ಒಂದು ಒಳ್ಳೆಯ ನುಡಿ - 198

ಒಂದು ಒಳ್ಳೆಯ ನುಡಿ - 198

ದಶಂಬರ ೨೫ ಎಂದಾಕ್ಷಣ ನೆನಪಿಗೆ ಬರುವುದು ‘ಕ್ರಿಸ್ಮಸ್. ಶಾಲಾ ದಿನಗಳಲ್ಲಿ ಆ ದಿನ ಶಾಲಾ ಮಕ್ಕಳಿಗೆ ರಜೆ. ಕೆಲವೆಡೆ  ‘ಕ್ರಿಸ್ಮಸ್ ರಜೆ’ ಒಂದು ವಾರದ್ದು ಇರುತ್ತದೆ, ಅದು ಒಪ್ಪಂದದ ಮೇರೆಗೆ, ಹೊಂದಾಣಿಕೆಯೊಂದಿಗೆ. ಏಸುಕ್ರಿಸ್ತರ ಜನ್ಮದಿನವನ್ನು ಕ್ರಿಸ್ಮಸ್ ಎಂಬ ಆಚರಣೆಯೊಂದಿಗೆ ಕ್ರ್ಯೆಸ್ತ ಜನಾಂಗದವರು ಆಚರಿಸುತ್ತಾರೆ. ಈ ಹಬ್ಬದಲ್ಲಿ ಮಹತ್ವವಿರುವುದು ಪ್ರಮುಖ ಮೂರು ಬಣ್ಣಗಳಿಗೆ ‘ಕೆಂಪು, ಹಸಿರು, ಹಳದಿ’.

ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ಸಂಕೇತ ಕೆಂಪು ಬಣ್ಣ ಒಂದೆಡೆಯಾದರೆ, ಪ್ರೇಮದ ಸಂಕೇತ, ಜನಮಾನಸದಲ್ಲಿ ಮಾನವತ್ವದ ಮೊಳಕೆಯೊಡೆಯಿಸುವುದು, ಪ್ರೀತಿ ನಂಬಿಕೆಗಳ ಬುನಾದಿ, ಸಂತಸದ ಪ್ರತೀಕವೂ ಆಗಿದೆ. ಶಿಲುಬೆಗೆ ಹಾಕಿದಾಗಲೂ ಪ್ರೀತಿ ನಂಬಿಕೆ, ಮಾನವತೆಯಿಂದಲೇ ಇದ್ದಂಥ ಸ್ಥಿತಪ್ರಜ್ಞತೆಯೇ ‘ಕೆಂಪು ಬಣ್ಣ’

‘ಹಸಿರು ಬಣ್ಣ’ ಮುಂದುವರಿಯುವಿಕೆ, ಆಸರೆ ನೀಡಿದ ಸಂಕೇತ. ಏಸುಕ್ರಿಸ್ತರ ಜನನ ಹಸಿರು ಹುಲ್ಲು ಹಾಸಿನ ಮೇಲೆಯೇ ಆಯಿತು, ಕಠಿಣ ಪರಿಸ್ಥಿತಿ ಇತ್ತು, ಬಡತನ ಈ ಎಲ್ಲವನ್ನೂ ಓದಿ ಅರಿತವರು ನಾವುಗಳು. ಇನ್ನೊಂದು ಚಳಿಗಾಲದ ದಿನಗಳಲ್ಲಿ ಹಸಿರು ಎನ್ನುವುದು ಗಿಡಮರಗಳನ್ನು ರಕ್ಷಿಸುತ್ತದೆ, ವೈಜ್ಞಾನಿಕ ಕಾರಣ ಸಹ. ಜೀವನದ ನಿಜವಾದ ಕಷ್ಟದ ಅರಿವು, ಏನು ಬಂದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ, ದೇವರು ನೀಡುವ ಎಲ್ಲಾ ಕಠಿಣ ಪರೀಕ್ಷೆಗಳನ್ನು ಅನುಭವಿಸಿ, ದೇವರನ್ನೇ ಸೇರುವ ಸಂಕೇತವೇ ಹಸಿರು ಬಣ್ಣ.

ಹಳದಿ ಬಣ್ಣ ‘ಚಿನ್ನದ ಬಣ್ಣ ದಾನದ’ ಮಹತ್ವವನ್ನು ಹೇಳುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿಯಿದೆ. ಇದೇ ಕಾರಣಕ್ಕಿರಬಹುದು. ಪ್ರೀತಿ ಮತ್ತು ಶಾಂತಿ, ಸಂಬಂಧಗಳ ಬೆಸುಗೆ, ಗಟ್ಟಿಗೊಳಿಸುವಿಕೆ ಇದೇ ಹಳದಿ ಬಣ್ಣದ ಮಹತ್ವ.

ಕ್ರ್ಯೆಸ್ತ ಜನಾಂಗದವರು ತಮ್ಮ ಚರ್ಚ್ ಗಳಲ್ಲಿ ಸೇರಿ ಶುಭಾಶಯ, ಉಡುಗೊರೆ ವಿನಿಮಯ ಮಾಡುವರು. ಪ್ರಾರ್ಥನೆ ಸಲ್ಲಿಸುವರು. ಅಲಂಕಾರ, ಮೇಣದಬತ್ತಿಯ ದೀಪ ಉರಿಸಿ, ಆಕರ್ಷಕ ಗೋದಲಿಗಳನ್ನು ಮಾಡಿ, ಬಾಲ ಏಸುವಿನ ಮೂರ್ತಿ ಇಟ್ಟು, ದೇವರ ಸ್ತುತಿ, ಕ್ರಿಸ್ಮಸ್ ಹಾಡುಗಳು, ಹೂವು ಸುಗಂಧ ದ್ರವ್ಯಗಳನ್ನು ಅರ್ಪಿಸಿ ಏಸುವಿನ ಜನನವನ್ನು ಸ್ವಾಗತಿಸುತ್ತಾರೆ. ಬೆಂಗಳೂರಿನಲ್ಲಿ ಕೆಲವು ಮನೆಗಳಲ್ಲಿ ನಾನು ಕಂಡ ಹಾಗೆ ಮನೆಯಲ್ಲಿ ಕ್ರಿಸ್ಮಸ್ ಟ್ರೀಯನ್ನು ಮಾಡಿ, ಅಲಂಕರಿಸಿ ಅಕ್ಕಪಕ್ಕದ ಮನೆಯವರನ್ನು, ಪುಟ್ಟ ಮಕ್ಕಳನ್ನು ಬರಹೇಳಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ವಿನಿಮಯ, ಕ್ರಿಸ್ಮಸ್ ಆಚರಣೆಯ ಮಹತ್ವ, ಉಡುಗೊರೆಗಳನ್ನು ನೀಡಿ ಹರ್ಷಿಸುತ್ತಾರೆ.

ಪುನ: ಕೊರೊನಾ ಅಲೆ ಬಂದಿದೆಯೆಂಬ ಮಾಹಿತಿ ಮಾಧ್ಯಮಗಳಲ್ಲಿದೆ. ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಸಾಕಷ್ಟು ಆರೋಗ್ಯದ ಕಡೆಗೆ ಗಮನವಿಟ್ಟು ಆಚರಿಸೋಣ. ಎಲ್ಲರಿಗೂ ಶುಭವಾಗಲಿ. ಎಲ್ಲಾ ಕ್ರ್ಯೆಸ್ತ ಸಹೋದರ ಸಹೋದರಿಯರಿಗೆ ಶುಭಾಶಯಗಳು.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ