ಒಂದು ಒಳ್ಳೆಯ ನುಡಿ - 203
* ಹೊರಗಿನ ಆಡಂಬರ ಅಲಂಕಾರ ಎಲ್ಲ ಇತರರನ್ನು ಮೆಚ್ಚಿಸಲು ಮಾತ್ರ. ಮನದೊಳಗಿನ ಅಲಂಕಾರ, ವ್ಯವಹಾರ ಶಾಶ್ವತ. ಉಸಿರು ನಿಂತ ಮೇಲೂ ನೆನಪಿಸುವರು.
* ಯಾವುದೇ ಕಾಯಿಲೆ ಬಂದರೂ ಒಂದಿಲ್ಲೊಂದು ಔಷಧವಿದೆ. ಆದರೆ ಮೂರ್ಖತನವೆಂಬ ರೋಗಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಮೂರ್ಖರು ಇತರರು ಹೇಳಿದ ಮಾತನ್ನು ಕೇಳಲು ತಯಾರಿಲ್ಲ. ಅವರದ್ದೇ ಆದ ಧೋರಣೆಯಿಂದ ಹೊರಗೆ ಬರಲಾರರು. ತಮ್ಮದೇ ಸರಿಯೆಂದು ವಾದಿಸುವರು. ಸತ್ಯಾಸತ್ಯತೆಯನ್ನು ಅವಲೋಕಿಸುವ ಮನೋಭಾವವಿಲ್ಲದವರು. ವ್ಯವಹರಿಸುವಾಗ ಜಾಗ್ರತೆ ಬೇಕು.
* ಸಹನೆ, ತಾಳ್ಮೆ, ಕಾಯುವಿಕೆ ಎನ್ನುವುದು ಶಿರದ ಕಿರೀಟದಂತೆ. ಸ್ವಲ್ಪ ವಾಲಿದರೂ ಆಯತಪ್ಪಿ ಕಿರೀಟ ಕೆಳಗೆ ಬೀಳಬಹುದು. ನಾವು ಸಹ ಜೀವನದ ದಾರಿಯಲ್ಲಿ ತಾಳ್ಮೆ ತೆಗೆದುಕೊಂಡಷ್ಟೂ ಬದುಕು ಸುಂದರ, ಮನಸ್ಸಿಗೆ ನೆಮ್ಮದಿ. ತಾಳ್ಮೆ ತಪ್ಪಿದರೆ ಎಲ್ಲಾ ಕಲಸುಮೇಲೋಗರ, ಬದುಕು ಅಯೋಮಯ. ಸಮಯವನ್ನು ನಾವು ಹೊಂದಾಣಿಕೆ ಮಾಡಿಕೊಂಡರೆ ಸಮಯವೂ ಕೂಡ ನಮಗೆ ಸಹಕರಿಸುತ್ತದೆ. ತಾಳ್ಮೆ ನಿರಂತರ ಜೊತೆಗಿರಲಿ ಸ್ನೇಹಿತರೇ.
* ಇತರರಿಗೆ ನೋವು ಕೊಡುವುದು ಸರಿಯಲ್ಲ.ಅದು ನಮ್ಮ ಮೂಲಭೂತ ಹಕ್ಕಾಗಲಿ, ಕರ್ತವ್ಯವಾಗಲಿ ಅಲ್ಲ. ಮಾತಿನಲ್ಲಾಗಲಿ, ಕೃತಿಯಲ್ಲಾಗಲಿ ಚುಚ್ಚಿ ಘಾಸಿಗೊಳಿಸುವುದು ಕೆಲವರ ಸ್ವಭಾವ. ಮನಸ್ಸಿಗಾದ ಗಾಯ ಮಾಸಲು ಬಹಳ ದಿನಗಳೇ ಬೇಕಾಗುತ್ತದೆ. ಎರಡೇಟು ಹೊಡೆದರೂ ಮಾಸಿ ಹೋಗಬಹುದು. ಆದರೆ ಮಾತಿನೇಟು ಮಾಸದು. ಸ್ನೇಹಿತರೇ ಯೋಚಿಸಿ ಮಾತನಾಡೋಣ, ಆಗದೇ?
* ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ, ಗುರು ಬೆನ್ನ ಹಿಂದೆ ಗುರಿ ಕಣ್ಣ ಮುಂದೆ ಇರಬೇಕೆಂದು ಯುವಶಕ್ತಿಯನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದರ ಮಾತು ಸ್ಫೂರ್ತಿದಾಯಕವಲ್ಲವೇ? ಬದುಕಿನ ಹಾದಿಯಲ್ಲಿ ಅಳವಡಿಸಿಕೊಳ್ಳೋಣ.
* ನಮ್ಮ ಮಕ್ಕಳನ್ನು ಪುಸ್ತಕದ ಹುಳಗಳನ್ನಾಗಿ ಮಾಡದೆ, ಮಸ್ತಕಕ್ಕೆ ಸಾಣೆ ಹಚ್ಚುವಂತಹ ಬುದ್ಧಿವಂತಿಕೆ, ಜಾಣ್ಮೆಯನ್ನು ನೀಡಿ ಬೆಳೆಸಬೇಕು. ವಾಸ್ತವತೆಯನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳೇ ಮನೆ, ಮನ ಹಾಗೂ ದೇಶದ ಆಸ್ತಿ. ಈಗಿನ ಐಷಾರಾಮಿ ವ್ಯವಸ್ಥೆ, ಬೇಗನೆ ಹೆಸರು ಬರಬೇಕೆಂಬ ತುಡಿತ, ವೇದಿಕೆಗಳಲ್ಲಿ ಮೆರೆಸಿ ಬಾಲ್ಯದ ಖುಷಿಗಳನ್ನು ಕುಂಠಿತಗೊಳಿಸುವ ಕೆಲಸಕ್ಕೆ ಹಚ್ಚದೆ, ನಿಜವಾದ ಬದುಕಿಗೆ ಬೇಕಾದ ಶಿಕ್ಷಣ ನೀಡಲು ಹೆತ್ತವರು ಮನಸ್ಸು ಮಾಡಬೇಕು. ಇರುವ ಒಂದೆರಡು ಮಕ್ಕಳನ್ನು ಕಳಕೊಳ್ಳುವ ಸ್ಥಿತಿ ಬಾರದಂತೆ ಎಚ್ಚರಿಕೆ ವಹಿಸಲೇ ಬೇಕು.
* ಹೊಟ್ಟೆಯ ಹಸಿವಿಗೆ ಅನ್ನವನ್ನೇ ಉಣ್ಣಬೇಕು, ಚಿನ್ನವನ್ನು ತಿನ್ನಲಾಗದು ಅಲ್ಲವೇ? ಹೊನ್ನು ಬೇಕು, ಬೇಡ ಎನ್ನಲಾಗದು. ಆದರೆ ಇತಿಮಿತಿಯರಿತು ಸಂಗ್ರಹಿಸಬೇಕು. ಮೊದಲು ಉದರದ ಚಿಂತೆ, ಆಮೇಲೆ ಉಳಿದರೆ ಇತರ ವಸ್ತುಗಳ ಬಗ್ಗೆ ಆಲೋಚನೆ.
* ಜಗದ ಜೀವರ ಜೀವವಾದ, ಲೋಕಕ್ಕೆ ಬೆಳಕು ನೀಡುವ ಸೂರ್ಯದೇವನು ಪಥವನ್ನು ಬದಲಾಯಿಸಿ ಧನುವಿಂದ ಮಕರರಾಶಿಗೆ ಪ್ರವೇಶಿಸುವ ಸಂಕ್ರಮಣ ಸಮಯ. ಈ ಪರ್ವ ಕಾಲದಲ್ಲಿ ಹಳೆಯದನ್ನು ಮರೆತು ಹೊಸದನ್ನು ಅರಸುತ್ತಾ ಬಾಳ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರೋಣ. ಏನೇ ಆಗಲಿ, ಏನೇ ಹೋಗಲಿ ಸೂರ್ಯ ಚಂದ್ರ ಆಕಾಶಕಾಯಗಳು ತಮ್ಮ ಕಾಯಕವನ್ನು ಬಹಳ ನಿಷ್ಠೆಯಿಂದ ಮಾಡುವಂತೆ, ನಾವು ಸಹ ಅದೇ ದಾರಿಯಲ್ಲಿ ಸಾಗೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು