ಒಂದು ಒಳ್ಳೆಯ ನುಡಿ -190

ಒಂದು ಒಳ್ಳೆಯ ನುಡಿ -190

ಎಲ್ಲರೂ ಬನ್ನಿರಿ ಕಲಿಯೋಣ

ಬಲ್ಲವರಾಗುತ ನಲಿಯೋಣ

ಕನ್ನಡಮ್ಮನ ಮರೆಯದೆ ನಾವು

ಸೇವೆಯ ಗೈಯುತ ಕುಣಿಯೋಣ

ಹೌದಲ್ವಾ? ಹೆತ್ತ ಅಮ್ಮನನ್ನು ಮರೆತು ಬಾಳಲುಂಟೇ? ಬಾಳಿದಲ್ಲಿ ಆ ಮಕ್ಕಳಿಗೆ ನೆಮ್ಮದಿಯಿದೆಯೇ? ಹಾಗೆಯೇ ಹೊತ್ತ ನೆಲ, ಉಸಿರಾಡುವ ಗಾಳಿ, ಕುಡಿಯುವ ನೀರು ನೀಡಿ ಸಲಹುವ ಕನ್ನಡಮ್ಮನ ಮರೆತು ಬದುಕುವುದು ಸಲ್ಲದ ಮಾತು. ಸಾಧ್ಯವಾದ ಸೇವೆಯನ್ನು ಮಾಡೋಣ.

***

ಸುಲಿದ ಬಾಳೆಯ ಹಣ್ಣಿನಂದದಿ

ಕಳೆದ ಸಿಗುರಿನ(ಚಿಗುರಿನ) ಕಬ್ಬಿನಂದದಿ

ಅಳಿದ ಉಷ್ಣದ ಹಾಲಿನಂದದಿ

ಲಲಿತವಾಗಿಹುದು ಕನ್ನಡದ ನುಡಿಯು

ಸುಲಲಿತವಾಗಿ, ಸುಂದರವಾಗಿ,ಸೊಗಸಾಗಿ ಮನಸ್ಸಿಗೆ ಹಿತವಾಗುವಂತೆ ಮಾತನಾಡುವ ಭಾಷೆ ಕನ್ನಡವನ್ನು ನಮ್ಮ ಹಿರಿಯ ಕವಿಗಳು, ಸಾಹಿತಿಗಳು ಹೋಲಿಸಿದ ಪರಿ ಅನುಪಮ, ಅಪ್ಯಾಯಮಾನ, ಅದ್ಭುತವಲ್ಲವೇ? ಇದೇ ಕನ್ನಡ ಭಾಷೆಯ ಸೊಗಡು. ನಾಡು ನುಡಿಯ ಮೇಲಿನ ಅಭಿಮಾನ.

***

ಹೂವಿನ ಜೇನಿನ ಹೊನ್ನಿನ ನಾಡು

ಕವಿಗಳ ಋಷಿಗಳ ಸಂತರ ನಾಡು

ವಿಧವಿಧ ಧರ್ಮದ ದೇವರ ಬೀಡು

ಬೆಚ್ಚನೆ ಬದುಕಿನ ತೌರಿದು ನೋಡು

ಈ ನಾಲ್ಕು ಸಾಲುಗಳಿನ ಒಂದೊಂದು ಪದಗಳೂ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಸಂಪ್ರದಾಯ, ಕವಿಗಳ, ಸಂತರ, ನಮ್ಮ ಜನರ ಹೃದಯ ವೈಶಾಲ್ಯತೆಯನ್ನು ಎತ್ತಿ ಹಿಡಿದಿದೆ. ನಮ್ಮ ನಾಡು ನಮ್ಮ ಹೆಮ್ಮೆ ಅಲ್ಲವೇ?

***

ಕನ್ನಡಮ್ಮನ ಮಕ್ಕಳು ನಾವು

ಪ್ರೀತಿಯ ಗಂಧವ ಸೂಸುವೆವು

ಸಮರಸದಲ್ಲಿ ಹೃದಯವ ಬೆಸೆದು

ನಾಡಿನ ಸಿರಿಯನು ಬೆಳಗುವೆವು

ಜಾತಿ, ಮತ, ಯಾವುದೇ ಭೇದಭಾವವಿಲ್ಲದೆ, ಅತ್ಯಂತ ಪ್ರೀತಿ-ಸ್ನೇಹದಿಂದ ಎಲ್ಲರನ್ನೂ ಸ್ವೀಕರಿಸುವ ಅದ್ಭುತ ಶಕ್ತಿಯ ಭಾಷೆ ಕನ್ನಡ. ಎಲ್ಲರೊಂದಾಗಿ ಭಾವೈಕ್ಯತೆಯಿಂದ ನಾಡಿನ ಕೀರ್ತಿಯನ್ನು ಜಗದಗಲ ಪಸರಿಸೋಣ.

***

ಬಾರೋ ಗೆಳೆಯ ಹೋಗೋಣ

ಕನ್ನಡಮ್ಮನ ಸೇವೆಯ ಮಾಡೋಣ

ಶಾಂತಿಯ ಮಮತೆಯ  ಸಾರೋಣ

ವರ್ಣಮಾಲೆಯ ಬರೆಯೋಣ

ನಮ್ಮ ಮುದ್ದು ಕಂದಮ್ಮಗಳಿಗೆ ನಮ್ಮ ನಾಡು ಕನ್ನಡ, ನಮ್ಮ ತೊದಲ್ನುಡಿ ಕನ್ನಡ ಎನ್ನುವುದನ್ನು ಹೇಳೋಣ, ಕಲಿಸೋಣ. ಶಾಲೆಯಲ್ಲಿ ಒಂದು ಭಾಷೆ ನಮಗೆ ಕನ್ನಡವೇ ಬೇಕೆಂಬ ಮನವರಿಕೆ ಮಾಡಿ ಕೊಡೋಣ ಬಂಧುಗಳೇ. ಅನ್ಯ ಭಾಷೆಯನ್ನು ಗೌರವಿಸುವುದರೊಂದಿಗೆ ನಮ್ಮ ನಾಡು-ನುಡಿಯ ಬಗ್ಗೆ ನಾವೇ ತಾತ್ಸಾರ ಮಾಡಬಾರದಲ್ಲವೇ?

***

ಕನ್ನಡ ನುಡಿಯಲಿ ಕನ್ನಡ ಗುಡಿಯಲಿ

ಹೃದಯದ ಒಲುಮೆಯು ತುಂಬಿಹುದು

‌ಬಿತ್ತೋಣ, ಬೆಳೆಯೋಣ, ಕಲಿಯೋಣ, ಕಲಿಸೋಣ, ಬರೆಯೋಣ ಚೆಲುಕನ್ನಡ ಪದಗಳನ್ನು. ಕವಿಪುಂಗವರ ನಾಡು, ದಾಸವರೇಣ್ಯರು ಜನಿಸಿ, ಬಾಳಿ ಬದುಕಿದ ಬೀಡು, ನಮ್ಮ ಶ್ರೀಗಂಧದ ಈ ಕನ್ನಡ ನಾಡು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ