ಒಂದು ಒಳ್ಳೆಯ ನುಡಿ - 199

ಒಂದು ಒಳ್ಳೆಯ ನುಡಿ - 199

* ದೃಢ ನಿಶ್ಚಯ, ಸಂಕಲ್ಪ ಯಾವಾತನಿಗಿದೆಯೋ ಆತ ಎಂದೂ ಸೋಲಲಾರ. ಸತ್ಯಕ್ಕೆ ತಲೆಬಾಗಿ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವ ಧರ್ಮಾತ್ಮನೂ, ಸಜ್ಜನ ಬಂಧುವೂ ಆಗಿರುತ್ತಾನೆ.

* ಗಾಳಿ, ನೀರು, ಆಹಾರ, ಇರಲೊಂದು ಸೂರು ಮುಖ್ಯವಾಗಿಬೇಕು. ಜೀವಿಗಳ ಬದುಕಿಗೆ ಆಹಾರ ಅತಿ ಅವಶ್ಯ. ಕಷ್ಟ ಪಟ್ಟು ಬೆವರಿಳಿಸಿ ಹಗಲಿರುಳು ದುಡಿದು, ಈ ಪ್ರಕೃತಿ ವಿಕೋಪದೆಡೆಯಲ್ಲಿಯೂ ನಮ್ಮ ತುತ್ತಿನ ಚೀಲ ತುಂಬಿಸಲು ಶ್ರಮಿಸುವ ನಮ್ಮೆಲ್ಲಾ ಶ್ರಮಿಕ ಬಂಧುಗಳಾದ ಅನ್ನದಾತರಿಗೆ ಕೃತಜ್ಞತೆ ಸಲ್ಲಿಸೋಣ.

* ಅಧಿಕಾರ ಎನ್ನುವುದು ಕೆಲವು ಜನರನ್ನು ಸಭ್ಯರನ್ನಾಗಿ ರೂಪಿಸಬಹುದು. ಸ್ಥಾನದ ಅಮಲನ್ನು ತಲೆಗೇರಿಸಿಕೊಂಡು ಮೆರೆದಾಡುವವರು ಎಲ್ಲಾ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಸಭ್ಯತೆಯ ಎಲ್ಲೆ ಮೀರುವರು. ಅವರಿಗೆ ಹಿರಿಯರು-ಕಿರಿಯರು ಎಂಬ ಯಾವುದೇ ಭೇದಭಾವವಿಲ್ಲ. ಕುಳಿತ ಆಸನವೊಂದೇ ಶಿರದಲ್ಲಿರುವುದು. ನಾವು ನಾವಾಗಿದ್ದರೆ ಚಂದ ಅಲ್ಲವೇ? ದೇವರ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.

* ಓರ್ವ ಬರಹಗಾರ, ಸಾಹಿತಿ, ಕವಿಯು ಸಮಾಜಕ್ಕೆ ನೀಡುವ ಕೊಡುಗೆ ಭಾಷಾ ಚೌಕಟ್ಟು, ಸೌಂದರ್ಯ, ಮನೋರಂಜನೆ, ಲೋಕಪ್ರಜ್ಞೆ. ಅನುಭವಗಳೆಂಬ ಪದ ಸಾಲುಗಳ ಸಾಗರ. ಕಿರಿಯ ಬರಹಗಾರರಿಗೆ ಪ್ರೋತ್ಸಾಹ, ಧೈರ್ಯ. ಬದುಕಿನ ಮೌಲ್ಯಗಳ ತಳಪಾಯದ ಗಟ್ಟಿತನ.

* ನಮ್ಮ ಹಲ್ಲು ಮತ್ತು ನಾಲಿಗೆಯಿಂದ ಸಹ ನಾವು ಪಾಠ ಕಲಿಯಬಹುದು. ೩೨ ಹಲ್ಲುಗಳ ಮಧ್ಯೆಯಿರುವ ನಾಲಿಗೆ ಸ್ವಲ್ಪವಾದರೂ ಗಾಯಮಾಡಿಕೊಳ್ಳದೆ ಹಲ್ಲುಗಳೆಡೆಯಲ್ಲಿ ಹೇಗಿರುತ್ತದೆಯೋ, ಹಾಗೆಯೇ ನಾವು ಶತ್ರುಗಳ ಮಧ್ಯೆ ಇದ್ದರೂ ಸಹ ಯಾವುದಕ್ಕೂ ಬಲಿಯಾಗದೆ ಸುರಕ್ಷಿತವಾಗಿರಲು ಕಲಿಯಬೇಕು.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ