲೆ, ಅದೂ ಆಂಗ್ಲ ಮಾಧ್ಯಮವಾದರೆ ಮನೆ ಉಳಿದರೆ ಪುಣ್ಯ. ನಮ್ಮ ಪಕ್ಕದ ಮನೆಯ ಮಗು ಇನ್ನೂ 2.7 ವರ್ಷ, ಖಾಸಗಿ ಆಂಗ್ಲ ಮಾಧ್ಯಮಕ್ಕೆ ದಾಖಲಿಸಲು ಹೋದರಂತೆ (ಪ್ಲೇ ಹೋಮ್  ಗೆ) ರೂ58,000 ಕಟ್ಟಬೇಕಾಗಿ ಬಂತು ಹೇಳಿದರು. ಹಣಕ್ಕೆ ಏನೂ ಬೆಲೆಯಿಲ್ಲ ಎಂದು ಮನದಲ್ಲಿ ಗ್ರಹಿಸಿದೆ. (ಹಾಗೆಂದು ಕೆಲವು ಶಾಲೆಗಳಲ್ಲಿ ಉತ್ತಮ ನೈತಿಕಯುಕ್ತ ಶಿಕ್ಷಣ ಖಂಡಿತಾ ಇದೆ). ಇಲ್ಲವೆಂದಲ್ಲ. ಬಾಯಿಪಾಠ ಇಲ್ಲ ಎಂದಾದರೆ ತಲೆಯೊಳಗೆ ಏನಾದರೂ ಸ್ವಲ್ಪ  ಚಿಂತನ-ಮಂಥನಕ್ಕೆ ಅವಕಾಶವಿರಬಹುದು. ಬಾಯಿಪಾಠ ಎಂಬುದು ಕಟ್ಟಿಕೊಟ್ಟ ಬುತ್ತಿ.ಗಂಟಿನೊಳಗಿನ ಆಹಾರದಂತೆ.ಖಾಲಿಯಾದಾಗ ಮತ್ತೇನಿಲ್ಲ. ಎಲ್ಲಿ ಜೀವನ ಶಿಕ್ಷಣಕ್ಕೆ ಶಾಲೆಗಳಲ್ಲಿ ಹೆಚ್ಚಿನ ಒತ್ತು ಕೊಡುತ್ತಾರೋ, ಅಲ್ಲಿ ಕಲಿತ ಮಕ್ಕಳಲ್ಲಿ ಏನಾದರೂ ನಿರೀಕ್ಷೆ ಮಾಡಬಹುದು. ಬರಿಯ ಹಣ, ಮುಂದೆ ಹೇಗೆ ಹಣವನ್ನು ಮಾತ್ರ ಸಂಪಾದಿಸಬೇಕು ಎಂಬುದನ್ನು ಕಲಿಸಬಹುದು, ಗುಣ ಪ್ರಾಮುಖ್ಯವಲ್ಲ, ಅದರ ನಿರೀಕ್ಷೆಯೂ ಹೆತ್ತವರು ಮಾಡುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ ಮಾಡುವುದು, ಗುರುಹಿರಿಯರನ್ನು ಗಣ್ಯ ಮಾಡದಿರುವುದು, ನಮ್ಮ ಸಂ‌ಸ್ಕೃತಿ, ಸಂಪ್ರದಾಯಗಳನ್ನು ಗಾಳಿಗೆ ತೂರುವುದು ಇದೇ ಕಾರಣ, ಸ್ವೇಚ್ಛಾಪ್ರವೃತ್ತಿಗೆ ನಾಂದಿಯಾಯಿತು. ಮಾನ ಹೋದರೆ ಸಂತೆಯಿಂದ ಕೊಳ್ಳಲಾಗದು. ಅದು ನಮ್ಮ ಕೈಯಲ್ಲೇ ಇದೆ. ಪ್ರೇಮ ಎಂಬ ಪವಿತ್ರ ಪದಕ್ಕೆ ಅಪಚಾರವಾಗದಂತೆ ನಡೆದುಕೊಂಡು, ಮಾನವ ಜನ್ಮವ ಸಾರ್ಥಕ ಪಡಿಸಿಕೊಳ್ಳೋಣ, ನಮ್ಮ ಮನೆಯ ಮಕ್ಕಳಿಗೂ ಉತ್ತಮ ಗುಣನಡತೆಗಳನ್ನು ಕಲಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ