ಒಂದು ಒಳ್ಳೆಯ ನುಡಿ - 192

ಒಂದು ಒಳ್ಳೆಯ ನುಡಿ - 192

ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಹಾ ಪರಿನಿರ್ವಾಣ ದಿನದಂದು ಗೌರವ ನುಡಿ ನಮನಗಳು.

ನಮ್ಮ ದೇಶದ ಬೃಹತ್ ಲಿಖಿತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಶ್ರೇಷ್ಠ ಮಾನವತಾವಾದಿಗಳು. ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ಬಡವರ, ದೀನದಲಿತರ, ಹೆಣ್ಣುಮಕ್ಕಳ, ಆರ್ತನಾದಕ್ಕೆ ಧ್ವನಿಯಾದವರು. ಅವರ ಚಿಂತನೆಗಳಿಗೆ ಅವರೇ ಸರಿಸಾಟಿ. ಪ್ರಗತಿ, ಅಭಿವೃದ್ಧಿ ನಮ್ಮ ಮನೆಗಳಿಂದಲೇ ಆರಂಭವಾಗಬೇಕೆಂದು ಕರೆಯಿತ್ತವರು. ಕಾನೂನಿನ ಚೌಕಟ್ಟಿನೊಳಗೆ ಸ್ವಾತಂತ್ರ್ಯ, ಸಮಾನತೆ, ಸಂರಕ್ಷಣೆ ಆದರೆ ಮಾತ್ರ ನ್ಯಾಯ ಸಿಗಬಹುದೆಂದವರು. ಕೃಷಿಯನ್ನು ಬಲಪಡಿಸಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾದಲ್ಲಿ ಯಾರೂ ಹಸಿವೆಯಿಂದ ನರಳಬೇಕಿಲ್ಲವೆಂದವರು.

ಸಮಾನತೆಯ ಸಾರಿ ವಿಶ್ವವ್ಯಕ್ತಿಯಾದವರು. ಅರ್ಥಶಾಸ್ತ್ರಜ್ಞರಾದ ಶ್ರೀಯುತರು ನಮ್ಮ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದವರು. ತಮ್ಮ ಜೀವನವನ್ನೇ ದೇಶಕ್ಕಾಗಿ, ಅಸ್ಪೃಶ್ಯರ, ದೀನರ, ಬಡವರ ಹೋರಾಟಕ್ಕಾಗಿ ಮುಡಿಪಾಗಿಟ್ಟು ಜಯ ಸಾಧಿಸಿದ ಧೀಮಂತ ಗುಣದ ಶ್ರೀಮಂತ ಮನಸ್ಸಿನ ವ್ಯಕ್ತಿ. ಮಹಿಳೆಯರ ಸ್ಥಿತಿ-ಗತಿಯ ಬಗ್ಗೆ ಚಿಂತಿಸಿ, ಚಿಂತನೆಗಳನ್ನು ಸಮಾಜಕ್ಕೆ ನೀಡಿದರು. ಒಬ್ಬರನ್ನೊಬ್ಬರು ಅರ್ಥಮಾಡುವುದು,ಸಮಾನತೆಯ ದೃಷ್ಟಿಕೋನ, ಪ್ರಗತಿಪರ ಆಲೋಚನೆ, ಏಕತೆಯ ತತ್ವದ ಪರಿಕಲ್ಪನೆ ಬದುಕಿನಲಿ, ವ್ಯವಹಾರದಲ್ಲಿ ಬರಬೇಕೆಂದು ಆ ನಿಟ್ಟಿನಲ್ಲಿ ಶಕ್ತಿಮೀರಿ ದುಡಿದ ಮಹಾನ್ ನಾಯಕರಾದ ಡಾ.ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ನಮ್ಮನಗಲಿದ ದಿನವಿಂದು (ಡಿಸೆಂಬರ್ ೬). ಆ ಚೇತನಕ್ಕೊಂದು ನುಡಿ ನಮನ.

-ರತ್ನಾ ಕೆ ಭಟ್, ತಲಂಜೇರಿ

(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ) ಚಿತ್ರ ಕೃಪೆ: ಇಂಟರ್ನೆಟ್ ತಾಣ