ಒಂದು ಒಳ್ಳೆಯ ನುಡಿ (19) - ದೇವರಿಗೆ ಶರಣಾಗು

ಒಂದು ಒಳ್ಳೆಯ ನುಡಿ (19) - ದೇವರಿಗೆ ಶರಣಾಗು

ಶ್ರುತಿ ಸ್ಮ್ರೃತಿ ಪುರಾಣಾದಿ ಪಂಚರಾತ್ರ ವಿಧಿಮ್ ವಿನಾ/

 ಐಕಾಂತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ//

*ಉಪನಿಷತ್ತುಗಳು, ಪುರಾಣಗಳು, ನಾರದ ಪಂಚರಾತ್ರದಂತಹ ಅಧೀಕೃತ ವೈದಿಕ ಸಾಹಿತ್ಯವನ್ನು ನಿರ್ಲಕ್ಷಿಸಿದ, ಭಗವತ್ ಸೇವೆ, ಭಕ್ತಿಸೇವೆ ಕೇವಲ ಆಡಂಬರವಾದ್ದು, ಇದು ಸಮಾಜವನ್ನು ಕ್ಷೋಭೆಗೊಳಪಡಿಸುತ್ತದೆ*.

ನಾವು*ಭಜನೆ*ಮಾಡುವುದು ಭಕ್ತಿಪೂರ್ವಕವಾಗಿರಬೇಕಷ್ಟೆ. ಆದರೆ ಭಜನೆಯನ್ನು ಶೃದ್ಧಾಭಕ್ತಿಗಳಿಂದ ಮಾಡುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ ನೋಡ್ತಾ ಇದ್ದೇವೆ. ಪ್ರಚಾರ ಕಾಲಕ್ಕೆ ತಕ್ಕಂತೆ ಬೇಕು, ಅದು ಎಲ್ಲೆ ಮೀರಿದರೆ ಹೇಗಾದೀತು? ನಮ್ಮ ನಮ್ಮ ಮನೆಯನ್ನೇ ತೆಗೆದುಕೊಳ್ಳೋಣ, ದೇವರಿಗೆ ನಮಸ್ಕರಿಸಲು ಕುಳಿತಾಗ *ಮೊಬೈಲ್* ರಿಂಗಣಿಸುತ್ತದೆ, ನಮ್ಮ ಮನಸ್ಸು ಆ ಕಡೆಗೆ ವಾಲುತ್ತದೆ. ಅಲ್ಲಿಯೂ ಏಕಾಗ್ರತೆಯಾಗಲಿ, ಶೃದ್ಧೆಯಾಗಲಿ ಕಾಣುವುದಿಲ್ಲ. ಭಗವಂತನ ನಾಮ ಸ್ಮರಣೆಗೆ ದಿನದಲ್ಲಿ  *ಹತ್ತು ನಿಮಿಷ* ವನ್ನು ಎಲ್ಲವನ್ನೂ ಮರೆತು ಕೂರೋಣ. ಅದು ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಎಲ್ಲಾ ನೀನೇ, ನನ್ನದೇನಿಲ್ಲ ಎಂದು ಶರಣು ಬಂದಲ್ಲಿಗೆ *ಕಣ್ಣಿಗೆ ಕಾಣದ ಅಗೋಚರ ಶಕ್ತಿ ಯೊಂದು* ನಮ್ಮ ಬೆನ್ನ ಹಿಂದೆ ನಿಂದು, ನಮ್ಮನ್ನು ಕಾಪಾಡುತ್ತದೆ.

ಯಾವುದೇ ವೈದಿಕ ಗ್ರಂಥಗಳನ್ನು ಓದುವಾಗ *ಗುರುಶಿಷ್ಯ* ಪರಂಪರೆಯಲ್ಲಿ ಸ್ವೀಕರಿಸಿದಾಗ ಮಾತ್ರ ಗ್ರಂಥದ ಆಳ ಅಗಲ ಅರಿವಿಗೆ ಬರುತ್ತದೆ. ಉದಾಹರಣೆಗೆ *ಭಗವದ್ಗೀತೆ*. ಕೃಷ್ಣ ಮರೆತು ಹೋದ ವಿಷಯಗಳನ್ನು ಮತ್ತೊಮ್ಮೆ ಅರ್ಜುನನಿಗೆ ಬೋಧಿಸಿದ. ಇಲ್ಲಿ ಶರಣಾಗತಿ, ಒಪ್ಪಿಕೊಳ್ಳುವ ಮನೋಭಾವ, ಜ್ಞಾನದ ಹರಿವು, ಎಲ್ಲವೂ ಆಯಿತು.*ನಾನು ಹೀಗಿದ್ದೇನೆ, ನೀವು ಹೇಗಿರಬೇಕು* ಹೇಳುವವ ಭಗವಂತ, ಒಪ್ಪಿಕೊಳ್ಳುವವರು ನಾವಾಗಿದ್ದಾಗ ಮಾತ್ರ ನಮ್ಮ ಬದುಕು ಸುಂದರ.

ಭಗವದ್ಗೀತೆಯಲ್ಲಿ ಒಂದೆಡೆ ಕೃಷ್ಣನ ನುಡಿ*ಮನ್ ಮನಾ ಭವ ಮದ್ ಭಕ್ತೋ ಮದ್ ಯಾಜಿ ಮಾಂ ನಮಸ್ಕರು*ಎಂಬುದಾಗಿ.'ನನ್ನನ್ನು ಆರಾಧಿಸು, ನನಗೆ. ಶರಣಾಗು'. ನಾವು ದೇವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಶರಣಾದಲ್ಲಿ ಆತನೇ ನಮ್ಮನ್ನು ಸದಾ ರಕ್ಷಿಸಿ ಪೊರೆಯುವನು. ಆಡಂಬರದ, ತೋರಿಕೆಯ ಭಕ್ತಿಯ ಪಥವನ್ನು ತಿರಸ್ಕರಿಸಿ, ಏಕಾಗ್ರತೆ,ಶೃದ್ಧೆಯಿಂದ ಭಗವಂತನ ನಾಮಸ್ಮರಣೆಯನ್ನು ಮಾಡಿ ಪುನೀತರಾಗೋಣ.

-ರತ್ನಾಭಟ್ ತಲಂಜೇರಿ