ಒಂದು ಒಳ್ಳೆಯ ನುಡಿ - 194
ಶಿವರಾಮ ಕಾರಂತರು ನಿರ್ಗಮಿಸಿ ೨೫ ವರ್ಷಗಳಾದವು. ಅವರ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಪುಸ್ತಕವನ್ನು ಹತ್ತನೇ ಸಲ ಮತ್ತೆ ಓದುತ್ತಿರುವೆ. ಹಲವಾರು ಸಲ ಪರಿಷ್ಕರಿಸಿ, ವಿಸ್ತರಿಸಿದ ೨೦೧೭ರ ಈ ಪುಸ್ತಕ ಎಷ್ಟು ಬಾರಿ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಕಾರಂತರ 'ಬಾಳ್ವೆಯೇ ಬೆಳಕು' ನನ್ನ ತುಂಬಾ ಇಷ್ಟದ ಪುಸ್ತಕ. ಯೌವನದ ದಿನಗಳಲ್ಲಿ ನನ್ನ ವೈಚಾರಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ ಈ ಪುಸ್ತಕದ ಪಾತ್ರ ತುಂಬಾ ಮುಖ್ಯವಾದುದು. ಕಾರಂತರದು ಬಹುಮುಖಿ ವ್ಯಕ್ತಿತ್ವ. ಬರೀ ಒಂದೆಡೆ ಕೂತು ಬರೆದವರಲ್ಲ, ಕೇವಲ ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿ ಕೊಂಡು ಕುಣಿದವರಲ್ಲ. ಇವನ್ನೆಲ್ಲ ಮಾಡುತ್ತಲೇ ಹರೆಯದ ಹುಡುಗರಂತೆ ಊರೂರು ಸುತ್ತಿದವರು. ನಮ್ಮ ಬಿಜಾಪುರ ಜಿಲ್ಲೆಗೆ ಬಂದರೆ ಹಲಸಂಗಿಗೆ ಹೋಗಿ ಕವಿ ಮಧುರ ಚೆನ್ನ, ಸಿಂಪಿ ಲಿಂಗಣ್ಣ ಅವರ ಜೊತೆಗೆ ತಿಂಗಳಾನುಗಟ್ಟಲೇ ಇದ್ದು ಆ ಊರಿನ ನವಿಲುಗಳನ್ನು ಕಂಡು ಸಂಭ್ರಮಿಸಿದವರು. ಹಡಗಲಿಯ ಬಳಿ ಮುದೇನೂರ ಸಂಗಣ್ಣನವರ ಮನೆಗೆ ಹೋಗಿ ಪಟ್ಟಾಂಗ ಹೊಡೆದವರು. ಧಾರವಾಡಕ್ಕೆ ಬಂದರೆ ಅವರ ಪತ್ನಿಯ ತಂಗಿ ಗೀತಾ ಕುಲಕರ್ಣಿ ಅವರ ಮನೆಯಲ್ಲಿ ತಂಗುತ್ತಿದ್ದರು. ಒಮ್ಮಲೇ ಮುಂಬಯಿ ನೆನಪಾಗಿ ಅಲ್ಲಿ ಹೋಗಿ ಝಂಡಾ ಊರುತ್ತಿದ್ದರು. ಯಕ್ಷಗಾನ ತಂಡವನ್ನು ಕರೆದುಕೊಂಡು ವಿದೇಶಕ್ಕೂ ಹೋಗಿ ಬಂದವರು. ಒಮ್ಮೆ ಹುಬ್ಬಳ್ಳಿಗೆ ಬಂದಾಗ ಅವರ ಭಾಷಣ ನಡೆಯಲಿದ್ದ ಸಭಾಂಗಣಕ್ಕೆ ಮೆಟ್ಟಿಲು ಹತ್ತಿ ಮೇಲಂತಸ್ತಿಗೆ ಹೋಗುವಾಗ ಕೈ ಹಿಡಿಯಲು ಬಂದ ಯುವಕನ ಮೇಲೆ ಕೆಂಡಾ ಮಂಡಲವಾಗಿದ್ದರು. ಅವರ ಹಲವಾರು ಭಾಷಣಗಳನ್ನು ಕೇಳಿದ್ದೆ. ಅವರ ಮುಂಗೋಪಕ್ಕೆ ಮುಲಾಜಿರಲಿಲ್ಲ. ಇಂಥವರು ಮತ್ತೆ ಸಿಗುವುದಿಲ್ಲ.
-ಸನತ್ ಕುಮಾರ ಬೆಳಗಲಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ