ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು…

ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು…

ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು ತಪ್ಪನ್ನು ತಿದ್ದಿ ಮುಂದೆ ಆಗದ ಹಾಗೆ ನೋಡಿಕೊಳ್ಳುತ್ತಾನೋ ಅವನು ಜಾಣ. ಗೊತ್ತಿದ್ದೂ ಮತ್ತೆ ಮತ್ತೆ ತಪ್ಪುಗಳನ್ನು ಎಸಗುವವ ಮೂರ್ಖರ ಸಾಲಿಗೆ ಸೇರುವವ. ತನ್ನ *ಭವಿಷ್ಯ*ಕ್ಕೆ ತಾನೇ ಕಲ್ಲು ಹಾಕಿಕೊಂಡ ಹಾಗೆ.

ಸಣ್ಣಪುಟ್ಟ ತಪ್ಪುಗಳು ಆಗಿಹೋದಾಗ ಒಪ್ಪಿ ಕ್ಷಮೆ ಕೇಳೋಣ. ಇಲ್ಲದಿದ್ದರೆ *ಸ್ನೇಹ*ವನ್ನೇ ಕಳೆದುಕೊಳ್ಳಬೇಕಾದೀತು. ಪರಿಣಾಮ ನಾವು ಒಂಟಿಯಾಗಿ, ಏಕಾಂಗಿಯಾಗಿ ಜೀವಿಸಬೇಕಷ್ಟೆ. ಒಂಟಿತನ ಎಂಬುದು ಒಂದು ಶಾಪವಿದ್ದಂತೆ, ಅದರಷ್ಟು ಹಿಂಸೆ ಬೇರೊಂದಿಲ್ಲ. ಒಮ್ಮೆ ಕಳೆದು ಹೋದ ಸ್ನೇಹಿತರನ್ನು ಮತ್ತೆ ಸಂಪಾದಿಸಲು ಬಹಳ ಕಷ್ಟ. ನಮ್ಮ ಮೇಲೆ ಅವರಿಗೆ ಬೆಳೆದ ಅಪನಂಬಿಕೆ ಅಷ್ಟು ಬೇಗನೇ ಹೊರಟು ಹೋಗಲಾರದು. ಆದುದರಿಂದ ನಮ್ಮ ನಡೆ-ನುಡಿ ನೇರವಾಗಿರಲಿ, ಪ್ರಾಮಾಣಿಕವಾಗಿರಲಿ. ತಪ್ಪಾದರೆ ಕ್ಷಮೆ ಕೇಳಿದರಾಯಿತು ಎಂಬ ದೊಡ್ಡ ದೊಡ್ಡ ಮಾತುಗಳು ಬೇಡ. ಗೊತ್ತಿದ್ದು ಗೊತ್ತಿದ್ದು ಮಾಡುವ ತಪ್ಪುಗಳನ್ನು ಮಾಡದಿರೋಣ. ಅನಿರೀಕ್ಷಿತ, ಅನಿವಾರ್ಯ ಕಾರಣಗಳಿಂದ ಆದ ತಪ್ಪುಗಳಿಗೆ ಮಾತ್ರ ಕ್ಷಮೆ ಇರಲಿ. 'ಅಮೃತವೂ ಅಧಿಕವಾದರೆ ವಿಷ' ಎಂಬ ಗಾದೆ ಇದೆ. ಅದರಂತೆ ಯಾವುದನ್ನೂ ವಿಪರೀತ ಮಾಡಲು ಹೋಗಬೇಡಿರಿ. ನಿಮ್ಮ ಕಾರ್ಯಕ್ಕೆ ನೀವೇ ಪಶ್ಚಾತ್ತಾಪ ಪಡುವ ದಿನಗಳು ಬಂದಾವು. ಎಚ್ಚರವಿರಲಿ.

-ರತ್ನಾ ಭಟ್ ತಲಂಜೇರಿ