ಒಂದು ಒಳ್ಳೆಯ ನುಡಿ - 195

ಒಂದು ಒಳ್ಳೆಯ ನುಡಿ - 195

* ನಿಖರತೆ ಮತ್ತು ಸ್ಪಷ್ಟತೆ ಮೇಲುನೋಟಕ್ಕೆ ಒಂದೇ ಅನ್ನಿಸಬಹುದು. ನಿಖರತೆ ಹೇಳಬೇಕಾದ ವಿಷಯವನ್ನು ಮಾತ್ರ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಹೇಳುವುದು. ನಿಖರತೆ ಸಾಧಿಸಿದವನು ಸ್ಪಷ್ಟತೆಯನ್ನು ಆರ್ಜಿಸಿಕೊಂಡ ಹಾಗೆ. ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಖರತೆ ಮತ್ತು ಸ್ಪಷ್ಟತೆಯಿರಲಿ.

* ನಾವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಸಂತಸವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಏನಾದರೂ ಹೆಚ್ಚು ಕಡಿಮೆಯಾದರೆ ಸ್ಥಿತಪ್ರಜ್ಞರಾಗಿದ್ದಲ್ಲಿ ಸಂತೋಷ ತಾನಾಗಿಯೇ ಸಿಗುವುದು. ಸ್ಥಿರ ಮನೋಭಾವ ಮುಖ್ಯ.

* ಪ್ರಯತ್ನಕ್ಕೆ ತಕ್ಕ ಫಲ ಬೇಕೆಂಬ ಆಸೆ ಸಹಜ. ಫಲ ನೀಡೆಂದು ದೇವರನ್ನು ಪ್ರಾರ್ಥಿಸುತ್ತೇವೆ. ಆದರೆ ಪ್ರಯತ್ನವೇ ಮಾಡದೆ ದೊಡ್ಡ ದೊಡ್ಡ ಫಲಗಳು ಸಿಗಬೇಕೆಂದು ಬಯಸುವುದು ಬಹುದೊಡ್ಡ ತಪ್ಪು.

* ಹೃದಯದಲ್ಲಿನ ಪ್ರೀತಿಯ ಹೊರತಾಗಿ, ಈ ಜಗತ್ತಿನ ಯಾವ ಸಂಗತಿಗಳೂ ನಮ್ಮ ಒಡೆತನಕ್ಕೆ ಸೇರಿದ್ದಲ್ಲ, ಎಂಬ ಎಚ್ಚರದಿಂದಿದ್ದರೆ ಆತಂಕಕ್ಕೆ ಆಸ್ಪದವಿರುವುದಿಲ್ಲ.

* ಅಪರಾಧ ಮಾಡಿದವರನ್ನು ಯಾವತ್ತೂ ರಕ್ಷಿಸಬಾರದು.ಆತ ಮತ್ತಷ್ಟು ತಪ್ಪುಗಳನ್ನು ಎಸಗುತ್ತಾ ಹೋಗಲು ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ. ‘ಕೃತಾಪರಾಧಸ್ಯ ಸತ್ಕೃತಿರ್ವಧ: ಅಪರಾಧಿಯನ್ನು, ತಪ್ಪು ಮಾಡಿದವನನ್ನು ಗೌರವಿಸಿದರೆ ಅದು ಸಾವಿಗೆ ಸಮಾನ.

* ನಮ್ಮ ಇಷ್ಟಗಳು ನಮಗೆ ಸಿಗಬೇಕಾದರೆ ಕೆಲವೊಂದು ಸಲ ಕಷ್ಟ-ನಷ್ಟಗಳನ್ನು,ನರಕ ಯಾತನೆಗಳನ್ನು ಅನುಭವಿಸಬೇಕಾಗಬಹುದು. ಇದು ಅನಿವಾರ್ಯವೂ ಹೌದು. ಸುಖಾಸುಮ್ಮನೆ ಯಾವುದು ಸಹ ಕಾಲಬುಡಕ್ಕೆ ಬರಲಾರದು. ತಾಳ್ಮೆಎಂಬ ಪ್ರಬಲ ಅಸ್ತ್ರದಿಂದ ನಮ್ಮ ಯೋಗ್ಯತೆಗೆ ಅನುಸಾರವಾಗಿ  ಪಡೆಯಲು ಶಕ್ತರಾಗೋಣ. *ಯಥಾ ಶಿವಮಯೋ ವಿಷ್ಣು: ಏವಂ ವಿಷ್ಣು ಮಯ: ಶಿವ:*

*ಪರಮಾತ್ಮನ ಏಕ ಹಾಗೂ ಗುಣ-ದೋಷರಹಿತನಾಗಿದ್ದರೂ,ಸೃಷ್ಟಿ ಇತ್ಯಾದಿ ಕ್ರಿಯೆಗಳ ಕಾರಣದಿಂದ ಅವನು ಮೂರು ರೂಪಗಳನ್ನು ಹೊಂದಿರುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಶಿವನು ಜಗದ ಜೀವರಾಶಿಗಳ ತಂದೆ. ಸತ್ಯಕಾಮನೂ, ಸತ್ಯಾತ್ಮನೂ ,ಸತ್ಯ ಸಂಕಲ್ಪನೂ ,ನಿರಾಮಯನೂ, ಕತ್ತಲೆಯನ್ನು ದೂರಮಾಡುವ ಪರಮೇಶನನ್ನು ಉಪವಾಸ, ಧ್ಯಾನ, ಭಜನೆ, ಸತ್ಸಂಗ, ಕೀರ್ತನೆಯ ಮೂಲಕ ಆರಾಧಿಸೋಣ. ಜೊತೆಗೆ ದಿನನಿತ್ಯದ ಕಾಯಕದಲ್ಲಿ ಪರಮೇಶನನ್ನು ಕಾಣುತ್ತಾ ಕೃತಾರ್ಥರಾಗೋಣ. 

* ವಿದ್ವತ್ತ್ ಎಂದರೆ ಒಂದು ಸಮಯವನ್ನು ತೋರಿಸುವ,ಹೇಳುವ ಗಡಿಯಾರದಂತೆ. ನಿರಂತರ ಚಲನೆ. ಅದು ನಿಲ್ಲುವುದೇ ಇಲ್ಲ. ಚಲಿಸಲು ಬೇಕಾದ್ದನ್ನು ನೀಡುವುದು ನಮ್ಮ ಕೆಲಸ. ಹಾಗೆಯೇ ಜ್ಞಾನ, ವಿದ್ವತ್ತ್ ಎನ್ನುವುದು ‌ಸಮಯ, ಸಂದರ್ಭ ಬಂದಾಗ ನಾಲ್ಕು ಜನರಿಗೆ ಉಪಯೋಗವಾಗುವಂತಿರಬೇಕು.‌ ಸುಮ್ಮನೆ ಕಲಿತಿದ್ದೇನೆಂದು ಬೀಗಿದರೆ ಯಾರಿಗೂ ಉಪಯೋಗವಿಲ್ಲ. ಇದೆ ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲ. ಪ್ರಯೋಜನಕ್ಕೆ ಒದಗುವಂತಿರಬೇಕು.

* ಯಾರಲ್ಲಿ ಇನ್ನೊಬ್ಬರಿಗೆ  ಸಹಕರಿಸುವ ಮನೋಭಾವದ ಹೃದಯವಂತಿಕೆ ಇರುವುದೋ, ಆತನಿಗೆ ಇತರರ ತಪ್ಪನ್ನು ತಿದ್ದಿ ಹೇಳುವ ಅಧಿಕಾರ ಸಹ ಇರುವುದು. ಎಲ್ಲರಲ್ಲಿಯೂ ಈ ರೀತಿಯ ಗುಣವಿರಲು ಸಾಧ್ಯವಿಲ್ಲ. ಬಿದ್ದವರನ್ನು ಆಡಿಕೊಳ್ಳದೆ ಕೈಹಿಡಿದೆತ್ತುವ ಆರ್ದ್ರತೆಯಿರಲಿ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ