ಒಂದು ಒಳ್ಳೆಯ ನುಡಿ - 200

ಒಂದು ಒಳ್ಳೆಯ ನುಡಿ - 200

* ದನದ ಕೆಚ್ಚಲಲ್ಲಿ ಹಾಲಿದೆ. ಆದರೆ ಅದನ್ನು ಹಿಂಡುವ ಕೆಲಸವಾಗಬೇಕು. ಅದಕ್ಕೂ ಸೋಮಾರಿತನವಾದರೆ ಹೇಗೆ? ಪ್ಯಾಕೆಟ್ ಹಾಲು ಹಣ ಕೊಟ್ಟರೆ ಮನೆ ಬಾಗಿಲಿಗೆ ತಂದು ಕೊಡುತ್ತಾರೆಂಬ ಧೋರಣೆ ಬದಲಾಗಬೇಕು. ಕಷ್ಟ ಪಡಬೇಕು. ಕಷ್ಟಪಡದೆ ಸುಖ ಎಲ್ಲಿಂದ? ಹಸುವಿಗೆ ಮೇವು, ನೀರು, ಪೋಷಕಾಂಶಭರಿತ ತಿನಿಸು, ನೀಡಿ, ಹಾಲು ಹಿಂಡುವ ಕೆಲಸ ಮಾಡಿದಂತೆಯೆ ನಮ್ಮ ಬದುಕು ಸಹ. ಅದನ್ನೇ ಮಾಡದೆ ಸುಖಾಸುಮ್ಮನೆ ತಿಂದುಂಡು ಕಾಲಕಳೆಯುವೆ ಎನ್ನುವುದು ಎಷ್ಟು ಸರಿ? ಯೋಚಿಸಿ ಹೆಜ್ಜೆಯಿಡಬೇಕು, ಜೀವನ ಸಾಗಿಸಬೇಕು.

* ಯಾವುದರಲ್ಲಿಯೂ ತೃಪ್ತಿ ಎಂಬುದು ಇಲ್ಲದ ಮನುಜ ಸದಾ ಬಡವನೇ ಆಗಿರುತ್ತಾನೆ. ಎಷ್ಟೇ ಐಶ್ವರ್ಯ ಅವನಲ್ಲಿದ್ದರೂ ಮತ್ತಷ್ಟು ಬೇಕೆಂಬ ಹಂಬಲ ಅವನದಾಗಿರುತ್ತದೆ .ಆತನ ಮನಸ್ಸು ಚಂಚಲವಾಗಿರುತ್ತದೆ. ಇರುವುದರಲ್ಲಿಯೇ ಸಂತಸದ ಬದುಕು ನಡೆಸುವವನೇ ಶ್ರೀಮಂತನಾಗಿರುತ್ತಾನೆ, ಆತನಿಗೆ ಸಂತೃಪ್ತಿ ಇರುತ್ತದೆ.

* ತಾವರೆ ಎಲೆಯ ಮೇಲಿನ ಹನಿ ನೋಡಿದಾಗ ಅಮೂಲ್ಯವಾದ ಮುತ್ತಿನಂತೆ ಕಾಣುತ್ತದೆ. ಬೇಕೆಂದು ಬಯಸಿ ತರಲು ನೋಡಿದರೆ ಕೈಗೆ ಸಿಗದು. ದೂರದ ಬೆಟ್ಟ ನುಣ್ಣಗೆ ಅಲ್ಲವೇ? ಕಣ್ಣಿಗೆ ಕಂಡದ್ದೆಲ್ಲ ಸತ್ಯವಾಗಲು ಸಾಧ್ಯವಿಲ್ಲ. ಹತ್ತಿರದಿಂದ ನೋಡಿದಾಗ ಮಾತ್ರ ಗುಣ-ದೋಷಗಳನ್ನರಿಯಬಹುದು.

* ತೋಚಿದಂತೆ ಮೊದಮೊದಲು ಗೀಚಬೇಕು. ಅನಂತರ ಆಲೋಚಿಸಿ, ಅರ್ಥೈಸಿ ಬರೆಯಲು ಕಲಿಯಬೇಕು. ಪುಸ್ತಕಗಳನ್ನು ಬಹಳಷ್ಟು ಓದಿ, ವಿಷಯ ಸಂಗ್ರಹಿಸಬೇಕು. ತಿಳಿದವರು ತಪ್ಪುಗಳನ್ನು ಹೇಳಿದಾಗ, ತಾಳ್ಮೆಯಿಂದ ಕೇಳಿ ತಿದ್ದಿಕೊಳ್ಳುವ ಮನೋಭಾವವಿರಬೇಕು. ಮುಖ್ಯವಾಗಿ ಸ್ವಪ್ರಯತ್ನ, ಸತತ ಸಾಧನೆಯಿರಬೇಕು. ಆಗ ಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಿ ಸಾಹಿತಿ ಅನಿಸಿಕೊಳ್ಳಬಹುದು.

* ಮೌನ ಎನ್ನುವ ಗುಣವು ಆಭರಣವಿದ್ದಂತೆ. ಮೌನದಿಂದ ಕಲಹವಿಲ್ಲ. ಹದವರಿತು, ತೂಕದಿಂದ ಸಮಯ, ಸಂದರ್ಭ ನೋಡಿ ಮಾತನಾಡುವ ಕಲೆಯಿಂದ ಮನಸ್ತಾಪವಿಲ್ಲ.

* ಸ್ನೇಹ ಮತ್ತು ಸೌಜನ್ಯ ಮನುಷ್ಯನಿಗೆ ಹೊನ್ನಿನ ಆಭರಣಗಳಿದ್ದಂತೆ. ಬಹಳ ಬೆಲೆ ಬಾಳುವುದು, ಮೌಲ್ಯದಲ್ಲಿ ತೂಕವುಳ್ಳದ್ದು. ಇದರಿಂದ ಲೋಕವನ್ನೇ ಗೆಲ್ಲಬಹುದು. ಬಲದಿಂದ ಸಾಧಿಸಲಾಗದ್ದನ್ನು ಪ್ರೀತಿ, ಸ್ನೇಹ, ಸೌಜನ್ಯದಿಂದ ಸಾಧಿಸಬಹುದು.

* ೨೦೨೨ಕ್ಕೆ ವಿದಾಯ-,೨೦೨೩ರ ಬೆಳಗಿಗೆ ಸ್ವಾಗತ. ಕಳೆದ ಕಷ್ಟಗಳ ಮರೆತು, ಸುಖದ ದಿನಗಳನ್ನು ಮೆಲುಕು ಹಾಕುತ ಮುಂದೆ ಏನು, ಹೇಗೆ, ಎತ್ತ ಎಂಬ ನವನವೀನ ಯೋಜನೆ ಮತ್ತು ಯೋಚನೆಗಳೊಂದಿಗೆ ಹೆಜ್ಜೆ ಹಾಕೋಣ ಬಂಧುಗಳೇ...

ಎಲ್ಲರಿಗೂ ೨೦೨೩ರ ಶುಭದೊಸಗೆ

-ರತ್ನಾ ಕೆ ಭಟ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ