ಒಂದು ಒಳ್ಳೆಯ ನುಡಿ - 193
*ನಿಂದಾಂ ಯ: ಕುರುತೇ ಸಾಧೋಸ್ತಥಾ ಸ್ವಂ ದೂಷಯತ್ಯಸೌ/*
*ಖೇ ಭೂತಿಂ ಯ: ಕ್ಷಿಪೇದುಚ್ಚೈರ್ಮೂರ್ಧ್ನಿ ತಸ್ಯೈವ ಸಾ ಪತೇತ್//*
ಉತ್ತಮರನ್ನು,ಒಳ್ಳೆಯವರನ್ನು ,ಸಜ್ಜನರನ್ನು ದೂರುವವನು ತನ್ನನ್ನು ತಾನೇ ಹಳಿದುಕೊಂಡಂತೆ. ಆಕಾಶಕ್ಕೆ ಎಸೆದ ಭಸ್ಮ (ಬೂದಿ)ಯು ಎಸೆದವನ ಮೇಲೆಯೇ ಬೀಳುವುದಲ್ಲವೇ? ಇತರರ ಬಗ್ಗೆ ಮಾತನಾಡುವಾಗ ಜಾಗ್ರತೆ ಮಾಡಬೇಕು,ನಾಲಿಗೆಗೆ ಲಗಾಮು ಇರಬೇಕು.
***
ಪ್ರಶಂಸೆ,ಹೊಗಳಿಕೆ ಯಾರಿಗೆ ಇಷ್ಟವಿಲ್ಲ ಹೇಳಿ? ಏನೂ ತಿಳಿಯದ ಹಸುಗೂಸು ಸಹ ಹೊಗಳಿದಾಗ ನಗುತ್ತದೆ. ಪ್ರಶಂಸೆಗೂ ಇತಿಮಿತಿಯಿರಬೇಕು.
*ಪ್ರಶಂಸಾ ನಕ್ರಸಂಕಾಶಾ ನರಾನಾಂತಂ ಗಿಲತ್ಯಹೋ/*
*ಆಕ್ಷೇಪ: ಸ್ನಾನಸಂಕಾಶ:ಕ್ಷಾಲಯತ್ಯಾಂತಮಂಜಸಾ//*
ಅಂಕೆಯಿಲ್ಲದ ಹೊಗಳಿಕೆಯು ಮೊಸಳೆಯಂತೆ ನರರನ್ನು ನುಂಗಿ ನೊಣೆಯಬಹುದು. ವಿವೇಕದ ವಿಮರ್ಶೆಯು ಪವಿತ್ರ ತೀರ್ಥಸ್ನಾನದಂತೆ, ಮಾನವರ ಒಳ-ಹೊರಗನ್ನು ಸ್ವಚ್ಛ ಮಾಡುತ್ತದೆ.
***
*ಕಣ್ಣು ನಾಲಗೆ ಮನವು ತನ್ನದೆಂದೆನಬೇಡ*
*ಅನ್ಯರು ಕೊಂದರೆನಬೇಡ ಇವು ಮೂರು*
*ತನ್ನ ಕೊಲುವುವು ಸರ್ವಜ್ಞ*//
ಮಾನವನ ನಡೆನುಡಿಯಿಂದಲೇ ಒಳ್ಳೆಯತನ ನಿರ್ಧಾರವಾಗುತ್ತದೆ. ಅವನ ಬದುಕಾಗಲಿ, ಕೆಡುವುದಾಗಲಿ ಅವನ ಕೈಬಾಯಿಗಳಿಂದಲೇ ಹೊರತು ಅನ್ಯರಿಂದಲ್ಲ. ನಾವಾಡುವ ಮಾತುಗಳಿಗೆ, ಮಾಡುವ ಕೆಲಸಗಳಿಗೆ ಸ್ವಯಂ ಅಂಕುಶವಿರಲಿ,ಆಗ ಎಲ್ಲವೂ ಸುಗಮವಾಗಿರಬಹುದು.
***
ಮಾನವನು ಸತತವಾಗಿ ನಿತ್ಯವೂ ಕಾಯಕ ಗೈಯುವುದನ್ನು ಜೇನುಹುಳಗಳಿಂದ ಕಲಿಯಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಪಾಠವನ್ನು ಸಹ ನಾವು ನೋಡಿ ಕಲಿಯಬಹುದು. ಕೆಲಸ ಯಾವುದೇ ಇರಬಹುದು, ನಿಷ್ಠೆ, ಪ್ರಾಮಾಣಿಕತೆ, ಏಕಾಗ್ರತೆ, ಮನಸ್ಸು ಮುಖ್ಯ.
***
ನಮಗೆ ಜ್ಞಾನವು ಸಿಗಬೇಕಾದರೆ ಏಕಾಗ್ರತೆ, ನಿಷ್ಠೆ, ಅಚಲಭಕ್ತಿ, ಶ್ರದ್ಧೆ ಬೇಕು. ವಿಷಯವಾಸನೆಗಳಿಂದ ದೂರವಿರಬೇಕು.
*ಕಷಾಯೇ ಕರ್ಮಭಿ: ಪಕ್ವೇ ತತೋ ಜ್ಞಾನಂ ಪ್ರವರ್ತತೇ*
ಸುಖಾಸುಮ್ಮನೆ ಕರ್ಮಗಳನ್ನು ತೋರಿಕೆಗೆ ಮಾಡಿದರಾಗದು. ಮನದಲ್ಲಿರುವ ಎಲ್ಲಾ ಕಶ್ಮಲಗಳನ್ನು ಹೊರಹಾಕಿ ನಿರಾಳವಾಗಿ ಕೆಲಸ, ಕರ್ತವ್ಯಗಳನ್ನು ಮಾಡಿದರೆ ಮಾತ್ರ ನಮ್ಮ ಗುರಿ ಸಾಧಿಸಬಹುದು, ಜ್ಞಾನವು ಫಲಿಸಬಹುದು.
***
ಮಹನೀಯರ ಸಹವಾಸ ಮಾಡಿದವರು ಎಷ್ಟೇ ಕೆಟ್ವರಾದರೂ ಒಳ್ಳೆಯವರಾಗಿ ಪರಿವರ್ತನೆ ಹೊಂದಬಹುದು. ಜಗದ ತಂದೆ ಪರಮೇಶ್ವರನ ಮೈಗಂಟಿದ ಚಿತಾಭಸ್ಮ ವಿಭೂತಿಯಾದಂತೆ. ಉತ್ತಮರ ಸಹವಾಸ ಉತ್ತಮ ದಾರಿಯನ್ನೇ ತೋರಿಸಬಹುದು. ಸ್ನೇಹ ಸಹವಾಸ ಮಾಡುವಾಗ ನೋಡಿ, ಅರಿತು ಮಾಡಬೇಕು.
-ರತ್ನಾ ಕೆ. ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ